ಶಿವಣ್ಣ ಅವರಿಗೆ ತೆಲುಗು, ತಮಿಳು ಹೊಸದಲ್ಲ. ಹುಟ್ಟಿದ್ದು, ಓದಿದ್ದು, ಬೆಳೆದದ್ದು ಚೆನ್ನೈನಲ್ಲಿ. 125 ಸಿನಿಮಾ ಮಾಡಿದ ನಂತರ ಇದೀಗ ರಜನಿಕಾಂತ್ ಜೊತೆ ಜೈಲರ್ ಚಿತ್ರದಲ್ಲಿ, ವಿಶಾಲ್ ಜೊತೆ ಕ್ಯಾಪ್ಟನ್ ಮಿಲ್ಲರ್ ಚಿತ್ರದಲ್ಲಿ ನಟಿಸುತ್ತಿದ್ದಾರೆ. ತೆಲುಗಿನಲ್ಲಿ ಈ ಮೊದಲು ಗೌತಮಿ ಪುತ್ರ ಶಾತಕರ್ಣಿ ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ನಟಿಸಿದ್ದರು. ಇದೀಗ ಮತ್ತೊಮ್ಮೆ ತೆಲುಗಿಗೆ ಹೊರಟು ನಿಂತಿದ್ದಾರೆ. ಮತ್ತೊಮ್ಮೆ ಬಾಲಕೃಷ್ಣ ಜೊತೆ.
ಬಾಲಕೃಷ್ಣ ಮತ್ತು ಶಿವಣ್ಣ ಅವರದ್ದು ಕೇವಲ ನಟನೆಯ ಬಂಧುತ್ವವಲ್ಲ. ಅಣ್ಣ ತಮ್ಮಂದಿರಂತೆಯೇ ಇದ್ದಾರೆ. ಇದೀಗ ಬಾಲಕೃಷ್ಣ ಜೊತೆ ಬಿಗ್ ಬಜೆಟ್ ಸಿನಿಮಾದಲ್ಲಿ ನಟಿಸುವುದಾಗಿ ಘೋಷಿಸಿದ್ದಾರೆ.
ಈ ಹಿಂದೆ ಬಾಲಕೃಷ್ಣ ಗೌತಮಿ ಪುತ್ರ ಶಾತಕರ್ಣಿ ಸಿನಿಮಾ ಮಾಡಿದ್ದರು. ಆ ಐತಿಹಾಸಿಕ ಚಿತ್ರದಲ್ಲಿ ಶಿವಣ್ಣ ಅತಿಥಿ ನಟರಾಗಿ ನಟಿಸಿದ್ದರು. ಅದು ಬಾಲಯ್ಯ ಅವರ 100ನೇ ಸಿನಿಮಾ ಆಗಿತ್ತು ಎನ್ನುವುದೂ ವಿಶೇಷ. ಈಗ ಮತ್ತೊಮ್ಮೆ ಬಾಲಯ್ಯ ಜೊತೆ ನಟಿಸುವುದಕ್ಕೆ ಸಿದ್ಧ, ವೇದಿಕೆಯೂ ಸಿದ್ಧವಾಗಿದೆ ಎಂದು ಘೋಷಿಸಿರುವುದು ಶಿವರಾಜ್ ಕುಮಾರ್. ಇದೆಲ್ಲವೂ ನಡೆದದ್ದು ಎನ್‍ಟಿಆರ್ ಶತಮಾನೋತ್ಸವದ ಕಾರ್ಯಕ್ರಮದಲ್ಲಿ. ಆ ಕಾರ್ಯಕ್ರಮಕ್ಕೆ ಕನ್ನಡ ಚಿತ್ರರಂಗದಿಂದ ಅತಿಥಿಯಾಗಿ ಹೋಗಿದ್ದವರು ಶಿವಣ್ಣ. ಎನ್‍ಟಿಆರ್ ಜೊತೆಗಿನ ನೆನಪುಗಳನ್ನು ಹಂಚಿಕೊಂಡರು ಶಿವಣ್ಣ.


ಅಂದಹಾಗೆ ಶಿವಣ್ಣ ತಮಿಳಿನಲ್ಲಿ ಈಗ ರಜನಿಕಾಂತ್ ಜೊತೆ ಜೈಲರ್, ಕ್ಯಾಪ್ಟನ್ ಮಿಲ್ಲರ್ ಹಾಗೂ ತೆಲುಗಿನಲ್ಲಿ ರವಿತೇಜ ಚಿತ್ರದಲ್ಲೂ ನಟಿಸುತ್ತಿದ್ದಾರೆ. ಅಲ್ಲದೆ 45, ಕರಟಕ ದಮನಕ, ಭೈರತಿ ರಣಗಲ್, ಘೋಸ್ಟ್, ಸತ್ಯಮಂಗಲ, ಅಶ್ವತ್ಥಾಮ ಚಿತ್ರಗಳು ಚಿತ್ರೀಕರಣ ಹಂತದಲ್ಲಿವೆ.
ಶಿವಣ್ಣ ಮತ್ತು ತೆಲುಗು ಸಂಬಂಧ ಹೊಸದೇನೂ ಅಲ್ಲ. ಶಿವಣ್ಣ ಅವರ ವಜ್ರಕಾಯ ಚಿತ್ರದಲ್ಲಿ ರವಿತೇಜ ಬಂದು ಹಾಡಿ ಕುಣಿದಿದ್ದರು. ಶಿವಣ್ಣ ಕೂಡಾ ಅಷ್ಟೆ, ಹಲವು ತೆಲುಗು ಚಿತ್ರಗಳನ್ನು ಕರ್ನಾಟಕದಲ್ಲಿ ಪ್ರಚಾರ ಮಾಡಿದ್ದರು. ವೇದ ಚಿತ್ರವನ್ನು ತೆಲುಗಿನಲ್ಲಿ ಬಾಲಕೃಷ್ಣ ಪ್ರಚಾರ ಮಾಡಿದ್ದರು. ಇತ್ತೀಚೆಗೆ ರವಿತೇಜ ಅವರ ಟೈಗರ್ ನಾಗೇಶ್ವರ್ ರಾವ್ ಚಿತ್ರದ ಫಸ್ಟ್ ಲುಕ್`ಗೆ ಕನ್ನಡದಲ್ಲಿ ಶಿವಣ್ಣ ವಾಯ್ಸ್ ಕೊಟ್ಟಿದ್ದಾರೆ. ಹೀಗೆ.. ಈಗ ಮತ್ತೊಮ್ಮೆ ಶಿವಣ್ಣ-ಬಾಲಯ್ಯ ಜೋಡಿಗೆ ವೇದಿಕೆ ರೆಡಿಯಾಗಿದೆ.



