ದುನಿಯಾ ವಿಜಯ್ ಚಿತ್ರಗಳಿಗೂ ದುನಿಯಾ ವಿಜಯ್ ಅವರಿಗೂ ಅವಿನಾಭಾವ ನಂಟು. ದುನಿಯಾ ಚಿತ್ರದಿಂದಲೂ ಈ ಸಕ್ಸಸ್ ಜೋಡಿ ನಡೆಯುತ್ತಲೇ ಬಂದಿದೆ. ಜೈಜವಾನ್ ಟಿಪ್ಪು ಸುಲ್ತಾನ್ ಎಂದು ಡೈಲಾಗ್ ಹೊಡೆಯುತ್ತಲೇ ದುನಿಯಾ ಚಿತ್ರವನ್ನು ಆಕ್ರಮಿಸಿಕೊಂಡಿದ್ದರು ರಂಗಾಯಣ ರಘು. ಆನಂತರ ಗೆದ್ದ ಜಂಗ್ಲಿ, ಜಾನಿ ಮೇರಾ ನಾಮ್.. ಹೀಗೆ ಹಲವು ಚಿತ್ರಗಳಲ್ಲಿ ದುನಿಯಾ ವಿಜಯ್ ಸಕ್ಸಸ್ ಜೊತೆ ರಂಗಾಯಣ ರಘು ಕೂಡಾ ಇದ್ದರು. ಆ ಸೆಂಟಿಮೆಂಟ್ ಮತ್ತೂ ಮುಂದುವರದಿದ್ದು, ಭೀಮ ಚಿತ್ರಕ್ಕೆ ರಂಗಾಯಣ ರಘು ಪ್ರವೇಶವಾಗಿದೆ. ಇದೀಗ ಭೀಮ ಚಿತ್ರಕ್ಕೆ ನಿಜಲಿಂಗಪ್ಪನ ಪಾತ್ರಕ್ಕೆ ರಂಗಾಯಣ ರಘು ಪ್ರವೇಶ ಮಾಡಿದ್ದಾರೆ.
ಇವರ ಪಾತ್ರಕ್ಕೆ ಕಥೆಯಲ್ಲಿ ಸಿಕ್ಕಾಪಟ್ಟೆ ಮಹತ್ವವಿದೆ. ಇಂತಹದ್ದೊಂದು ಪಾತ್ರವನ್ನು ನೀಡಿದ್ದಕ್ಕೆ ರಘು ಅವರು ವಿಜಯ್ ಅವರಿಗೆ ಧನ್ಯವಾದ ತಿಳಿಸಿದ್ದಾರಂತೆ. ರಘು ಅವರ ಪಾತ್ರದ ಬಗ್ಗೆ ಹೆಚ್ಚು ಮಾತನಾಡದ ವಿಜಯ್, ‘ರಘು ಅಣ್ಣ ಇಂತಹ ಪಾತ್ರದಲ್ಲಿ ಇದುವರೆಗೂ ಕಾಣಿಸಿಕೊಂಡಿಲ್ಲ. ಖಂಡಿತಾ ಅವರ ಪಾತ್ರವನ್ನು ತೆರೆಮೇಲೆ ನೋಡಿದವರು ಕಣ್ಣೀರು ಹಾಕುತ್ತಾರೆ. ಇಂತಹ ಪಾತ್ರಗಳಲ್ಲಿ ಅವರನ್ನು ನೋಡುವುದೇ ಚಂದ. ನಾನು ಅವರ ನಟನೆ ಕಂಡು ಮಂತ್ರಮುಗ್ಧನಾದೆ. ನನ್ನ ಸಿನಿಮಾಗೆ ಈ ಪಾತ್ರದಿಂದ ಮತ್ತೊಂದು ರೀತಿಯ ತೂಕ ಬರುತ್ತದೆ’ ಎಂದಿದ್ದಾರೆ.
ಶೇ.80ರಷ್ಟು ಚಿತ್ರೀಕರಣ ಪೂರ್ಣಗೊಂಡಿದ್ದು, ಸದ್ಯದಲ್ಲೇ ಉಳಿದ ಭಾಗದ ಚಿತ್ರೀಕರಣಕ್ಕೆ ವಿಜಯ್ ತಯಾರಿ ನಡೆಸುತ್ತಿದ್ದಾರೆ. ಚುನಾವಣೆ ಮತ್ತು ಚುನಾವಣಾ ಫಲಿತಾಂಶ ಬಂದ ತಕ್ಷಣ ಚಿತ್ರೀಕರಣ ಆರಂಭಿಸಲಿದ್ದಾರೆ.
ಭೀಮ’ ಚಿತ್ರ ಪ್ರಸ್ತುತ ಸಮಾಜದಲ್ಲಿ ನಡೆಯುತ್ತಿರುವ ಘಟನೆಗಳನ್ನು ಇಟ್ಟುಕೊಂಡು ಮಾಡುತ್ತಿರುವ ಕಮರ್ಷಿಯಲ್ ಸಿನಿಮಾ. ಹೊಸ ನಿರ್ದೇಶನದ ತಂಡವನ್ನು ಕಟ್ಟಿಕೊಂಡಿರುವ ಅವರು ಸಂಪೂರ್ಣ ಹೊಸ ಮಾದರಿಯಲ್ಲಿ ನಿರೂಪಣೆಯನ್ನು ಮಾಡುತ್ತಿದ್ದಾರೆ. ಈಗಾಗಲೇ ಚಿತ್ರದಲ್ಲಿ ರಾಘು ಶಿವಮೊಗ್ಗ, ಪ್ರಿಯಾ ಶಠಮರ್ಷಣ, ಕಲ್ಯಾಣಿ, ರಮೇಶ್ ಇಂದಿರಾ, ಅಚ್ಯುತ್ ಕುಮಾರ್, ಗೋಪಾಲ್ ದೇಶಪಾಂಡೆ ಸೇರಿ ಹಲವು ಕಲಾವಿದರಿದ್ದಾರೆ. ಇವರೆಲ್ಲರ ಜತೆಗೆ ಇದುವರೆಗೂ ತೆರೆಮೇಲೆ ನೋಡಿರದ ಸಾಕಷ್ಟು ಯುವಕ ಯುವತಿಯರು ನಟಿಸುತ್ತಿದ್ದಾರೆ. ಈ ಚಿತ್ರದಲ್ಲಿ ನಟಿಸಿರುವ ಶೇ.80ರಷ್ಟು ಕಲಾವಿದರು ಚಿತ್ರರಂಗ, ರಂಗಭೂಮಿ ಸೇರಿದಂತೆ ಬಣ್ಣದ ಜಗತ್ತಿಗೆ ಸಂಬಂಧವಿಲ್ಲದವರು. ಅಂತಹವರನ್ನು ಕರೆದುಕೊಂಡು ಬಂದು ತರಬೇತಿ ನೀಡಿ ನಟಿಸುವಂತೆ ಮಾಡಿದ್ದಾರೆ ವಿಜಯ್.
ಚಿತ್ರದಲ್ಲಿ ಹೊಸ ನಟರು, ಕಲಾವಿದರೇ ಹೆಚ್ಚಿದ್ದಾರೆ. ಇವರೆಲ್ಲರ ನಡುವೆ ಅನುಭವಿ ಕಲಾವಿದರೂ ಬೇಕು ಎನ್ನುವುದು ದುನಿಯಾ ವಿಜಯ್ ವಾದ.



