ಹುಟ್ಟೂರು ಯಾರಿಗೆ ತಾನೇ ಇಷ್ಟವಿರಲ್ಲ. ಸಾಮಾನ್ಯವಾಗಿ ಕರ್ನಾಟಕದಲ್ಲಿಯೇ ಬೇರೆ ಊರಿನಲ್ಲಿರುವಾಗ ನಮ್ಮ ಕಡೆಯವರು ಎಂದರೆ ನಮ್ಮ ಅಕ್ಕಪಕ್ಕದ ಊರಿನವರು ಎಂದು ಒಂದಾಗುತ್ತಾರೆ. ಭಾಷೆಯ ವಿಚಾರದಲ್ಲೂ ಅಷ್ಟೆ, ಅದರಲ್ಲೂ ಕರಾವಳಿ ಕನ್ನಡಿಗರು ಮತ್ತು ಉತ್ತರ ಕರ್ನಾಟಕದ ಭಾಷೆಗಳ ಸೊಗಡು ವಿಭಿನ್ನ. ಅದೇ ಕನ್ನಡಿಗರು ಬೇರೆ ರಾಜ್ಯಕ್ಕೆ ಹೋದರೆ ಕೇವಲ ಕನ್ನಡಿಗರಾಗಿ ಗುರುತಿಸಿ ಆತ್ಮೀಯರಾಗುತ್ತಾರೆ. ವಿದೇಶಕ್ಕೆ ಹೋದರೆ ಇಂಡಿಯನ್ ಎಂಬ ಭಾವನೆ ಒಂದು ಮಾಡಿಸುತ್ತದೆ. ಇದು ಸಹಜವೂ ಹೌದು. ಅಂದಹಾಗೆ ಇದನ್ನೆಲ್ಲ ಹೇಳೋದಕ್ಕೆ ಕಾರಣವೂ ಇದೆ.
ಇತ್ತೀಚೆಗೆ ಕಾಂಗ್ರೆಸ್ ಮುಖಂಡ ಮಿಥುನ್ ರೈ ವೇದಿಕೆಯಲ್ಲಿ ಒಂದು ಹೇಳಿಕೆ ಕೊಟ್ಟಿದ್ದರು. ಉಡುಪಿಯ ವಿಶ್ವಪ್ರಸಿದ್ಧ ಪೇಜಾವರ ಮಠಕ್ಕೆ ಭೂಮಿ ಕೊಟ್ಟಿದ್ದು ಮುಸ್ಲಿಂ ದೊರೆಗಳು ಎಂದು ಹೇಳಿಕೆ ನೀಡಿದ್ದರು. ಮೊದಲೇ ಎಲೆಕ್ಷನ್ ಹತ್ತಿರದಲ್ಲಿದೆ. ಜೊತೆಗೆ ಕಾಂಗ್ರೆಸ್ಸಿಗೆ ಕೇವಲ ಅಲ್ಪಸಂಖ್ಯಾತರನ್ನಷ್ಟೇ ಓಲೈಕೆ ಮಾಡುತ್ತದೆ. ಹಿಂದೂ ವಿರೋಧಿ ಎಂಬ ಹಣೆಪಟ್ಟಿಯೂ ಇದೆ. ಹೀಗಿರುವಾಗ ಮಿಥುನ್ ರೈ ಹೇಳಿಕೆ ರಾಜಕೀಯದಲ್ಲಿ ಸಂಚಲನ ಹುಟ್ಟುಹಾಕಿತ್ತು. ಜೊತೆಗೆ ಮಿಥುನ್ ರೈ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಆಪ್ತ ಬಳಗದವರು. ಇದೆಲ್ಲ ಈ ಸಮಯದಲ್ಲಿ ಬೇಕಿತ್ತಾ ಎಂದು ಕೆಲವು ಕಾಂಗ್ರೆಸ್ಸಿಗರೇ ಬುದ್ದಿ ಮಾತು ಹೇಳಿದ್ದರು. ಈ ಸಮಯದಲ್ಲಿ ಬೇಕಿತ್ತಾ ಎಂಬ ಮಾತಿನಲ್ಲಿ ಇದು ಸತ್ಯ. ಈಗ ಹೇಳಬೇಕಿರಲಿಲ್ಲ ಅಷ್ಟೇ ಎಂಬ ಮಾತು ಧ್ವನಿಸಿತ್ತು. ಜೊತೆಗೆ ಇದನ್ನು ಕೃಷ್ಣೈಕ್ಯರಾಗಿರುವ ಪೇಜಾವರ ವಿಶ್ವೇಷ ತೀರ್ಥ ಶ್ರೀಗಳೇ ಹೇಳಿದ್ದರು ಎಂಬ ಹಳೆಯ ಪೇಪರ್ ಕ್ಲಿಪ್ಪಿಂಗ್ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡಿತ್ತು. ಇದಕ್ಕೆ ರಕ್ಷಿತ್ ಶೆಟ್ಟಿ ಧ್ವನಿಯೆತ್ತಿದ್ದರು.
