ಭಾರತೀಯರು ಭಾರತರತ್ನ ಪುರಸ್ಕಾರಕ್ಕೆ, ವಿಜ್ಞಾನಿಗಳು ನೊಬೆಲ್ ಪುರಸ್ಕಾರಕ್ಕೆ, ಸಾಹಿತಿಗಳು ಬೂಕರ್ ಅವಾರ್ಡ್‍ಗೆ, ಭಾರತೀಯ ಸಾಹಿತಿಗಳು ಜ್ಞಾನಪೀಠಕ್ಕೆ, ಪತ್ರಕರ್ತರು ಪುಲಿಟ್ಚರ್ ಪ್ರಶಸ್ತಿಗೆ ಯಾವ ರೀತಿ ಹಂಬಲಿಸುತ್ತಾರೋ.. ಹಾಗೆಯೇ ಸಿನಿಮಾ ಮಂದಿ ಆಸ್ಕರ್ ಪ್ರಶಸ್ತಿಗಾಗಿ ಎದುರು ನೋಡುತ್ತಾರೆ. ಚಿತ್ರಜಗತ್ತಿನ ಶ್ರೇಷ್ಟರೆಲ್ಲರಿಗೂ ಆಸ್ಕರ್ ಸಿಕ್ಕಿದೆಯಾ ಎಂದರೆ ಹಾಗೇನಿಲ್ಲ. ಪ್ರೇಕ್ಷಕರು ತುಂಬಾ ತುಂಬಾ ಇಷ್ಟಪಟ್ಟಿದ್ದ ಎಷ್ಟೋ ಕಲಾವಿದರು, ತಂತ್ರಜ್ಞರಿಗೆ ಆಸ್ಕರ್ ಪ್ರಶಸ್ತಿ ಸಿಕ್ಕಿಲ್ಲ. ಇಷ್ಟಿದ್ದರೂ ಆಸ್ಕರ್ ಪ್ರಶಸ್ತಿಗೆ ಇರುವ ಗೌರವ ಪ್ರತಿಷ್ಟೆಯೇ ಬೇರೆ. ಹಾಗೆ ನೋಡಿದರೆ ಅಲ್ಲಿ ಪ್ರಶಸ್ತಿಗಾಗಿ ಕೊಡುವುದು ಒಂದು ಟ್ರೋಫಿಯನ್ನಷ್ಟೇ, ಹಣವನ್ನಲ್ಲ. ಅದು ನಗದು ಪುರಸ್ಕಾರವಿಲ್ಲದ ಪ್ರಶಸ್ತಿ. ಇಂತಹ ಪ್ರಶಸ್ತಿ ಆರ್.ಆರ್.ಆರ್. ಚಿತ್ರಕ್ಕೆ ಸುಮ್ಮನೇ ಸಿಗಲಿಲ್ಲ.
ನಾಟು ನಾಟು ಹಾಡಿಗೆ ಸಂಗೀತ ನೀಡಿದಾಗ ಇದು ಬೇರೆಯದೇ ರೀತಿಯಲ್ಲಿದೆ ಎಂದು ಅನ್ನಿಸಿದ್ದು ಸುಳ್ಳಲ್ಲ. ಹಾಡಿನಲ್ಲಿದ್ದ ಜೋಷ್, ಸಾಹಿತ್ಯದಲ್ಲಿದ್ದ ಅರ್ಥ ಪ್ರೇಕ್ಷಕರಿಗೆ ಇಷ್ಟವಾಗಿತ್ತು. ಈ ಹಾಡಿನ ನೃತ್ಯವಿದೆಯಲ್ಲ, ಆ ಹಾಡಿಗೆ 50ಕ್ಕೂ ಹೆಚ್ಚು ಟೇಕ್ಸ್ ತೆಗೆದುಕೊಂಡಿದ್ದ ರಾಜಮೌಳಿ, ಕೇವಲ 2ನೇ ಟೇಕ್‍ನಲ್ಲಿ ಶೂಟ್ ಆಗಿದ್ದನ್ನೇ ಫೈನಲ್ ಆಗಿ ಉಳಿಸಿಕೊಂಡರಂತೆ. ಎರಡನೇ ಟೇಕ್ ಓಕೆ ಮಾಡಿದ್ದನ್ನು ಉಳಿಸಿಕೊಂಡ ಮೇಲೆ ಅಷ್ಟೊಂದು ಟೇಕ್ಸ್ ತೆಗೆದುಕೊಳ್ಳೋ ಅಗತ್ಯವೇನಿತ್ತು ಎಂದು ರಾಮ್ ಚರಣ್ ಮತ್ತು ಎನ್‍ಟಿಆರ್ ಇಬ್ಬರೂ ರಾಜಮೌಳಿಗೆ ಕಾಲೆಳೆಯುತ್ತಲೇ ಇರುತ್ತಾರೆ. ಅದು ಪರ್ಫೆಕ್ಷನ್`ಗಾಗಿ ಹಂಬಲಿಸುವವರ ಮಾತಾಯಿತು. ಈ ಆಸ್ಕರ್ ಸಿಗುವುದಕ್ಕೆ ಏನೇನೆಲ್ಲ ಮಾಡಬೇಕು..?
