ಒಂದು ಟೀಸರ್ ಹೊರಬಂದಿತ್ತು. ಆದಿಪುರುಷ್ ಚಿತ್ರದ್ದು. ರಾಮ, ರಾವಣ, ಸೀತೆ, ಹನುಮಂತನ ಗೆಟಪ್ಪು, ವೇಷ ಕಂಡು ಜನ ಉರಿದುಬಿದ್ದಿದ್ದರು. ಉಗಿದು ಉಪ್ಪಾಕಿದ್ದರು. ಶ್ರೀರಾಮನನ್ನು ನಿಶ್ಯಕ್ತನಂತೆ, ರಾವಣನನ್ನು ಮುಸ್ಲಿಂ ನಾಯಕನಂತೆ, ಸೀತೆಯನ್ನು ಗ್ಲಾಮರಸ್ ಆಗಿ, ಹನುಮಂತನನ್ನು ಚೀಂಪಾಂಜಿಯಂತೆ ತೋರಿಸಿ, ಇದನ್ನು ಕ್ರಿಯೇಟಿವಿಟಿ ಎಂದು ಹೇಳಿಕೊಂಡಿದ್ದ ಆದಿಪುರುಷ್ ಟೀಂ, ಈ ರೀತಿಯ ಪ್ರತಿರೋಧವನ್ನು ಊಹಿಸಿರಲಿಲ್ಲ. ನೂರಾರು ಕೋಟಿ ಬಜೆಟ್ಟಿನ ಆದಿಪುರುಷ್ ನಂತರ ಇಡೀ ಸಿನಿಮಾ ಕೆಲಸವನ್ನು ಮತ್ತೆ ಮಾಡಿತು. ಈಗ ಟ್ರೇಲರ್ ಬಂದಿದೆ.
ಬಾಹುಬಲಿ ಪ್ರಭಾಸ್, ಕೃತಿ ಸನೂನ್, ಸೈಫ್ ಅಲಿಖಾನ್… ಹೀಗೆ ಭರ್ಜರಿ ತಾರಾಗಣವೇ ಇರುವ ಚಿತ್ರ ಆದಿಪುರುಷ್. ರಾಮಾಯಣವನ್ನು ಆನಿಮೇಷನ್ ಮೂಲಕ, ಗ್ರಾಫಿಕ್ಸ್‍ನಲ್ಲಿಯೇ ಹೆಚ್ಚು ಕಟ್ಟಿಕೊಟ್ಟಿರುವ ಸಿನಿಮಾ. ಪ್ರಭಾಸ್ ಶ್ರೀರಾಮನಾಗಿ, ಕೃತಿ ಸನೂನ್ ಸೀತೆಯಾಗಿ ಹಾಗೂ ಸೈಫ್ ಅಲಿ ಖಾನ್ ರಾವಣನಾಗಿ ನಟಿಸಿರುವ ಚಿತ್ರದ ಟೀಸರ್ ಈ ಹಿಂದೆ ರಿಲೀಸ್ ಆಗಿತ್ತು. ಟೀಸರ್ ನೋಡಿದವರು ಚಿತ್ರದ ನಿರ್ಮಾಪಕರು, ನಿರ್ದೇಶಕರ ಜನ್ಮ ಜಾಲಾಡಿದ್ದರು. ಪ್ರೇಕ್ಷಕರ ಆಕ್ರೋಶದ ಹಿನ್ನೆಲೆಯಲ್ಲಿ ಚಿತ್ರದ ಬಿಡುಗಡೆಯನ್ನೂ ಮುಂದಕ್ಕೆ ಹಾಕಿ, ಚಿತ್ರದ ಆನಿಮೇಷನ್ ಕೆಲಸಗಳನ್ನು, ತಪ್ಪುಗಳನ್ನು ತಿದ್ದಿಕೊಳ್ಳೋ ಕೆಲಸಕ್ಕೆ ಮುಂದಾಗಿದ್ದರು.
ಈಗ ಟ್ರೇಲರ್ ರಿಲೀಸ್ ಆಗಿದೆ. ರಾಮಾಯಣದ ಕಥೆಯಾದ್ದರಿಂದ, ಕಥೆಯ ಬಗ್ಗೆ ಕುತೂಹಲ ಇಲ್ಲ. ಹೇಗೆ ಹೇಳಲಿದ್ದಾರೆ ಎಂಬುದಷ್ಟೇ ಕುತೂಹಲ. ಟೀಸರಿಗೆ ಹೋಲಿಸಿದರೆ ಟ್ರೇಲರ್ ಓಕೆ ಎನ್ನುವಂತಿದೆ. ಆದರೆ ಇದು ಗ್ರಾಫಿಕ್ಸ್ ಸ್ಕ್ರೀನ್ ಎನ್ನುವುದು ಎದ್ದು ಕಾಣುವಂತಿದೆ. ಹಾಲಿವುಡ್ ಬಿಡಿ, ಇದೇ ಪ್ರಭಾಸ್ ಅಭಿನಯದ ಬಾಹುಬಲಿ, ಆರ್.ಆರ್.ಆರ್. ನೋದಿವರಿಗೆ ಯಾವುದು ಗ್ರಾಫಿಕ್ಸ್.. ಯಾವುದು ಕ್ಯಾಮೆರಾ ಕೈಚಳಕ ಎನ್ನುವುದು ಗೊತ್ತಾಗದಂತಹ ಪ್ರೊಡಕ್ಷನ್ ವರ್ಕ್ ಇತ್ತು. ಆದರೆ ಆದಿಪುರುಷ್‍ನಲ್ಲಿ ಹಾಗಲ್ಲ. ಇಷ್ಟಿದ್ದರೂ ಟೀಸರಿಗೆ ಹೋಲಿಸಿದರೆ ಉತ್ತಮ ಎನ್ನುವ ಅಭಿಪ್ರಾಯ ಪ್ರೇಕ್ಷಕರದ್ದು.
ಆದರೆ ಒಂದಂತೂ ಸತ್ಯ. ಆದಿಪುರುಷ್ ಚಿತ್ರದ ಟ್ರೇಲರ್ ನೋಡಿದವರಿಗೂ ಅರ್ಥವಾಗುವಂತದ್ದೇನೆಂದರೆ ಚಿತ್ರದಲ್ಲಿ ಜೀವವಿಲ್ಲ. ಮತ್ತೊಂದು ಫ್ಲಾಪ್ ಚಿತ್ರಕ್ಕೆ ಪ್ರಭಾಸ್ ಸಿದ್ಧರಾಗಬೇಕಿದೆ.



