ಕನ್ನಡತಿಯಾದರೂ ಶಿಲ್ಪಾ ಶೆಟ್ಟಿ ಕನ್ನಡದಲ್ಲಿ ಮೊದಲಿಗೆ ನಟಿಸಿದ್ದು ಹಿಂದಿಯಲ್ಲಿ ಸ್ಟಾರ್ ನಟಿಯಾದ ಬಳಿಕವೇ. ಸರಿಸುಮಾರು 20 ವರ್ಷಗಳ ಹಿಂದೆ ಮೊದಲ ಬಾರಿಗೆ ಕನ್ನಡದಲ್ಲಿ ನಟಿಸಿದಾಗ ಶಿಲ್ಪಾಶೆಟ್ಟಿ ಜಮಾನ ಒಂದು ಹಂತಕ್ಕೆ ಕುಸಿಯುವ ಹಂತದಲ್ಲಿತ್ತು. ಆ ಸಮಯದಲ್ಲಿ ಶಿಲ್ಪಾಶೆಟ್ಟಿಗೆ ಚಾನ್ಸ್ ಕೊಟ್ಟವರು ರವಿಚಂದ್ರನ್. ಹಿಂದಿಯಲ್ಲೂ ಅಷ್ಟು ಗ್ಲಾಮರಸ್ ಆಗಿ ಕಾಣಿಸಿರಲಿಲ್ಲ, ರವಿಚಂದ್ರನ್ ಎಂಬ ಶೋಮ್ಯಾನ್ ಶಿಲ್ಪಾಶೆಟ್ಟಿಯವರನ್ನು ಅದ್ಭುತವಾಗಿ ತೋರಿಸಿದ್ದರು. ಅದು ಒಂದು ರೀತಿಯಲ್ಲಿ ಶಿಲ್ಪಾ ಶೆಟ್ಟಿಯವರಿಗೆ ಟರ್ನಿಂಗ್ ಪಾಯಿಂಟ್.ಪ್ರೀತ್ಸೋದ್ ತಪ್ಪಾ, ಒಂದಾಗೋಣ ಬಾ ಚಿತ್ರಗಳಲ್ಲಿ ಜೋಡಿಯಾಗಿ ಮಿಂಚಿದ್ದ.. ಗೆದ್ದಿದ್ದ ರವಿಚಂದ್ರನ್ ಮತ್ತು ಶಿಲ್ಪಾ ಶೆಟ್ಟಿ ಜೋಡಿ ಮತ್ತೊಮ್ಮೆ ತೆರೆ ಮೇಲೆ ಒಂದಾಗುವ ಸೂಚನೆ ಕೊಟ್ಟಿದೆ. ಜೋಗಿ ಪ್ರೇಮ್ ನಿರ್ದೇಶನದ ಕೆಡಿ ಚಿತ್ರದಲ್ಲಿ ರವಿಚಂದ್ರನ್ ಅಣ್ಣಯ್ಯಪ್ಪ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈ ಅಣ್ಣಯ್ಯಪ್ಪನಿಗೆ ಜೋಡಿಯಾಗಲಿದ್ದಾರಂತೆ ಶಿಲ್ಪಾ ಶೆಟ್ಟಿ.
1998ರಲ್ಲಿ ತೆರೆಕಂಡ ‘ಪ್ರಿತ್ಸೋದ್ ತಪ್ಪಾ’ ಸಿನಿಮಾದ ಮೂಲಕ ರವಿಚಂದ್ರನ್ ಅವರೊಂದಿಗೆ ಕನ್ನಡಕ್ಕೆ ಪಾದಾರ್ಪಣೆ ಮಾಡಿದ್ದ ಶಿಲ್ಪಾ ಶೆಟ್ಟಿ, 2003ರಲ್ಲಿ ‘ಒಂದಾಗೋಣ ಬಾ’ ಹಾಗೂ 2005ರಲ್ಲಿ ಉಪೇಂದ್ರ ನಟನೆಯ ‘ಆಟೋ ಶಂಕರ್’ ಚಿತ್ರದಲ್ಲಿ ನಟಿಸಿದ್ದರು. ಈಗ 17 ವರ್ಷಗಳ ನಂತರ ಅವರು ಮತ್ತೆ ಕನ್ನಡ ಸಿನಿಮಾ ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ನಿರ್ಮಾಣ ಸಂಸ್ಥೆ ಸದ್ಯದಲ್ಲೇ ಅನೌನ್ಸ್ ಮಾಡಲಿದೆ.


ಅಂದಹಾಗೆ ರವಿಚಂದ್ರನ್ ನಂತರ ಅವರ ಹಂತಕ್ಕೆ ನಿಲುಕುವ ಮಟ್ಟಿಗೆ ಶೋಮ್ಯಾನ್ ಎನಿಸಿಕೊಂಡವರು ಜೋಗಿ ಪ್ರೇಮ್. ರವಿಚಂದ್ರನ್ ಅವರಷ್ಟೇ ಅದ್ಭುತವಾಗಿ ಹಾಡುಗಳನ್ನು ಆಯ್ಕೆ ಮಾಡುವುದರಲ್ಲಿ ಹಾಗೂ ಅವುಗಳನ್ನು ಚಿತ್ರೀಕರಣ ಮಾಡುವುದರಲ್ಲಿ ಪ್ರೇಮ್ ಅವರಿಗೆ ಪ್ರೇಮ್ ಅವರೇ ಸಾಟಿ. ಈಗ ಅವರು ತೆರೆಯ ಮೇಲೆ ಘಟಾನುಘಟಿಗಳನ್ನೆಲ್ಲ ಒಂದು ಗೂಡಿಸುತ್ತಿದ್ದಾರೆ. ಕೆಡಿಯ ಕ್ರೇಜ್ ಜೋರಾಗುತ್ತಿದೆ.



