ರಾಜ್ ಬಿ.ಶೆಟ್ಟಿ ಕಡಿಮೆ ಬಜೆಟ್ಟಿನ, ವಿಭಿನ್ನ ಕಥೆಯ ಚಿತ್ರಗಳಿಗೆ ಫೇಮಸ್. ಒಂದು ಮೊಟ್ಟೆಯ ಕಥೆಯಲ್ಲಿ ತಮ್ಮನ್ನೇ ತಾವು ಕುರೂಪಿಯಾಗಿ, ಬಾಲ್ಡಿಯಾಗಿ ಚಿತ್ರಿಸಿಕೊಂಡು ಸಿನಿಮಾ ಗೆಲ್ಲಿಸಿದ್ದ ರಾಜ್ ಬಿ.ಶೆಟ್ಟಿ, ಗರುಡ ಗಮನ ವೃಷಭ ವಾಹನ ಚಿತ್ರದಲ್ಲಿ ನಾಯಕಿಯನ್ನೇ ಇಲ್ಲದೆ ಗೆದ್ದಿದ್ದರು. ಕಥೆ ಮುಖ್ಯ, ಫೇಸ್ ಅಲ್ಲ. ಸ್ಟೋರಿ ಮುಖ್ಯ, ಹೀರೋಯಿನ್ ಅಲ್ಲ ಎಂದು ಸಾಬೀತು ಮಾಡಿದ್ದ ರಾಜ್ ಬಿ. ಶೆಟ್ಟಿ, ಇದೀಗ ತಮ್ಮ ಮುಂದಿನ ಚಿತ್ರಕ್ಕೆ ಇಬ್ಬರು ನಾಯಕಿಯರನ್ನು ಆಯ್ಕೆ ಮಾಡಿದ್ದಾರಂತೆ.
ರಾಜ್ ಬಿ. ಶೆಟ್ಟಿ ನಿರ್ಮಾಣದ ಟೋಬಿ ಚಿತ್ರದಲ್ಲಿ ಅವರಿಗೆ ಇಬ್ಬರು ನಾಯಕಿಯರಂತೆ. ಒಬ್ಬರು ಸಂಯುಕ್ತ ಹೊರನಾಡು ಹಾಗೂ ಮತ್ತೊಬ್ಬರು ಚೈತ್ರ ಬಿ.ಆಚಾರ್ ರಾಜ್. ಸಂಯುಕ್ತ ಹೊರನಾಡು ಬಗ್ಗೆ ಹೆಚ್ಚು ಹೇಳುವ ಅಗತ್ಯವಿಲ್ಲ. ವಿಭಿನ್ನ ಪಾತ್ರಗಳಿಗೆ ಸೂಟ್ ಆಗುವ, ಚಾಲೆಂಜಿಂಗ್ ಪಾತ್ರಗಳನ್ನೇ ಅರಸುವ ಹುಡುಗಿ. ಇತ್ತೀಚಿನ ಲವ್ ಬಡ್ರ್ಸ್ ಚಿತ್ರದಲ್ಲಿ ನಾಯಕ-ನಾಯಕಿಯರನ್ನೂ ಮೀರಿಸುವಂತೆ ನಟಿಸಿದ್ದವರು. ಇನ್ನು ಚೈತ್ರ ಬಿ.ಆಚಾರ್ ಇತ್ತೀಚೆಗೆ ಗಿಲ್ಕಿ ಚಿತ್ರದ ಮೂಲಕ ಗಮನ ಸೆಳೆದಿದ್ದವರು. ರಕ್ಷಿತ್ ಶೆಟ್ಟಿ ಜೊತೆ ಸಪ್ತಸಾಗರದಾಚೆಯೆಲ್ಲೋ.. ಚಿತ್ರದಲ್ಲೂ ನಟಿಸುತ್ತಿದ್ದಾರೆ.
ಅಂದಹಾಗೆ ಈ ಎಲ್ಲ ಕಾರಣಗಳಿಂದಾಗಿಯೇ ಟೋಬಿ ಚಿತ್ರದ ಬಜೆಟ್ ಜಾಸ್ತಿಯಾಗಿದೆಯಂತೆ. ಇತ್ತೀಚೆಗೆ ತಾನೇ ರಮ್ಯಾ ನಿರ್ಮಾಣದ ಸ್ವಾತಿ ಮುತ್ತಿನ ಮಳೆ ಹನಿಯೇ ಚಿತ್ರವನ್ನೂ ಕೂಡಾ ಕಡಿಮೆ ಬಜೆಟ್ಟಿನಲ್ಲಿಯೇ ಪೂರೈಸಿದ್ದ ರಾಜ್ ಬಿ.ಶೆಟ್ಟಿ, ಇದೀಗ ತಾವೇ ಹೀರೋ ಆಗಿರುವ, ನಿರ್ಮಾಪಕರಾಗಿರುವ ಟೋಬಿ ಚಿತ್ರಕ್ಕೆ ಬಜೆಟ್ ಹೆಚ್ಚು ಮಾಡಿಕೊಂಡಿದ್ದಾರಂತೆ. ಟೋಬಿ ಚಿತ್ರಕ್ಕೆ ಕಥೆಯನ್ನೂ ಬರೆದಿರುವ ರಾಜ್, ನಿರ್ದೇಶನದ ಜವಾಬ್ದಾರಿಯನ್ನು ತಮ್ಮದೇ ಟೀಮಿನಲ್ಲಿದ್ದ ಬಾಸಿಲ್ ಅವರಿಗೆ ವಹಿಸಿದ್ದಾರೆ.



