ರಿಷಬ್ ಶೆಟ್ಟಿ ಪ್ರಶ್ನೆಗಳಿಗೆ ಕೊಡುವ ಉತ್ತರಕ್ಕಿಂತ ಅವರ ನೋ ಕಮೆಂಟ್ಸ್ ಎನ್ನುವುದೇ ಬಹಳವಾಗಿ ಚರ್ಚೆಯಾಗಿತ್ತು. ಟಿವಿಯೊಂದರ ಸಂದರ್ಶನದಲ್ಲಿ ರಿಷಬ್ ಶೆಟ್ಟಿ ಅವರಿಗೆ ಈ ವ್ಯಕ್ತಿಗಳ ಬಗ್ಗೆ ಒಂದು ವಾಕ್ಯದಲ್ಲಿ ಹೇಳಿ ಪ್ರಶ್ನೆ ಕೇಳಲಾಗಿತ್ತು. ನರೇಂದ್ರ ಮೋದಿಯವರನ್ನು ಫ್ಯೂಚರ್ ಆಫ್ ಇಂಡಿಯಾ ಎಂದಿದ್ದ ರಿಷಬ್ ಶೆಟ್ಟಿ, ರಾಹುಲ್ ಗಾಂಧಿ ವಿಚಾರಕ್ಕೆ ನೋ ಕಮೆಂಟ್ಸ್ ಎಂದಿದ್ದರು. ಅದು ಆಗ ಎಡ-ಬಲ ಪಂಥೀಯರ ವಾಗ್ಯುದ್ಧಕ್ಕೆ ಕಾರಣವಾಗಿತ್ತು. ಆದರೆ, ಈ ಬಾರಿ ಸಂಭಾವನೆ ವಿಷಯದ ಬಗ್ಗೆ ನೋ ಕಮೆಂಟ್ಸ್ ಎಂದಿದ್ದಾರೆ. 

ಆಗ ಚಲನಚಿತ್ರ ಪತ್ರಕರ್ತರ ಜೊತೆ ಸಂವಾದದಲ್ಲಿ ಮಾತನಾಡಿದ್ದ ರಿಷಬ್ ಶೆಟ್ಟಿ ಕಾಂತಾರ ಚಿತ್ರಕ್ಕೆ ಸಿಕ್ಕ ಲಾಭ, ತಮಗೂ ಸೇರಿದಂತೆ ಇಡೀ ಕಾಂತಾರ ಚಿತ್ರತಂಡಕ್ಕೆ ಸಿಕ್ಕ ಡಬಲ್ ಪೇಮೆಂಟ್ ಎಲ್ಲವನ್ನೂ ಹಂಚಿಕೊಂಡರು. ವಿಜಯ್ ಕಿರಗಂದೂರು ಅವರ ದೊಡ್ಡತನವನ್ನು ಅಪಾರವಾಗಿ ಹೊಗಳಿದ ರಿಷಬ್ ಸಿನಿಮಾದಿಂದ ಲಾಭ ಬಂದಿದ್ದಕ್ಕಾಗಿ ಹೊಂಬಾಳೆ ಫಿಲ್ಮ್ಸ್ ಇಡೀ ತಂಡಕ್ಕೆ ಇನ್ನೊಂದು ರೌಂಡ್ ಪೇಮೆಂಟ್ ಮಾಡಿದೆ. ಅದು ಹೊಂಬಾಳೆ ಫಿಲ್ಮ್ಸ್ನ ದೊಡ್ಡತನ. 

ರಿಷಬ್ ಶೆಟ್ಟಿ ಆಗಾಗ್ಗೆ ಮೊಬೈಲ್ ಸ್ವಿಚ್ ಆಫ್ ಮಾಡಿಕೊಳ್ಳೋದು ಅಪರೂಪವೇನಲ್ಲ. ಚಿತ್ರರಂಗದ ಹಲವರಿಗೆ ಇದು ಗೊತ್ತಿರುವಂತದ್ದೇ. ರಿಷಬ್ ಪತ್ನಿ, ತಂದೆ, ತಾಯಿ ಸೇರಿದಂತೆ ಕೆಲವೇ ಕೆಲವರಿಗೆ ಮಾತ್ರ ಆ ಸಮಯದಲ್ಲಿ ಕನೆಕ್ಟ್ ಆಗುವ ರಿಷಬ್ ಶೆಟ್ಟಿ, ಬೇರೆಯದೇ ಲೋಕಕ್ಕೆ ಜರ್ನಿ ಹೊರಟು ಬಿಡುತ್ತಾರೆ. ಈಗ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ಹೊರಡುವ ರಿಷಬ್ ಶೆಟ್ಟಿ, ಏನು ಮಾಡಲಿದ್ದಾರೆ.. ಬೇರೇನಿಲ್ಲ. ಕಾಂತಾರ 2 ಚಿತ್ರದ ಚಿತ್ರಕಥೆಗೆ ಕೂತುಕೊಳ್ಳಲಿದ್ದಾರೆ.
ಕಾಂತಾರ 2 ಬರುವುದು ಪಕ್ಕಾ. ಟ್ರೇಲರ್ ಕೂಡಾ ರೆಡಿ ಆಗಿದೆ ಎಂದು ಹೇಳಿರುವ ರಿಷಬ್ ಶೆಟ್ಟಿ, ಸ್ಕ್ರಿಪ್ಟ್ ಕೆಲಸಕ್ಕೆ ಪಟ್ಟಾಗಿ ಕುಳಿತುಕೊಳ್ಳಲಿದ್ದಾರೆ.