The temple town of Udupi has written history of more than thousand years… Why talk nonsense on a public platform when you have no idea???
— Rakshit Shetty (@rakshitshetty) March 11, 2023
ಉಡುಪಿ ದೇವಸ್ಥಾನಕ್ಕೆ ಸಾವಿರಾರು ವರ್ಷದ ಇತಿಹಾಸ ಇದೆ. ಮಾಹಿತಿ ಗೊತ್ತಿಲ್ಲದೇ ಸಾರ್ವಜನಿಕವಾಗಿ ನಾನ್ ಸೆನ್ಸ್ ರೀತಿಯಲ್ಲಿ ಮಾತಾನಾಡೋದು ಯಾಕೆ? ಎಂದು ಪ್ರಶ್ನಿಸಿದ್ದರು. ಸೋಷಿಯಲ್ ಮೀಡಿಯಾದಲ್ಲಿ ಈ ಹೇಳಿಕೆ ಹೊರಬಿದ್ದಿದ್ದೇ ತಡ, ಎಡಪಂಥೀಯರು ರಕ್ಷಿತ್ ಶೆಟ್ಟಿ ವಿರುದ್ಧ ಮುಗಿಬಿದ್ದರು. ನೀನು ಬಕೆಟ್ ಹಿಡಿತಿದೀಯಾ.. ನಿಮಗೆ ಬಿಜೆಪಿಯವರು ಟಿಕೆಟ್ ಕೊಡಲ್ಲ ಎಂದೆಲ್ಲ ಕಾಲೆಳೆದರು. ಉಡುಪಿ ನನ್ನ ಹುಟ್ಟೂರು. ಬಕೆಟ್ ಅಲ್ಲ, ಟ್ಯಾಂಕ್‍ನ್ನೇ ಹಿಡೀತೀನಿ ಏನಿವಾಗ ಎಂದು ತಿರುಗೇಟು ಕೊಟ್ಟ ರಿಷಬ್ ಶೆಟ್ಟಿ, ಇತಿಹಾಸದ ದಾಖಲೆಗಳನ್ನೆಲ್ಲ ಬಿಚ್ಚಿಟ್ಟರು. ಉಡುಪಿಯ ಕೃಷ್ಣಮಠಕ್ಕಿರುವುದೇ 800 ವರ್ಷಗಳ ಇತಿಹಾಸ ಎಂದಾಗ, ಉಡುಪಿಗೆ ಸಾವಿರಾರು ವರ್ಷಗಳ ಇತಿಹಾಸವಿದೆ. ಅಷ್ಠಮಠಗಳ ಬೀದಿಯಲ್ಲೇ ಇರುವ ಅನಂತೇಶ್ವರ, ಚಂದ್ರಮೌಳೇಶ್ವರ ದೇಗುಲಗಳ ಇತಿಹಾಸವನ್ನೂ ನೋಡಿ ಎಂದು ಉತ್ತರ ಕೊಟ್ಟಿದ್ದರು. ಉಡುಪಿಯ ಇತಿಹಾಸ ವೇದಗಳ ಕಾಲದ್ದು ಎಂಬ ದಾಖಲೆಗಳನ್ನೂ ಇತಿಹಾಸಕಾರರು ಮಂಡಿಸಿದರು. ಮುಸ್ಲಿಂ ದೊರೆಗಳೇ ಇಲ್ಲದ ಜಿಲ್ಲೆಯಲ್ಲಿ ಮುಸ್ಲಿಂ ದೊರೆಗಳು ಮಠಕ್ಕೆ ಭೂಮಿ ಕೊಡುವುದಕ್ಕೆ ಹೇಗೆ ಸಾಧ್ಯ ಎಂಬ ಪ್ರಶ್ನೆ ಬಂತು. ಪೇಜಾವರ ಶ್ರೀಗಳು ಹೇಳಿಕೆ ನೀಡಿದಾಗ ಏಕೆ ಸುಮ್ಮನಿದ್ದಿರಿ ಎಂಬ ಪ್ರಶ್ನೆಯೂ ಎದುರಾಯಿತು. ಆ ವಿಚಾರಕ್ಕೆ ಪೇಜಾವರ ಶ್ರೀಗಳೇ ಉತ್ತರ ಕೊಟ್ಟಿದ್ದರು. ಅವರು ಹೇಳಿದ್ದ ವಿಷಯವೇ ಬೇರೆ. ಪತ್ರಿಕೆಯಲ್ಲಿ ವರದಿಯಾಗಿದ್ದ ವಿಷಯವೇ ಬೇರೆ ಎಂಬ ಸ್ಪಷ್ಟನೆಯನ್ನೂ ದಾಖಲೆ ಸಮೇತ ಇಡಲಾಯಿತು. ಖುದ್ದು ಈಗಿನ ಪೇಜಾವರ ಶ್ರೀಗಳೇ ಮಠಕ್ಕೆ ಭೂಮಿ ಕೊಟ್ಟಿದ್ದು ಮುಸ್ಲಿಂ ದೊರೆಗಳಲ್ಲ, ರಾಮಭೋಜ ಎಂಬ ರಾಜ ಎಂದು ಉತ್ತರ ಕೊಟ್ಟಿದ್ದರು.
ಇತ್ತ ಬಲಪಂಥೀಯರು, ಕೃಷ್ಣಮಠದ ಭಕ್ತರು ಹಾಗೂ ಇತಿಹಾಸಕಾರರು ರಕ್ಷಿತ್ ಶೆಟ್ಟಿ ಬೆಂಬಲಕ್ಕೆ ನಿಂತರೆ, ಅತ್ತ ಎಡಪಂಥೀಯರು, ನಾಸ್ತಿಕರು ಹಾಗೂ ಕಾಂಗ್ರೆಸ್ಸಿಗರು ರಕ್ಷಿತ್ ಶೆಟ್ಟಿಯವರ ತೇಜೋವಧೆಗೆ ನಿಂತರು. ರಿಷಬ್ ಶೆಟ್ಟಿ, ರಶ್ಮಿಕಾ ಮಂದಣ್ಣ ಹೆಸರನ್ನೂ ಎಳೆದು ತಂದು ಪರ್ಸನಲ್ ವಿಷಯಗಳನ್ನೂ ಬೀದಿಗೆಳೆದು ರಂಪ ಮಾಡಿಬಿಟ್ಟರು. ಸಾಮಾನ್ಯವಾಗಿ ರಾಜಕೀಯ ವಿಷಯಗಳಿಗೆ ತಲೆಯನ್ನೇ ಹಾಕದ ರಕ್ಷಿತ್ ಶೆಟ್ಟಿ ಈ ವಿಷಯದಲ್ಲಿ ಎಂಟ್ರಿ ಕೊಟ್ಟಿದ್ದು ಏಕೆ? ಅನುಮಾನವೇ ಇಲ್ಲ. ಅವರೇ ಉತ್ತರವನ್ನೂ ಕೊಟ್ಟಿದ್ದಾರೆ. ಉಡುಪಿ ನನ್ನ ಹುಟ್ಟೂರು. ನನ್ನ ಊರಿಗಾಗಿ ಬಕೆಟ್ ಅನ್ನೇ ಏಕೆ, ಟ್ಯಾಂಕರ್ ಆದ್ರೂ ಹಿಡೀತೀನಿ.



