ರಜನಿಕಾಂತ್ ಅವರನ್ನು ಅಭಿಮಾನಿಗಳು ಆರಾಧಿಸುವ ವೈಭವವೇ ಬೇರೆ. ಪ್ರೀತಿಸುವ ಗತ್ತೇ ಬೇರೆ. ಚಿತ್ರರಂಗದಲ್ಲಿ ರಜನಿ ಅವರು ಅದೆಷ್ಟೋ ಜನರ ಬಾಳಿಗೆ ಬೆಳಕಾಗಿದ್ದಾರೆ. ಬದುಕು ಬಂಗಾರವನ್ನಾಗಿಸಿದ್ದಾರೆ. ಆದರೆ ರಜನಿಕಾಂತ್ ಅವರ ಆರಾಧ್ಯದೈವವೇ ಬೇರೆ. ರಜನಿಕಾಂತ್ ಬದುಕು ಬಂಗಾರವನ್ನಾಗಿಸಿದವರ ಕಥೆ ಇದು. ಅಂದಹಾಗೆ ರಜನಿಕಾಂತ್ ಅವರ ಬದುಕು ಬದಲಿಸಿದ್ದು, ಬಂಗಾರವನ್ನಾಗಿಸಿದ್ದು ಅಣ್ಣ ಸೂರ್ಯಕಾಂತ್ ಗಾಯಕ್‍ವಾಡ್. ಬೆಂಗಳೂರಿನಲ್ಲಿ ಬಸ್ ಕಂಡಕ್ಟರ್ ಆಗಿ, ಸ್ಟೈಲಾಗಿ ಬೀಡಿ ಹಚ್ಚಿಕೊಳ್ಳುವುದರ ಮೂಲಕವೇ ಫೇಮಸ್ ಆಗಿದ್ದ ರಜನಿ, ಚೆನ್ನೈಗೆ ಹೊರಟಾಗ ಸಿನಿಮಾ ಸೇರಲು ಹೊರಟು ನಿಂತಾಗ ಜೊತೆಗಿದ್ದವರು ಇದೇ ಅಣ್ಣ.
ರಜನಿಕಾಂತ್ ಅವರಿಗೀಗ 72 ವರ್ಷ ವಯಸ್ಸು. ಈ ವಯಸ್ಸಿನಲ್ಲೂ ರಜನಿ ಅವರಿಗೆ ಸರಿಸಾಟಿಯಾಗುವ ಇನ್ನೊಬ್ಬ ಸ್ಟಾರ್ ಇಡೀ ಭಾರತೀಯ ಚಿತ್ರರಂಗದಲ್ಲಿ ಇಲ್ಲ. ಇನ್ನು ಅವರ ಅಣ್ಣನಿಗೆ ಎಷ್ಟು ವರ್ಷ ವಯಸ್ಸಿರಬಹುದು? ರಜನಿಕಾಂತ್ ಅವರ ಅಣ್ಣ ಸತ್ಯನಾರಾಯಣ್ ಗಾಯಕ್‍ವಾಡ್. ಬೆಂಗಳೂರಿನಲ್ಲೇ ಇದ್ದಾರೆ. ಅವರಿಗೀಗ 80 ವರ್ಷ. ಸತ್ಯನಾರಾಯಣ್ ಅವರ 80ನೇ ಹುಟ್ಟುಹಬ್ಬವನ್ನು ವಿಶೇಷವಾಗಿ ಆಚರಿಸಿದೆ ಅವರ ಕುಟುಂಬ.


ಇವತ್ತು ನಾನು ಏನಾಗಿದ್ದೇನೆಯೋ.. ಅದಕ್ಕೆ ಅವನು ಕಾರಣ. ಬಂಗಾರದ ಮನುಷ್ಯನಿಗೆ ಬಂಗಾರದ ಮಳೆಯ ಅಭಿಷೇಕ ಎಂದು ಬರೆದುಕೊಂಡಿದ್ದಾರೆ ರಜನಿಕಾಂತ್. ಅಣ್ಣನ 80ನೇ ಹುಟ್ಟುಹಬ್ಬಕ್ಕೆ ರಜನಿಕಾಂತ್ ತಮ್ಮ ಪತ್ನಿ ಜೊತೆ ಬಂದಿದ್ದರು. ಇಡೀ ಕಾರ್ಯಕ್ರಮದಲ್ಲಿ ಜೊತೆಯಲ್ಲಿಯೇ ಇದ್ದ ರಜನಿ, ಅಣ್ಣನ ಮೇಲೆ ಚಿನ್ನದ ನಾಣ್ಯಗಳ ಅಭಿಷೇಕ ಮಾಡಿದರು. ಬದುಕು ಬದಲಿಸಿದವನಿಗೆ ಬಂಗಾರದ ಮಳೆ ಎಂದು ಬರೆದುಕೊಂಡಿರುವ ರಜನಿಕಾಂತ್, ಪ್ರೀತಿಗೆ ಹೊಸ ಅರ್ಥವನ್ನೇ ಕೊಟ್ಟಿದ್ದಾರೆ.



