ಇತ್ತೀಚೆಗೆ ಜಗ್ಗೇಶ್ ಚಿತ್ರಗಳಲ್ಲಿ ಕಾಮಿಡಿ ಎಂದರೆ ಅಡಲ್ಟ್ ಕಾಮಿಡಿ, ಸೆಕ್ಸೀ ಕಾಮಿಡಿ, ಪೋಲಿ ಕಾಮಿಡಿ, ಡಬಲ್ ಮೀನಿಂಗ್, ಸಿಂಗಲ್ ಮೀನಿಂಗ್.. ಎಂಬಲ್ಲಿಗೆ ಸೀಮಿತವಾಗಿತ್ತು. ಅದರಲ್ಲೂ ವಿಶೇಷವಾಗಿ ವಿಜಯ್ ಪ್ರಸಾದ್ ನಿರ್ದೇಶನದ ಚಿತ್ರಗಳು ಜಗ್ಗೇಶ್ ಅವರಿಗೆ ದೊಡ್ಡ ಮಟ್ಟದಲ್ಲಿ ಈ ಕಳಂಕ ಹೊರಿಸಿದ್ದವು. ಹಾಗೆಂದು ವಿಜಯ್ ಪ್ರಸಾದ್ ಚಿತ್ರಗಳು ಕಳಪೆ ಎಂದಲ್ಲ. ಹೇಳುವುದೆಲ್ಲವನ್ನೂ ಪೋಲಿತನದಲ್ಲಿಯೇ ಹೇಳಬೇಕೆನ್ನುವ ಹಠ, ಚಿತ್ರದಲ್ಲಿರೋ ಚೆಂದದ ಕಥೆ, ಸುಂದರ ಸಂದೇಶವನ್ನೂ ಕುಗ್ಗಿಸುತ್ತಿತ್ತು. ಆ ಎಡವಟ್ಟು ಜಗ್ಗೇಶ್ ಅವರಿಗೂ ಅಂಟಿಕೊಂಡಿತ್ತು. ಆ ಕಳಂಕದಿಂದ ಜಗ್ಗೇಶ್ ಅವರನ್ನು ಹೊರತಂಂದು ಸ್ವಚ್ಚ ಸುಂದರ ಕೌಟುಂಬಿಕ ಹಾಸ್ಯ ನೀಡುವ ಸುಳಿವು ನೀಡಿದ್ದಾರೆ ಸಂತೋಷ್ ಆನಂದರಾಮ್. ರಾಘವೇಂದ್ರ ಸ್ಟೋರ್ಸ್ ಚಿತ್ರದ ಹಾಡಿನ ಸಾಹಿತ್ಯವನ್ನೊಮ್ಮೆ ನೋಡಿ.
ಬ್ರಹ್ಮಚಾರಿ ಬಾರ್ಡರಲ್ಲಿದ್ಯಾ.. ಬ್ಯಾಡ್ವ ಶೋಬನಾ..
ಕಲ್ಪನೇಲೆ ಖುಷಿ ಪಟ್ರೆ ಖಾಲಿ ಯೌವ್ವನ..
ಗಂಡು ಹೆಣ್ಣು ಸೇರಿದ್ರೇನೇ ಜೀವ್ನ ಪಾವನ..
ಮಾಡೋ ವಯಸ್ಸಲ್ಲಿ ಮಾಡ್ಲೇಬೇಕು.. ಮಕ್ಳನ್ನ..
ಕುಡೀತಾ ಹೇಳ್ತೀರ..ಹೆಂಡ್ತೀರ ದಾಳಿ..
ಕೇಳಿನೂ ಇನ್ನೊಬ್ಬ ಕಟ್ತಾನೆ ತಾಳಿ..
ತಗ್ಲಾಕ್ಕೊಂಡ್ವಿ ಅಂತಾ ನಮ್ಮುನ್ ತಗ್ಲಾಕ್‍ಸ್ತೀರಾ..
ಸಿಂಗಲ್ ಸುಂದರ.. ಯಾವಾಗ ಹಾಕ್ತಿಯಾ ಉಂಗುರ..


