ಮಗ ನಿರ್ದೇಶಕನಾಗುವುದು ಹಾಗೂ ಆ ಚಿತ್ರಕ್ಕೆ ತಂದೆಯೇ ಸಂಗೀತ ನಿರ್ದೇಶಕನಾಗುವುದು ಅಪರೂಪ. ಅಪ್ಪ ಕನ್ನಡದ ಖ್ಯಾತ ಸಂಗೀತ ನಿರ್ದೇಶಕ. ಪ್ರಖ್ಯಾತ ಹಾಸ್ಯನಟ. ನಿರ್ದೇಶಕರೂ ಹೌದು. ಈಗ ಅಪ್ಪನಂತೆಯೇ ಮಗ ಎನ್ನುವುದು ಸುಳ್ಳೇನಲ್ಲ. ಮೊದಲಿಗೆ ತಂದೆಯಂತೆಯೇ ಸಂಗೀತ ನಿರ್ದೇಶನಕ್ಕಿಳಿದಿದ್ದ ಸುರಾಗ್ ಸಾಧುಕೋಕಿಲ, ಇದೀಗ ಅಪ್ಪನಂತೆಯೇ ನಿರ್ದೇಶನಕ್ಕೂ ಇಳಿದಿದ್ದಾರೆ. ಸುರಾಗ್ ಡೈರೆಕ್ಟ್ ಮಾಡುತ್ತಿರುವ ಮೊದಲ ಸಿನಿಮಾದಲ್ಲಿ ತಮಿಳಿನ ಜನಪ್ರಿಯ ಹಾಸ್ಯ ನಟ ಯೋಗಿ ಬಾಬು ನಟಿಸುತ್ತಿದ್ದಾರೆ.
ವಿಶೇಷವೆಂದರೆ, ಬಹಳ ದಿನಗಳ ನಂತರ ಸಾಧು ಕೋಕಿಲ ಅವರು ಸಂಗೀತ ನಿರ್ದೇಶನಕ್ಕೆ ಮರಳಿದ್ದಾರೆ. ಪುತ್ರ ಸುರಾಗ್ ನಿರ್ದೇಶನ ಮಾಡುತ್ತಿರುವ ಚೊಚ್ಚಲ ಸಿನಿಮಾಕ್ಕೆ ಸಾಧು ಅವರು ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ.
ಸುರಾಗ್ ಈಗಾಗಲೇ ಸಂಗೀತ ನಿರ್ದೇಶಕರಾಗಿ ಗುರುತಿಸಿಕೊಂಡಿದ್ದಾರೆ. ಅತಿರಥ, ಶಿವಾರ್ಜುನ ಸಿನಿಮಾಗಳಿಗೆ ಮ್ಯೂಸಿಕ್ ನೀಡಿದ್ದ ಸುರಾಗ್, ಉಪೇಂದ್ರ ಅವರ ಯುಐ ಚಿತ್ರಕ್ಕೆ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡುತ್ತಿದ್ದಾರೆ. ಇದೀಗ ಯೋಗಿ ಬಾಬುಗೆ ಡೈರೆಕ್ಷನ್ ಮಾಡುವ ಮೂಲಕ ಸ್ವತಂತ್ರ ನಿರ್ದೇಶಕರಾಗಿದ್ದಾರೆ. ಅಂದಹಾಗೆ ಸುರಾಗ್ ಈ ಚಿತ್ರದಲ್ಲಿ ಕಾಮಿಡಿ ಥ್ರಿಲ್ಲರ್ ಕಥೆ ಹೇಳುತ್ತಿದ್ದಾರಂತೆ. ಈಗ ಅಪ್ಪನಂತೆಯೇ ಸಂಗೀತ ನಿರ್ದೇಶಕರಾಗಿದ್ದಾಯ್ತು, ಡೈರೆಕ್ಟರ್ ಕೂಡಾ ಆಗುತ್ತಿದ್ದಾರೆ. ಇನ್ನು ನಟನಾಗುವುದು ಬಾಕಿ ಇದೆ.



