ನಾನು ಒಂದು ಸಾರಿ ಹೇಳಿದ್ರೆ ನೂರು ಸಲ ಹೇಳಿದಂಗೆ..
ಈ ಡೈಲಾಗ್`ಗೆ ತಮಿಳಲ್ಲಿ ಸಿಗೋ ಫೋರ್ಸ್, ಯಾವ ಭಾಷೆಯಲ್ಲೂ ಸಿಗಲ್ಲ. ತಮಿಳಿನಲ್ಲಿ ಎಷ್ಟು ಜನ ಕಲಾವಿದರು ಸ್ಟಾರ್ ಆಗಿದ್ದರೂ, ಇವತ್ತಿಗೂ ನಂ.1 ರಜನಿಕಾಂತ್. ಸದ್ಯಕ್ಕೆ ಇಂಡಿಯಾದಲ್ಲಿ ಸೂಪರ್ ಸ್ಟಾರ್ ಪದಕ್ಕೆ ಅನ್ವರ್ಥವಾಗಿರುವ ಏಕೈಕ ಸ್ಟಾರ್. ವಯಸ್ಸು 73. ಮಾತೃಭಾಷೆ ಮರಾಠಿ. ಹುಟ್ಟಿದ್ದು-ಬೆಳೆದಿದ್ದು ಕನ್ನಡದ ನೆಲದಲ್ಲಿ. ಸ್ಟಾರ್ ಆಗಿ ಮೆರೆದಿದ್ದು ತಮಿಳುನಾಡಿನಲ್ಲಿ. ಹೀಗೆ ಜರ್ನಿ ಸಾಗಿಸಿರುವ ರಜನಿಕಾಂತ್ ಈಗ ಅಭಿನಯಕ್ಕೇ ಗುಡ್ ಬೈ ಹೇಳಲಿದ್ದಾರೆ ಎಂಬ ಸುದ್ದಿಯೊಂದು ಹರಿದಾಡುತ್ತಿದೆ.
ರಜನಿಕಾಂತ್ ಜೈಲರ್ ಸಿನಿಮಾ ಬಳಿಕ ಖ್ಯಾತ ನಿರ್ದೇಶಕ ಲೋಕೇಶ್ ಕನಗರಾಜ್ ಸಾರಥ್ಯ ಮೂಡಿ ಬರುತ್ತಿರುವ ಹೊಸ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಲೋಕೇಶ್ ಕನಗರಾಜ್ ಸಿನಿಮಾ ಬಳಿಕ ರಜನಿಕಾಂತ್ ನಿವೃತ್ತಿ ಪಡೆಯುತ್ತಿದ್ದಾರೆ ಎನ್ನುವ ಸುದ್ದಿ ತಮಿಳು ಸಿನಿಮಾರಂಗದಲ್ಲಿ ವೈರಲ್ ಆಗಿದೆ. ಲೋಕೇಶ್ ಕನಗರಾಜ್ ಅವರ ಜೊತೆಗಿನ ಸಿನಿಮಾವೇ ರಜನಿಕಾಂತ್ ಅವರ ಕೊನೆಯ ಸಿನಿಮಾ ಆಗಲಿದೆ ಎಂದ ನಿರ್ದೇಶಕ ಮಿಸ್ಕಿನ್ ಅವರ ಮಾತು ಇಷ್ಟೆಲ್ಲ ಸುದ್ದಿಯಾಗಲು ಕಾರಣ.
ರಜನಿಕಾಂತ್ ಅವರಿಗೆ ಈಗ 73 ವರ್ಷ. ರಜನಿಕಾಂತ್ ಅವರು ಅಣ್ಣಾತೆ ಸಿನಿಮಾ ಮಾಡಿದಾಗಲೇ ನಿವೃತ್ತರಾಗಲಿದ್ದಾರೆ ಎಂಬ ಸುದ್ದಿಯಿತ್ತು. ಆದರೆ ಆಗಲಿಲ್ಲ. ಈಗ ಜೈಲರ್, ಲಾಲ್ ಸಲಾಂ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಜೈಲರ್ ಚಿತ್ರದಲ್ಲಿ ಕನ್ನಡದಿಂದ ಶಿವಣ್ಣ, ಮಲಯಾಳಂನಿಂದ ಮೋಹನ್ ಲಾಲ್ ಸೇರಿದಂತೆ ದಿಗ್ಗಜರು ನಟಿಸಿದ್ದರೆ, ಲಾಲ್ ಸಲಾಂನಲ್ಲಿ ಕಪಿಲ್ ದೇವ್ (ಹೌದು, ಕಪಿಲ್ ದೇವ್) ಕಾಣಿಸಿಕೊಂಡಿದ್ದಾರೆ. ಇದೆಲ್ಲದರ ಜೊತೆ ಲೋಗೇಶ್ ಕನಗರಾಜ್ ಅವರ ಸಿನಿಮಾ ಕೂಡಾ ಇದೆ. ಇನ್ನೂ ಹಲವು ಚಿತ್ರಗಳನ್ನು ಒಪ್ಪಿಕೊಂಡಿದ್ದಾರೆ.
ಈ ಹಿಂದೆಯೂ ಒಮ್ಮೆ ಹೀಗೆಯೇ ಆಗಿತ್ತು. ಬಾಬಾ ಚಿತ್ರದ ಸೋಲಿನ ನಂತರ ಕೆಲವು ವರ್ಷ ಬ್ರೇಕ್ ತೆಗೆದುಕೊಂಡಿದ್ದರು ರಜನಿ. ಚಂದ್ರಮುಖಿ ಎಂಬ ಬ್ಲಾಕ್ ಬಸ್ಟರ್ ಕೊಟ್ಟು ವಾಪಸ್ ಆಗಿದ್ದರು. ಇನ್ನು ರಜನಿಕಾಂತ್ ಚಿತ್ರಗಳು ಆವರೇಜ್ ಹಿಟ್ ಎಂದರೆ 300 ಕೋಟಿ ಬಿಸಿನೆಸ್ ಮಾಡುತ್ತವೆ. ಫ್ಲಾಪ್ ಚಿತ್ರಗಳೂ 200 ಕೋಟಿ ದುಡಿಯುತ್ತವೆ. ಸೂಪರ್ ಹಿಟ್ ಚಿತ್ರಗಳ ಬಿಸಿನೆಸ್ 500 ಕೋಟಿ ದಾಟುತ್ತದೆ. ಇವೆಲ್ಲ ನೋಡಿದರೆ ಸದ್ಯಕ್ಕಂತೂ ನಿವೃತ್ತಿ ಇಲ್ಲ. ಡಿಸೈಡ್ ಮಾಡೋದು ರಜನಿಕಾಂತ್.



