ಗೋಲ್ಡನ್ ಸ್ಟಾರ್. ಈ ಬಿರುದು ಹೊಂದಿರುವ ಇಂಡಿಯನ್ ಸಿನಿಮಾದ ಏಕೈಕ ನಟ ಗಣೇಶ್. ಗಣೇಶ್ ಅವರಿಗೆ ಪ್ರೇಕ್ಷಕರನ್ನು ಹೊಟ್ಟೆ ಹುಣ್ಣಾಗಿಸುವಂತೆ ನಗಿಸುತ್ತಾರೆ. ಕರುಳು ಕಿವುಚಿ ಬರುವಂತೆ ಅಳಿಸಿಯೂ ಅಳಿಸ್ತಾರೆ. ನಗುನಗುತ್ತಲೇ ಅಳಿಸುವ ಅಪರೂಪದ ಕಲಾವಿದ ಗಣೇಶ್ ಅವರಿಗೆ ಈ ಗೋಲ್ಡನ್ ಸ್ಟಾರ್ ಬಿರುದು ಸಿಕ್ಕಿದ್ದು ಹೇಗೆ? ಕೊಟ್ಟವರು ಯಾರು? ಈ ಪ್ರಶ್ನೆ ಉದ್ಭವವಾದರೂ ಕರೆಕ್ಟ್ ಕಾರಣ ಗೊತ್ತಾಗಿರಲಿಲ್ಲ. ಇದಕ್ಕೆ ಕೊನೆಗೆ ಗಣೇಶ್ ಅವರೇ ಉತ್ತರ ಕೊಟ್ಟಿದ್ದಾರೆ, ಕಪಿಲ್ ಶರ್ಮಾ ಶೋನಲ್ಲಿ. ಅಂದಹಾಗೆ ಕಪಿಲ್ ಶರ್ಮಾ ಶೋನಲ್ಲಿ ಕಾಣಿಸಿಕೊಂಡ ಕನ್ನಡದ ಎರಡನೇ ನಟ ಗಣೇಶ್. ಮೊದಲಿಗೆ ಈ ಶೋಗೆ ಹೋಗಿದ್ದವರು ಕಿಚ್ಚ ಸುದೀಪ್ ಮಾತ್ರ.


ಗಣೇಶ್ ಚಿತ್ರರಂಗಕ್ಕೆ ಮೊದಲಿಗೆ ನಾಯಕರಾಗಿ ಬಂದವರಲ್ಲ. ಟಪೋರಿ, ಹುಡುಗಿಗಾಗಿ, ಬಾ ಬಾರೋ ರಸಿಕ, ಅಹಂ ಪ್ರೇಮಾಸ್ಮಿ, ಮ್ಯಾಜಿಕ್ ಅಜ್ಜಿ, ಮಸಾಲಾ, ಅಮೃತಧಾರೆ.. ಮೊದಲಾದ ಚಿತ್ರಗಳಲ್ಲಿ ಸಣ್ಣ ಸಣ್ಣ ಪಾತ್ರಗಳಲ್ಲಿ ನಟಿಸಿ ಗುರುತಿಸಿಕೊಂಡಿದ್ದವರು. ಹೀರೋ ಆಗಿದ್ದು ಚೆಲ್ಲಾಟ ಚಿತ್ರದಿಂದ. ಚೆಲ್ಲಾಟ, ಮುಂಗಾರು ಮಳೆ, ಹುಡುಗಾಟ, ಚೆಲುವಿನ ಚಿತ್ತಾರ, ಕೃಷ್ಣ, ಗಾಳಿಪಟ.. ಹೀಗೆ ಹಿಟ್ ಆದ ಚಿತ್ರಗಳೇ ಎಲ್ಲ. ಮುಂಗಾರು ಮಳೆಯಂತೂ ಚಿತ್ರರಂಗದಲ್ಲಿ ಸೃಷ್ಟಿಸಿದ್ದು ಹೊಸ ಇತಿಹಾಸ. ಅದರ ಜೊತೆ ಸಂಭಾವನೆಯಲ್ಲೂ ಗಣೇಶ್ ದಾಖಲೆ ಬರೆದವರೇ. ಕನ್ನಡದಲ್ಲಿ ಮೊದಲ ಬಾರಿಗೆ ಕೋಟಿ ಸಂಭಾವನೆ ಪಡೆದ ಮೊದಲ ನಟ ಎಂಬ ಖ್ಯಾತಿ ಗಣೇಶ್ ಅವರ ಹೆಸರಲ್ಲಿದೆ. ಹೀಗೆ ದಾಖಲೆಗಳ ಮೇಲೆ ದಾಖಲೆ ಸೃಷ್ಟಿಸಿಯೇ ಗೋಲ್ಡನ್ ಸ್ಟಾರ್ ಆದ ಕಥೆಯನ್ನು ಗಣೇಶ್ ಕಪಿಲ್ ಶರ್ಮಾ ಶೋನಲ್ಲಿ ಬಿಚ್ಚಿಟ್ಟಿದ್ದಾರೆ.