ಆಸ್ಕರ್ ಪ್ರಶಸ್ತಿಗಾಗಿ ಸಿನಿಮಾ ಪ್ರಮೋಟ್ ಮಾಡುವ ಬಗ್ಗೆ ಪ್ರಶಸ್ತಿ ಆಯೋಜನಾ ಸಂಸ್ಥೆಯಾದ ಅಕಾಡೆಮಿ ಮೋಷನ್ ಪಿಕ್ಚರ್ ಆರ್ಟ್ಸ್ ಆಂಡ್ ಸೈನ್ಸ್ ನವರು ಕಠಿಣವಾದ ನಿಯಮಗಳನ್ನು ಹಾಕಿದ್ದಾರೆ. ನಿಯಮಗಳ ಪುಸ್ತಕವೇ ಸುಮಾರು 40 ಪುಟಗಳಿಗೂ ದೊಡ್ಡದಿದೆಯಂತೆ. ಇಷ್ಟು ಕಠಿಣ ನಿಯಮಗಳು ಇರುವುದನ್ನೇ ಪಿಆರ್ ಸಂಸ್ಥೆಗಳು ತಮ್ಮ ಅನುಕೂಲಕ್ಕೆ ಬಳಸಿಕೊಳ್ಳುತ್ತಿದ್ದು, ಸಿನಿಮಾ ತಂಡಗಳಿಗೆ ಕಳ್ಳದಾರಿಯಲ್ಲಿ ಸಿನಿಮಾ ಪ್ರಮೋಟ್ ಮಾಡಿಕೊಡುತ್ತೇವೆಂದು ಹೇಳಿ, ಪ್ರಶಸ್ತಿಗೆ ನಾಮಿನೇಟ್ ಮಾಡಿಸುತ್ತೇವೆಂದು ಹೇಳಿ ಕೋಟ್ಯಂತರ ಹಣ ಪೀಕಿಸುತ್ತವೆ. ಇಷ್ಟಿದ್ದರೂ ದುಡ್ಡು ತೆಗೆದುಕೊಂಡರು ಈ ಪ್ರಶಸ್ತಿಗೆ ಅವರೆಲ್ಲ ನಾಮಿನೇಟ್ ಮಾಡಿಯೇ ಮಾಡುತ್ತಾರೆಂದು ಅರ್ಥವಲ್ಲ. ಅದಕ್ಕೂ ಮುನ್ನ ಆ ಸಿನಿಮಾ ಹಾಲಿವುಡ್ ಕ್ರಿಟಿಕ್ಸ್, ಗೋಲ್ಡನ್ ಗ್ಲೋಬ್ ಮೊದಲಾದ ಪ್ರಶಸ್ತಿಗಳಲ್ಲಿ ಹೆಜ್ಜೆ ಗುರುತು ಮೂಡಿಸಿರಬೇಕು. ಅದಕ್ಕೂ ಇಂಥದ್ದೇ ನಿಯಮಗಳಿವೆ. ನಾಟು ನಾಟು ಹಾಡು ಆ ಎರಡನ್ನೂ ಮಾಡಿತ್ತು.
