ಪಕ್ಷಕ್ಕೆ ಸೇರುವ ಪ್ರತಿಯೊಬ್ಬರಿಗೂ ಒಂದಲ್ಲ ಒಂದು ಟಾಸ್ಕ್ ಕೊಡುವುದು ಡಿಕೆ ಶಿವಕುಮಾರ್ ಸ್ಟೈಲ್. ವಹಿಸಿದ ಯಾವುದೇ ಜವಾಬ್ದಾರಿಯನ್ನಾಗಲೀ ನಿಭಾಯಿಸುವುದು ಸಾದುಕೋಕಿಲ ಸ್ಟೈಲು. ಕನ್ನಡ ಚಿತ್ರರಂಗದ ಕಾಮಿಡಿಯ ಅರಸ.. ಸಂಗೀತದಲ್ಲೂ ಮೋಡಿ ಮಾಡಿದ್ದ, ನಿರ್ದೇಶನದಲ್ಲೂ ಸೌಂಡು ಮಾಡಿದ್ದ ಸಾಧುಕೋಕಿಲ ಇದೀಗ ಅಧಿಕೃತವಾಗಿ ಕಾಂಗ್ರೆಸ್ ಸದಸ್ಯರಾಗಿದ್ದಾರೆ. ಸಾಧುಕೋಕಿಲ ತಮ್ಮ ರಾಜಕೀಯ ಪ್ರವೇಶವನ್ನು ಮುಚ್ಚಿಟ್ಟಿರಲಿಲ್ಲ. ಕಾಂಗ್ರೆಸ್ ಸೇರಲಿದ್ದಾರೆ ಎನ್ನುವುದು ಗೊತ್ತಿತ್ತು. ಕಾಂಗ್ರೆಸ್ನ ಹಲವು ಸಮಾರಂಭಗಳಲ್ಲಿ ಭಾಗವಹಿಸಿದ್ದರು ಕೂಡಾ. ಇದೀಗ ಅಧಿಕೃತವಾಗಿದೆ, ಅಷ್ಟೆ.
ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ಅಧ್ಯಕ್ಷ ಡಿ.ಕೆ. ಶಿವಕುಮಾರ್ ಪಕ್ಷದ ಶಲ್ಯವನ್ನು ಹಾಕಿ ಹಾಗೂ ಹೂಗುಚ್ಛ ನೀಡಿ ಸಾಧುಕೋಕಿಲ ಅವರನ್ನು ಪಕ್ಷಕ್ಕೆ ಬರಮಾಡಿಕೊಂಡಿದ್ದಾರೆ. ಕೆಪಿಸಿಸಿ ಸಾಂಸ್ಕೃತಿಕ ಘಟಕದ ಅಧ್ಯಕ್ಷರನ್ನಾಗಿ ಸಾಧು ಕೋಕಿಲ ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ.
ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಸಾಂಸ್ಕೃತಿಕ ಘಟಕದ ಅಧ್ಯಕ್ಷರನ್ನಾಗಿ ತಮ್ಮನ್ನು ತಕ್ಷಣದಿಂದ ಜಾರಿಗೆ ಬರುವಂತೆ ನೇಮಕ ಮಾಡಲಾಗಿದೆ. ತಾವುಗಳು ತಕ್ಷಣ ತಮಗೆ ನೀಡಿರುವ ಜವಾಬ್ದಾರಿಯನ್ನು ವಹಿಸಿಕೊಂಡು, ಕೆಪಿಸಿಸಿಯ ಮಾರ್ಗದರ್ಶನದಲ್ಲಿ ಮತ್ತು ರಾಜ್ಯದ ನಾಯಕರ ಸಹಕಾರದೊಂದಿಗೆ ಸಾಂಸ್ಕೃತಿಕ ಘಟಕದ ಮೂಲಕ ಸಂಘಟನೆಗೆ ಮುಂದಾಗಬೇಕು. ಆ ಮೂಲಕ ಪಕ್ಷದ ಬಲವರ್ಧನೆಯಲ್ಲಿ ಕಾರ್ಯೋನ್ಮುಖರಾಗಬೇಕು ಎಂದು ಕೋರಿದೆ. ಈ ದಿಸೆಯಲ್ಲಿ ತಮಗೆ ಹೆಚ್ಚಿನ ಯಶಸ್ಸು ಲಭಿಸಲೆಂದು ಶುಭ ಕೋರುತ್ತೇನೆ ಎಂದು ಕೆಪಿಸಿಸಿ ಆದೇಶ ಪತ್ರದಲ್ಲಿದೆ.


ಅಂದಹಾಗೆ ರಾಮ್ ಗೋಪಾಲ್ ವರ್ಮಾ ಹೇಳಿದ್ದ ಬಜೆಟ್ 20 ಕೋಟಿಯಂತೆ. ಅದು ಕೋವಿಡ್ ಫೈಲ್ಸ್ ಸಿನಿಮಾಕ್ಕಾಗಿ. ಆದರೆ ಸಾಧುಕೋಕಿಲ ಅವರಿಗೆ 5 ಕೋಟಿಯಲ್ಲಿ ಡಾಕ್ಯುಮೆಂಟರಿಗಳನ್ನು ಮುಗಿಸುವ ಹಾಗೂ ಜನರಿಗೆ ತಲುಪಿಸುವ ಹೊಣೆಗಾರಿಕೆಯನ್ನೂ ನೀಡಲಾಗಿದೆ.



