ಚಿತ್ರಕ್ಕೆ ಸಂಗೀತ ರವಿ ಬಸ್ರೂರು ಅವರದ್ದು. ಸಾಹಿತ್ಯವೂ ಅವರದ್ದೇ. ಸ್ವಾತಂತ್ರ್ಯ ಹೋರಾಟಗಾರನೊಬ್ಬನ ಮಗ ಭೂಗತ ದೊರೆಯಾಗುವ ಕಥೆ ಚಿತ್ರದಲ್ಲಿದೆ. ಉಪೇಂದ್ರ ಪ್ರಧಾನ ಪಾತ್ರದಲ್ಲಿ ನಟಿಸಿದ್ದು, ಪೊಲೀಸ್ ಆಫೀಸ್ ಪಾತ್ರದಲ್ಲಿ ಕಿಚ್ಚನ ಕರಾಮತ್ತಿದೆ. ಕಬ್ಜ.. ಹೇ ಕಬ್ಜ.. ದುನಿಯಾನೇ ಮಾಡ್ಕೋ ಕಬ್ಜ.. ಎಂದು ಶುರುವಾಗುವ ಹಾಡು, ಚಿತ್ರದ ಹೀರೋ ಭೂಗತಲೋಕವನ್ನು ಆಳುವುದಕ್ಕೆ ಹೊರಟಾಗ ಬರುವ ಗೀತೆ ಇರಬೇಕು. ಆದರೆ ಪದೇ ಪದೇ ಕೆಜಿಎಫ್ ಕಥೆಯೂ ನೆನಪಾದರೆ ಅಚ್ಚರಿಯೇನಿಲ್ಲ.




ಧೀರ ಧೀರ ಧೀರ ಈ ಸುಲ್ತಾನ.. ಹಾಗೂ ಸಲಾಂ ರಾಖಿ ಭಾಯ್ ಹಾಡುಗಳು ನೆನಪಾಗುತ್ತವೆ. ಏಕೆಂದರೆ ಆ ಹಾಡುಗಳಲ್ಲೂ ಇದೇ ರೀತಿಯ ವರ್ಷನ್ ಇತ್ತು. ಅಷ್ಟೇ ಅಲ್ಲ, ಕೆಜಿಎಫ್`ನಲ್ಲಿ ಧೀರ ಧೀರ ಧೀರ ಈ ಸುಲ್ತಾನ ಹಾಡಿಗೆ ಸಾಹಿತ್ಯ ಬರೆದಿದ್ದವರೂ ರವಿ ಬಸ್ರೂರು. ಸಲಾಂ ರಾಕಿ ಭಾಯ್ ಹಾಡಿಗೆ ನಾಗೇಂದ್ರ ಪ್ರಸಾದ್ ಸಾಹಿತ್ಯ ಬರೆದಿದ್ದರು. ಈಗ ಈ ಹಾಡಿಗೆ ಕೂಡಾ ಸಾಹಿತ್ಯ ಮತ್ತು ಸಂಗೀತ ರವಿ ಬಸ್ರೂರು ಅವರದ್ದೇ. ನಡುವೆ ಬರುವ ತಾಯಿ-ಮಗನ ದೃಶ್ಯವೂ ಕೆಜಿಎಫ್ ಚಿತ್ರವನ್ನು ನೆನಪಿಸುವಂತೆಯೇ ಇವೆ. ಆರ್.ಚಂದ್ರ, ಕಥೆ, ಚಿತ್ರಕಥೆ, ನಿರ್ದೇಶನದ ಜೊತೆ ನಿರ್ಮಾಣದ ಹೊಣೆಯನ್ನೂ ಹೊತ್ತಿದ್ದಾರೆ. ತಮ್ಮ ಕಬ್ಜ ಚಿತ್ರಕ್ಕೆ ಕೆಜಿಎಫ್ ಚಿತ್ರವೇ ಸ್ಫೂರ್ತಿ ಎಂದು ಯಾವ ಮುಚ್ಚುಮರೆಯಿಲ್ಲದೆ ಹೇಳಿರುವ ಚಂದ್ರು ಚಿತ್ರದ ಮೇಕೀಗ್ ಸ್ಟೈಲ್ ಕೂಡಾ ಹಾಗೆಯೇ ಇದೆ. ರವಿ ಬಸ್ರೂರು ಸಂಗೀತವೂ ಅಷ್ಟೆ, ಸೇಮ್ ಟು ಸೇಮ್. ಕಬ್ಜ ಇದೇ ಮಾರ್ಚ್ 17ರಂದು ಪುನೀತ್ ರಾಜಕುಮಾರ್ ಹುಟ್ಟುಹಬ್ಬದ ದಿನ ಬಿಡುಗಡೆಯಾಗುತ್ತಿದೆ.
ಬಸ್ರೂರು ಗ್ಯಾಂಗ್ : ಟೈಟಲ್ ಟ್ರ್ಯಾಕ್ ಹಾಡಿರುವುದು ಒಬ್ಬರಲ್ಲ. ಇದು ಗ್ರೂಪ್ ಸಾಂಗ್. ಹಲವರು ಹೇಳುವ ರೀತಿ ಇರುವ ಗ್ರೂಪ್ ಸಾಂಗಿನಲ್ಲಿ ಬಸ್ರೂರು ಗ್ಯಾಂಗ್ ಇದೆ ಎನ್ನುವುದು ವಿಶೇಷ. ಸಂಗೀತ, ಸಾಹಿತ್ಯವಷ್ಟೇ ಅಲ್ಲ, ಹಾಡಿನಲ್ಲೂ ಬಸ್ರೂರು ಇದ್ದಾರೆ. ರವಿ ಬಸ್ರೂರು, ವಿಜಯ್ ಬಸ್ರೂರು, ಕೃಷ್ಣ ಬಸ್ರೂರು, ಕೃಷ್ಣಮೂರ್ತಿ ಬಸ್ರೂರು, ರಾಮಕೃಷ್ಣ ಬಸ್ರೂರು, ಭಾರ್ಗವ್ ಬಸ್ರೂರು, ಪೂರ್ಣಚಂದ್ರ ಬಸ್ರೂರು, ನಿಖ್ಲಿ ಬಸ್ರೂರು… ಹೀಗೆ ಬಸ್ರೂರು ಗ್ಯಾಂಗ್ ಜೊತೆ ಚೇತನ್ ಹಂದಟ್ಟು, ನಾಗಪ್ರಕಾಶ್ ಕೋಟಾ, ಉಮೇಶ್ ಕಾರ್ಕಡ, ನಂದು ಜೆಕೆಎಲ್‍ಎಫ್, ಡಿಜೆ ರಾಜು ಕೂಡಾ ಹಾಡಿದ್ದಾರೆ. ಅವರೆಲ್ಲರ ಟೋಟಲ್ ಸಾಂಗ್ ಕಬ್ಜ ಟ್ರ್ಯಾಕ್.