ನಾನಾ ವಿಧದ ಪ್ರಚಾರದ ‘ಆಪ್ಷನ್’ಗಳನ್ನು ಈ ಸಂಸ್ಥೆಗಳು ನೀಡುತ್ತವೆ. ಪ್ರತಿಯೊಂದಕ್ಕೂ ಒಂದೊಂದು ಬೆಲೆ. ಆಯೋಜಕರು ಮಾಡುವ ಸ್ಕ್ರೀನಿಂಗ್ ಹೊರತಾಗಿ ಸಿನಿಮಾಕ್ಕೆ ಸಂಬಂಧಿಸಿದವರು ನೇರವಾಗಿ ತಮ್ಮ ಸಿನಿಮಾ ಪ್ರಚಾರ ಮಾಡುವಂತಿಲ್ಲವೆಂಬ ನಿಯಮ ಇದೆ. ಅದಕ್ಕಾಗಿ ಪಿಆರ್ ಸಂಸ್ಥೆಗಳು ಮೂರನೇ ವ್ಯಕ್ತಿಯ ಮನೆಯಲ್ಲಿ ಅಥವಾ ಐಶಾರಾಮಿ ಹೋಟೆಲ್ಗಳಲ್ಲಿ ವೈನ್ ಆಂಡ್ ಡೈನ್ ಪಾರ್ಟಿ ಮಾಡಿಸಿ ಅಲ್ಲಿಗೆ ಆಸ್ಕರ್ ವೋಟರ್ಗಳನ್ನು ಆಹ್ವಾನಿಸಿ ಅಲ್ಲಿ ಸಿನಿಮಾ ಪ್ರದರ್ಶನ ಆಯೋಜಿಸಿ ಸಿನಿಮಾ ಬಗ್ಗೆ ಹಿಂಬಾಗಿಲ ಮೂಲಕ ಪ್ರಚಾರ ಮಾಡಿಸುತ್ತವೆ. ಪಾರ್ಟಿಯ ಖರ್ಚು, ಸಿನಿಮಾ ಪ್ರದರ್ಶನದ ಖರ್ಚಿನ ಜೊತೆಗೆ ಯಾರ ಹೆಸರಲ್ಲಿ ಪಾರ್ಟಿ ಆಯೋಜನೆಗೊಳ್ಳುತ್ತದೆಯೋ ಆ ವ್ಯಕ್ತಿಗೆ ಭರಪೂರ ಹಣವನ್ನೂ ಚಿತ್ರತಂಡವೇ ನೀಡಬೇಕು. ಪಿಆರ್ ಫೀಸ್ ಪ್ರತ್ಯೇಕ.
ಜ್ಯೂರಿಗಳಿಗೆ, ವೋಟು ಮಾಡುವವರಿಗೆ ಚಿತ್ರತಂಡ ನೇರವಾಗಿ ಕಾಂಟ್ಯಾಕ್ಟ್ ಮಾಡುವಂತಿಲ್ಲ. ಅದು ನಿಯಮಕ್ಕೆ ವಿರುದ್ಧ. ಆದರೆ ಆ ಕೆಲಸವನ್ನು ಮಾಡುವುದಕ್ಕೆ ಇರುವ ಪಿಆರ್ ಏಜೆನ್ಸಿಗಳು ಅದಕ್ಕೆ ಸಂಬಂಧಪಟ್ಟ ವಿಡಿಯೊ, ಮೆಸೇಜ್‍ಗಳನ್ನು ತಲುಪಿಸಬಹುದು. ಮೇಯ್ಲ್ ಕೂಡಾ ಮಾಡಬಹುದು. ನಮ್ಮ ಸಿನಿಮಾ ಏಕೆ ಅದ್ಭುತ ಎಂಬ ಬಗ್ಗೆ ಹೇಳಿಕೊಳ್ಳಬಹುದು. ಅದಕ್ಕೆ ಪ್ರತ್ಯೇಕ ಖರ್ಚೂ ಇದೆ. ಅದನ್ನು ಆ ಸಂಸ್ಥೆಗಳಿಗೆ ಚಿತ್ರತಂಡದವರೇ ಕೊಡಬೇಕು. ಅದೆಲ್ಲವನ್ನೂ ಮಾಡಿ, ಸಿನಿಮಾ ಪ್ರಚಾರ ಮಾಡಿ, ಪ್ರಮೋಟ್ ಮಾಡಿಯೇ ಈ ಅವಾರ್ಡ್ ಪಡೆದಿದ್ದಾರೆ ರಾಜಮೌಳಿ.
