ಕೈ ಬಿಡ್ತಿಯಾ.. ಹಿಡ್ಕೊಂಡಿರೋ ಕೈ ಬಿಡ್ತಿಯಾ ಅಂದ್ರೆ..
ಸ್ವರ್ಗ ರಪ್ ಅಂತಾ ಪಾಸ್ ಆಯ್ತು..
ಆತುರದಲ್ಲಿ ಕೆಲಸ ಆಗುವಾಗ ಬಟ್ಟೆ ಬಿಚ್ಚೋಕೆ ಒಬ್ರಿಗೊಬ್ರು ಸಹಾಯ ಮಾಡ್ತಾರೆ.. ಕೆಲ್ಸ ಆದ್ಮೇಲೆ ಯಾರೂ ಬರಲ್ಲ. ನಮ್ ಬಟ್ಟೆ ನಾವೇ ಹಾಕ್ಕೊಬೇಕು.
ಗುಳಿಗೆ ಸಿದ್ದ ಒಳಗೊಳಗೇ ಮಾಡ್ದ ಅನ್ನಂಗೆ.. ಫ್ರೆಂಡ್‍ಶಿಪ್ ಹೆಂಚಲ್ಲಿ ಲವ್ ದೋಸೆ ಹುಯ್ಯೋ ಅಂಗಿದೆ..
ಮ್ಯಾಥ್ಸ್ ಜಸ್ಟಲ್ಲಿ ಹೋಗಿದೆ.. ಮಿಕ್ಕವು.. ಕಂಪ್ಲೀಟ್ ಹೋಗಿದೆ..
ಹೀಗೆ ಕಚಗುಳಿ ಇಡುವ ಸಂಭಾಷಣೆ ಮೂಲಕವೇ ಗೆದ್ದಿತ್ತು ಆ ಸಿನಿಮಾ. ಆ ಚಿತ್ರದಿಂದ ರಕ್ಷಿತ್ ಶೆಟ್ಟಿ ಸಿಂಪಲ್ ಸ್ಟಾರ್ ಆದರೆ, ಶ್ವೇತಾ ಶ್ರೀವಾತ್ಸವ್ ಸಿಂಪಲ್ ಹೀರೋಯಿನ್ ಆಗಿ ಗೆದ್ದರು. ಚಿತ್ರದಲ್ಲಿ ಎರಡು ಲವ್ ಸ್ಟೋರಿ ಇದ್ದರೂ, ಅದೇ ಹೀರೋ ಹೀರೋಯಿನ್‍ನ್ನೇ ತೋರಿಸಿ ಪ್ರೇಕ್ಷಕರನ್ನು ಮೆಚ್ಚಿಸಿದ್ದ ಸುನಿ ಲೆಕ್ಕಾಚಾರ ವರ್ಕೌಟ್ ಆಗಿತ್ತು. ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿಯ 10 ವರ್ಷದ ಹಿಂದಿನ ಕಥೆ ಇದು.


10 ವರ್ಷದ ಹಿಂದೆ ಸುನಿ ಸಿನಿಮಾ ಮಾಡಬೇಕು ಎಂದುಕೊಂಡಾಗ 3 ಕೋಟಿ ಬಂಡವಾಳ ಹಾಕ್ತೇನೆ ಎಂದು ನಿರ್ಮಾಪಕರು ಮುಂದೆ ಬಂದಿದ್ರಂತೆ. ಆದರೆ.. ಕೊನೆಗೆ 50 ಲಕ್ಷಕ್ಕೆ ಆದರೆ ಸಿನಿಮಾ ಮಾಡೋಣ ಎಂದಾಗ.. 50 ಲಕ್ಷಕ್ಕೆ ಅನ್ನೋದಾದ್ರೆ ನಾವೇ ಪ್ರೊಡ್ಯೂಸರು ಕೂಡಾ ಆಗೋಣ ಎಂದುಕೊಂಡು ನಿರ್ಮಾಣಕ್ಕಿಳಿದವರು ಸುನಿ. ಕೊನೆಗೆ ಸಿನಿಮಾ ರಿಲೀಸ್ ಹೊತ್ತಿಗೆ ಬಜೆಟ್ಟು ಒಂದು ಕೋಟಿ ದಾಟಿತ್ತು ಅನ್ನೋದು ಬೇರೆ ಕಥೆ. ಆದರೆ ಸಿನಿಮಾ ಒಂದು ಲೆಕ್ಕದ ಪ್ರಕಾರ 10 ಕೋಟಿಗೂ ಹೆಚ್ಚು ಬ್ಯುಸಿನೆಸ್ ಮಾಡಿತ್ತು.
ಚಿತ್ರದ 10ನೇ ವರ್ಷದ ಸಂಭ್ರಮವನ್ನು ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ ಸೃಷ್ಟಿಕರ್ತ ನೆನಪಿಸಿಕೊಂಡು ಸಂಭ್ರಮಿಸಿದ್ದಾರೆ. ರಕ್ಷಿತ್ ಶೆಟ್ಟಿ, ಶ್ವೇತಾ ಶ್ರೀವಾತ್ಸವ್ ಸೇರಿದಂತೆ ಚಿತ್ರತಂಡ ನೆನಪಿಸಿಕೊಂಡಿದೆ. ಒಟ್ಟಿನಲ್ಲಿ ಸಿಂಪಲ್ಲಾಗೇ ಒಬ್ಬ ಡೈರೆಕ್ಟರ್ ಮತ್ತು ಹೀರೋ ಹುಟ್ಟಿಕೊಂಡ ಸಿನಿಮಾ ಇದು.
ಈ ಸಿನಿಮಾದ ಇನ್ನೂ ಒಂದು ಖ್ಯಾತಿಯೂ ಇದೆ. ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡ್ ಸೃಷ್ಟಿಸಿಕೊಂಡು ಮೊದಲ ಸಿನಿಮಾ ಎನ್ನಬಹುದಾದ ಸಿನಿಮಾ ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ. ಪೋಲಿತನದ ಸಂಭಾಷಣೆಯನ್ನೂ ಸಂಸಾರ ಸಮೇತರಾಗಿ ನೋಡುವಂತೆ ಮಾಡಿದ್ದು ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ ಸಾಧನೆ.