ಸಂಗೀತ ಅಜನೀಶ್ ಲೋಕನಾಥ್ ಅವರದ್ದು. ಹಾಡಿರುವುದು ವಿಜಯ ಪ್ರಕಾಶ್ ಮತ್ತು ನವೀನ್ ಸಜ್ಜು. ನಾಗಾರ್ಜುನ ಶರ್ಮ ಮತ್ತು ಸಂತೋಷ್ ಆನಂದರಾಮ್ ಇಬ್ಬರೂ ಸೇರಿಕೊಂಡು ಪದಪುಂಜಗಳನ್ನು ಜೋಡಿಸಿದ್ದಾರೆ. ರಾಘವೇಂದ್ರ ಸ್ಟೋರ್ಸ್ ಚಿತ್ರದ ಮೊದಲ ಹಾಡಿದು. ಈ ಹಾಡಿನ ಇನ್ನೊಂದು ವಿಶೇಷವೆಂದರೆ ಇತ್ತೀಚೆಗೆ ಹಲವು ಚಿತ್ರಗಳಲ್ಲಿ ಜಗ್ಗೇಶ್ ಮದುವೆಯಾಗದ ಅಂಕಲ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಕಾಮಿಡಿ ಓಕೆ, ಆದರೆ ಸಭ್ಯತೆಯ ಎಲ್ಲೆ ಮೀರುತ್ತಿದ್ದೀರಿ. ತುಂಟಾಟ, ಪೋಲಿ ಮಾತು ಕಂಟ್ರೋಲಿನಲ್ಲಿರಲಿ ಎಂಬ ಮಾತು ಕೇಳಿಬಂದಿದ್ದವು. ಸಂತೋಷ್ ಆನಂದರಾಮ್ ಚಿತ್ರದಲ್ಲಿ ಅದನ್ನು ಪಾಲಿಸಿದ್ದಾರೆ. ಹಾಡು ನಗು ಅರಳಿಸುತ್ತದೆ. ಇಂಪಾಗಿಯೂ ಇದೆ. ಸಾಹಿತ್ಯವೂ ಚೆನ್ನಾಗಿದೆ. ತಾನು ಫ್ಯಾಮಿಲಿ ಡೈರೆಕ್ಟರ್ ಅನ್ನೋದನ್ನ ಮತ್ತೊಮ್ಮೆ ಸಾಬೀತು ಮಾಡಿದ್ದಾರೆ ಸಂತೋಷ್.
ಹೊಂಬಾಳೆ ಬ್ಯಾನರಿನಲ್ಲಿ ಬರುತ್ತಿರೋ ಚಿತ್ರದಲ್ಲಿ ಜಗ್ಗೇಶ್ ಜೊತೆಗೆ ಶ್ವೇತಾ ಶ್ರೀವಾತ್ಸವ್ ನಾಯಕಿಯಾಗಿದ್ದಾರೆ. ಸಿಂಗಲ್ ಸುಂದರನಿಗೆ ಸಿಗೋ ಸಿಂಗಲ್ ಸುಂದರಿ ಆಕೆಯೇನಾ.. ನೋಡ್ಬೇಕು. ಏ.28ಕ್ಕೆ ಸಿನಿಮಾ ರಿಲೀಸಾಗುತ್ತೆ. ಇತ್ತೀಚೆಗೆ ಹೊಡಿಬಡಿ ಚಿತ್ರಗಳ ಸದ್ದಿನಲ್ಲೇ ಸುಸ್ತಾಗಿದ್ದವರಿಗೆ ಒಂದು ಪಕ್ಕಾ ಮನರಂಜನೆಯ ಸಿನಿಮಾ ಸಿಗುವ ನಿರೀಕ್ಷೆಯಂತೂ ಇದೆ. ಸಂತೋಷ್ ಆನಂದರಾಮ್ ಚಿತ್ರವೆಂದ ಮೇಲೆ ಅಲ್ಲೊಂದು ಮೆಸೇಜ್ ಇದ್ದೇ ಇರುತ್ತೆ. ಏನಿರುತ್ತೋ.. ನೋಡಬೇಕು.



