ಸಿನಿಮಾ ನಟರು ಸಿನಿಮಾ ನಟರಷ್ಟೇ ಆಗಿದ್ದಾಗ ಇರುವ ಅನುಕೂಲಗಳೇ ಬೇರೆ. ರಾಜಕೀಯಕ್ಕೆ ಬಂದ ಮೇಲೆ ಅವರು ಕ್ಲೀನ್ ಆಗಿರೋಕೆ ಸಾಧ್ಯವೇ ಇಲ್ಲ. ಯಾರಾಗಿದ್ದರೂ ಸರಿ.. ಯಾವ ಮನೆಯವರಾಗಿದ್ದರೂ ಸರಿ.. ಸಿನಿಮಾದಲ್ಲಷ್ಟೇ ಇದ್ದಾಗ ಯಾರೂ ಕಲಾವಿದರ ಜಾತಿ ನೋಡಲ್ಲ. ರಾಜಕೀಯಕ್ಕೆ ಬಂದ್ರೋ ಜಾತಿ ಕೇಳ್ತಾರೆ. ರಾಜಕೀಯಕ್ಕೆ ಬರುವ ಮೊದಲು ಅಂತಸ್ತು ನೋಡಲ್ಲ. ಅಷ್ಟೇ ಯಾಕೆ, ಸಿನಿಮಾದಲ್ಲಷ್ಟೇ ಇದ್ದಾಗ ಜನರೇ ಕಾಸು ಕೊಟ್ಟು ತಲೆ ಮೇಲೆ ಹೊತ್ತು ಮೆರೆಸ್ತಾರೆ. ಆದರೆ.. ರಾಜಕೀಯಕ್ಕೆ ಬಂದ್ರೆ ಅದೇ ನಟರು ದುಡ್ಡು ಕಕ್ಕಲೇಬೇಕು. ಸಿನಿಮಾ & ಪಾಲಿಟಿಕ್ಸ್ ನಡುವಿನ ವ್ಯತ್ಯಾಸ ಇದೇ..
ಶಿವ ರಾಜ್ ಕುಮಾರ್ ಅವರು ರಾಜಕೀಯ ಪ್ರವೇಶ ಮಾಡಿದ್ದೇ ತಡ, ಟೀಕೆಗಳು ಕೂಡಾ ಜೋರಾಗಿವೆ. ಕೇವಲ ಶಿವರಾಜ್ ಕುಮಾರ್ ಅವರಿಗೆ ಮಾತ್ರ ಅಲ್ಲ, ದುನಿಯಾ ವಿಜಯ್, ಬಿಜೆಪಿಗೆ ಬೆಂಬಲ ನೀಡಿರುವ ಸುದೀಪ್ ಅವರಿಗೂ ಇಂತಹ ಪ್ರಶ್ನೆಗಳು ಎದುರಾಗಿವೆ. ಆದರೆ ಶಿವ ರಾಜ್ ಕುಮಾರ್ ವಿಷಯವನ್ನ ಅಭಿಮಾನಿ ದೇವರುಗಳೂ ತುಸು ಗಂಭೀರವಾಗಿಯೇ ತೆಗೆದುಕೊಂಡಿದ್ದಾರೆ. ಅಂತಹುದರಲ್ಲಿ ರಾಜಕೀಯ ನಾಯಕರ ಮಾತು ಕೇಳಬೇಕೆ..? ಹೀಗೆ ಪ್ರಶ್ನೆ ಮಾಡಿದ್ದವರಲ್ಲಿ ಶಿವರಾಜ್ ಕುಮಾರ್ ಅವರನ್ನು ಪ್ರಶ್ನಿಸುತ್ತಿರುವವರಿಗೇನು ಕಡಿಮೆ ಇಲ್ಲ.
ಶಿವರಾಜ್ ಕುಮಾರ್ ಅವರನ್ನು ಲೇವಡಿ ಮಾಡಿ ಪೋಸ್ಟ್ ಮಾಡಿದ್ದ ಪ್ರಶಾಂತ್ ಸಂಬರಗಿ ಈಗ ಪ್ರಶ್ನೆಗಳ ಸರಮಾಲೆಯನ್ನೇ ಮುಂದಿಟ್ಟಿದ್ದಾರೆ.
‘ದಿ ಕಶ್ಮೀರ್ ಫೈಲ್ಸ್’, ‘ದಿ ಕೇರಳ ಸ್ಟೋರಿ’ ಸಿನಿಮಾಗಳ ನಿಷೇಧಕ್ಕೆ ಕಾಂಗ್ರೆಸ್ ಯತ್ನಿಸಿದ್ದು ಅದರ ಬಗ್ಗೆ ನಿಮ್ಮ ಅಭಿಪ್ರಾಯವೇನು? ಈ ರಾಜ್ಯಕ್ಕೆ ನಿಮ್ಮ ಕೊಡುಗೆ ಏನು? ಡಿಕೆ ಶಿವಕುಮಾರ್ ಅವರ ಭ್ರಷ್ಟಾಚಾರ ಮತ್ತು ಆದಾಯ ತೆರಿಗೆ ಪ್ರಕರಣದ ಬಗ್ಗೆ ನಿಮ್ಮ ಅಭಿಪ್ರಾಯವೇನು? 2020 ರಲ್ಲಿ ಸ್ಯಾಂಡಲ್ ಹುಡ್ ಡ್ರಗ್ ವಿಷಯದಲ್ಲಿ ನೀವು ಏಕೆ ಮೌನವಾಗಿದ್ದಿರಿ? ಕರ್ನಾಟಕವನ್ನು ಮಾದಕ ಮುಕ್ತ ಮಾಡಲು ನಮ್ಮ ಯುವ ಜನರಿಗೆ ತಮ್ಮ ಸಂದೇಶವೇನು? ಹೀಗೆ ಸುಮಾರು ಹತ್ತು ಪ್ರಶ್ನೆಗಳನ್ನು ಸಂಬರ್ಗಿ, ಶಿವಣ್ಣನಿಗೆ ಕೇಳಿದ್ದಾರೆ.