ಇನ್ನು ಹಾಲಿವುಡ್ನ ಜನಪ್ರಿಯ ಕ್ರಿಟಿಕ್ಗಳನ್ನು ಸಿನಿಮಾ ವಿಶೇಷ ಸ್ಕ್ರೀನಿಂಗ್ಗೆ ಕರೆತಂದು ಅವರಿಂದ ಒಳ್ಳೆಯ ಮಾತುಗಳನ್ನು ಆಡಿಸುವುದು ಸಹ ಪಿಆರ್ ಕಾರ್ಯಯೋಜನೆಗಳಲ್ಲಿ ಒಂದು. ಈ ‘ಸೇವೆ’ ಅತ್ಯಂತ ದುಬಾರಿ. ಆಸ್ಕರ್ ಪ್ರಶಸ್ತಿಯ ಒಂದೊಂದು ವಿಭಾಗಕ್ಕೆ ಒಂದೊಂದು ಪರಿಣಿತಿ ಹೊಂದಿದ ಪಿಆರ್ ಸಂಸ್ಥೆಗಳಿವೆ ಹಾಲಿವುಡ್ನಲ್ಲಿ. ಈ ಪಿಆರ್ ಸಂಸ್ಥೆಗಳು ತಾವು ಇಷ್ಟು ಸಿನಿಮಾಕ್ಕೆ ಆಸ್ಕರ್ ಕೊಡಿಸಿದ್ದೇವೆ, ಇಷ್ಟು ಸಿನಿಮಾಕ್ಕೆ ನಾಮಿನೇಶನ್ ಕೊಡಿಸಿದ್ದೇವೆ ಎಂದು ಹೆಮ್ಮೆಯಿಂದ ಜಾಹೀರಾತು ಹಾಕಿಕೊಳ್ಳುತ್ತವೆ.
ಅಂತಹವರನ್ನೂ ಹುಡುಕಬೇಕು. ಅವರಲ್ಲಿ ಫೇಕುಗಳೂ ಇರುತ್ತಾರೆ. ಅವರನ್ನು ಗುರುತಿಸಿ, ಆಚೆಗಿಟ್ಟು ಗ್ಯಾರಂಟಿ ಚೆಕ್ ಮಾಡಿಕೊಂಡೇ ಹಣ ಖರ್ಚು ಮಾಡಬೇಕು. ಅದೆಲ್ಲವನ್ನೂ ರಾಜಮೌಳಿ & ಟೀಂ ಯಶಸ್ವಿಯಾಗಿ ಮಾಡಿದ ಕಾರಣಕ್ಕೇ ಈಗ ನಾಟು ನಾಟು ಹಾಡಿಗೆ ಪ್ರಶಸ್ತಿ ಬಂದಿದೆ. ಇದಕ್ಕಾಗಿಯೇ 80 ಕೋಟಿಗೂ ಹೆಚ್ಚು ಹಣ ಖರ್ಚಾಗಿದ್ದದ್ದು.
ಇಷ್ಟೆಲ್ಲ ಖರ್ಚು ಮಾಡಿ ಅವಾರ್ಡ್ ಪಡೆಯಬೇಕಾ..? ಎಂಬ ಪ್ರಶ್ನೆಗೆ ಉತ್ತರ ಇಷ್ಟೇ. ದುಡ್ಡು ದುಡಿದು ಕೋಟ್ಯಧಿಪತಿಯಾಗಿ ಸರಳತನ ಕಾಪಾಡಿಕೊಂಡಿದ್ದರೆ ಮಾತ್ರ ಸರಳತೆಗೆ ಒಂದು ಅರ್ಥ, ಗೌರವ. ದುಡ್ಡಿಲ್ಲದವನನ್ನು ಜಗತ್ತು ಭಿಕಾರಿಯಾಗಿಯೇ ನೋಡುತ್ತದೆ. ಹಾಗೆಯೇ ಈ ಪ್ರಶಸ್ತಿಗಳು. ಪ್ರಶಸ್ತಿ ಗೆದ್ದವರು ಅದು ನಿರರ್ಥಕ ಎನ್ನುವುದಕ್ಕೂ, ಪ್ರಶಸ್ತಿಯನ್ನು ಗೆಲ್ಲದೆಯೇ ಹೇಳುವುದಕ್ಕೂ ವ್ಯತ್ಯಾಸವಿದೆ. ಗೆಲ್ಲದವರು ಈ ಮಾತು ಹೇಳಿದರೆ ಎಟುಕದ ದ್ರಾಕ್ಷಿ ಹುಳಿ ಬಿಡ್ರಿ ಎನ್ನುತ್ತಾರಷ್ಟೇ. ಈಗ ಆಸ್ಕರ್ ಗೆದ್ದಿದೆ. ಅಂದಹಾಗೆ ಈ ಆಸ್ಕರ್, ನೂರಾರು ಭಾರತೀಯ ಚಿತ್ರಗಳಿಗೆ ದೊಡ್ಡ ಮಟ್ಟದ ಮಾರ್ಕೆಟ್ ಕೂಡಾ ಓಪನ್ ಮಾಡುತ್ತದೆ. ಅಷ್ಟರಮಟ್ಟಿಗೆ ಈ ಅವಾರ್ಡ್ ಭಾರತೀಯ ಚಿತ್ರರಂಗಕ್ಕೆ ಒಂದು ಆಕ್ಸಿಜನ್.