ಈ ಬಗ್ಗೆ ಮಾತನಾಡಿದ ಶಿವಣ್ಣ ಪ್ರಶಾಂತ್ ಸಂಬರ್ಗಿ ಹೇಳಿಕೆಗೆ ಪುಲ್ ಸ್ಟಾಪ್ ಹಾಕಬೇಕು. ಅದೆಲ್ಲ ಅವಶ್ಯಕತೆ ಇಲ್ಲ. ದೇಶದಲ್ಲಿ ಸಾವಿರ ಜನ ಸಾವಿರ ಮಾತನಾಡುತ್ತಾರೆ, ಅದನ್ನೆಲ್ಲ ಕೇರ್ ಮಾಡಿ ಬದುಕೊಕ್ಕಾಗಲ್ಲ. ಮನುಷ್ಯನ ಆತ್ಮಕ್ಕೆ ಏನು ಅನುಸುತ್ತೆ ಅದನ್ನ ಮಾಡಕೊಂಡು ಇದ್ದರೇನೆ ಮನುಷ್ಯ ಅನ್ನೊದು, ಸಂಬರ್ಗಿ ಹೇಳಿಕೆಯಿಂದ ನನಗೆ ನನ್ನ ಅಭಿಮಾನಿಗಳಿಗೆ ಯಾವುದೆ ರೀತಿ ಹರ್ಟ್ ಆಗಿಲ್ಲ, ಇಂತಹ ಹೇಳಿಕೆಗಳಿಗೆ ಕೇರ್ ಮಾಡೊಕ್ಕೆ ಹೋಗಬೇಡಿ. ಬೇರೆದವರ ಹೇಳಿಕೆಗೆ ನಾನು ಮಾತನಾಡಲ್ಲ, ನಿಮ್ಮನ್ನು ಚೆನ್ನಾಗಿ ನೊಡಿಕೊಳ್ಳುವ ವ್ಯಕ್ತಿಯನ್ನು ಆಯ್ಕೆ ಮಾಡಿ, ಒಳ್ಳೆ ಮನುಷ್ಯರನ್ನು ಗೆಲ್ಲಿಸಿ ಎಂದಿದ್ದಾರೆ.


ಎಷ್ಟು ದಿನ ಟ್ರೋಲ್ ಮಾಡ್ತೀರೋ ಮಾಡಿ, ನಾನು ಸಿದ್ದರಾಮಯ್ಯಗೆ ಬೆಂಬಲ ಕೊಟಿದ್ದಕ್ಕೆ ಹಲವರು ನನ್ನ ವಿರುದ್ಧ ತಿರುಗಿಬಿದ್ದಿದ್ದಾರೆ. ಇದನ್ನೂ ಫೇಸ್ ಮಾಡ್ತೇನೆ. ದುಡ್ಡು ಇಸ್ಕೊಂಡು ರಾಜಕೀಯಕ್ಕೆ ಬರೋ ಅಗತ್ಯ ನನಗಿಲ್ಲ. ನನ್ನ ಹತ್ತಿರ ಏನೂ ಹಣ ಇಲ್ವಾ.. ಎಂದು ತಿರುಗೇಟು ಕೊಟ್ಟಿದ್ದಾರೆ.
ಇಷ್ಟಕ್ಕೂ ಸಿದ್ದರಾಮಯ್ಯ ಪರ ನಿಂತಿದ್ದಕ್ಕೆ ಶಿವಣ್ಣ ಮೇಲೆ ಇಷ್ಟೆಲ್ಲ ನಿಂದನೆ, ದಾಳಿಗಳು ನಡೆಯುತ್ತಿವೆಯಾ.. ಹಾಗೇನಿಲ್ಲ. ಕಿಚ್ಚ ಸುದೀಪ್ ಅವರೂ ಇದಕ್ಕೆ ಹೊರತಾಗಿಲ್ಲ. ಕಿಚ್ಚ ಸುದೀಪ್, ಬಸವರಾಜ ಬೊಮ್ಮಾಯಿಗೆ ಬೆಂಬಲ ಘೋಷಿಸಿದಾಗ ವೈಯಕ್ತಿಕ ದಾಳಿ ಇನ್ನೂ ಜೋರಾಗಿತ್ತು. ಬಿಜೆಪಿಯವರ ಮುಖ ನೋಡಿ ಜನ ಬರಲ್ಲ, ಅದಕ್ಕೆ ಅವರು ಸಿನಿಮಾ ನಟರನ್ನು ಕರೆತರುತ್ತಿದ್ದಾರೆ ಎಂದು ಸ್ವತಃ ಸಿದ್ದರಾಮಯ್ಯ ಲೇವಡಿ ಮಾಡಿದ್ದರು. ಡಿಕೆ ಶಿವಕುಮಾರ್ ಕೂಡಾ ಮಾತನಾಡಿದ್ದರು. ಈಗ ಅದೇ ಶಿವಣ್ಣ ಅವರಿಗೂ ಎದುರಾಗಿದೆ. ರಾಜಕೀಯ ಅಂದ್ರೇನೇ ಹಾಗೆ ಶಿವಣ್ಣ.



