ರಾಧಿಕಾ ಕುಮಾರಸ್ವಾಮಿ ಕಡೆಯ ಚಿತ್ರ ಯಾವುದು? ರವಿ ಬೋಪಣ್ಣ ಎಂದು ಅವರ ಫ್ಯಾನ್ಸ್ ಅಚ್ಚರಿಯಿಂದ ಉದ್ಘರಿಸುತ್ತಾರೆ. ರವಿ ಬೋಪಣ್ಣ ಫ್ಲಾಪ್ ಸಿನಿಮಾ ಆದರೂ, ರಾಧಿಕಾ ಕುಮಾರಸ್ವಾಮಿ ಬ್ಯೂಟಿಗೆ ಫ್ಯಾನ್ಸ್ ಫಿದಾ ಆಗಿದ್ದರು. ರಾಧಿಕಾ ಅವರಿಗೀಗ 36 ವರ್ಷ. ಇದಕ್ಕೂ ಮುನ್ನ ಒಪ್ಪಂದ ಚಿತ್ರ ತೆರೆಗೆ ಬಂದಿತ್ತಾದರೂ ಆ ಚಿತ್ರ ಹಳೆಯ ಸರಕು. ಯಾವತ್ತೋ ರೆಡಿಯಾಗಿದ್ದ ಸಿನಿಮಾ. ಇದೀಗ ಹೊಸ ಸಿನಿಮಾಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ ಅಜಾಗ್ರತ.
ಇದು ರಾಧಿಕಾ ಕುಮಾರಸ್ವಾಮಿ ನಟಿಸುತ್ತಿರುವ ಹೊಸ ಸಿನಿಮಾ ಟೈಟಲ್. ರಾಧಿಕಾ ಕುಮಾರಸ್ವಾಮಿ ಅವರು ಸಿನಿಮಾ ಆಯ್ಕೆಯಲ್ಲಿ ಸಖತ್ ಚ್ಯೂಸಿ ಆಗಿದ್ದಾರೆ. ತಮ್ಮ ಪಾಲಿಗೆ ಬಂದ ಎಲ್ಲ ಚಿತ್ರಗಳನ್ನು ಅವರು ಒಪ್ಪಿಕೊಳ್ಳುವುದಿಲ್ಲ. ಪಾತ್ರ ಹಾಗೂ ಕಥೆ ಚೆನ್ನಾಗಿದ್ದರೆ ಮಾತ್ರ ಸಿನಿಮಾಗೆ ಗ್ರೀನ್ ಸಿಗ್ನಲ್ ನೀಡುತ್ತಾರೆ. ‘ಅಜಾಗ್ರತ’ ಸಿನಿಮಾದ ಕಥೆ ಹಾಗೂ ಪಾತ್ರ ಅವರಿಗೆ ಇಷ್ಟ ಆಗಿದೆ. ಹೀಗಾಗಿ, ಸಿನಿಮಾ ಒಪ್ಪಿಕೊಂಡಿದ್ದಾರೆ. ‘ಅಜಾಗ್ರತ’ ಸೈಕಾಲಜಿಕಲ್ ಕ್ರೈಂ ಥ್ರಿಲರ್ ಶೈಲಿಯಲ್ಲಿ ಮೂಡಿ ಬರುತ್ತಿದೆ.
ಇದು ಪ್ಯಾನ್ ಇಂಡಿಯಾ ಸಿನಿಮಾ. ಏಳೂ ಭಾಷೆಗಳಲ್ಲಿ ಏಕಕಾಲಕ್ಕೆ ಶೂಟಿಂಗ್ ಮಾಡಲಾಗುತ್ತಿದೆ. ಕನ್ನಡ, ತೆಲುಗು, ತಮಿಳು, ಹಿಂದಿ ಸೇರಿ ಇತರ ಭಾಷೆಗಳಲ್ಲಿ ಸಿನಿಮಾ ಬಿಡುಗಡೆ ಆಗುತ್ತಿದೆ. ಕನ್ನಡ ಚಿತ್ರರಂಗದಿಂದ ರಾಧಿಕಾ ಕುಮಾರಸ್ವಾಮಿ, ಸ್ಪರ್ಶ ರೇಖಾ, ದೇವರಾಜ್, ಸುಚೇಂದ್ರ ಪ್ರಸಾದ್, ವಿನಯ್ ಪ್ರಸಾದ್, ಚಿತ್ರ ಶೆಣೈ, ಮುಂತಾದವರು ಸಿನಿಮಾದಲ್ಲಿ ನಟಿಸಲಿದ್ದಾರೆ. ತೆಲುಗು ಚಿತ್ರರಂಗದ ರಾವ್ ರಮೇಶ್, ಪುಷ್ಪ ಸುನಿಲ್, ರಾಘವೇಂದ್ರ ಶ್ರವಣ್ ಬಣ್ಣ ಹಚ್ಚುತ್ತಿದ್ದಾರೆ. ತಮಿಳಿನಿಂದ ಆದಿತ್ಯ ಮೆನನ್, ಸಮುದ್ರ ಕಣಿ, ಜಯ್ ಪ್ರಕಾಶ್ ಚಿತ್ರದಲ್ಲಿ ಇರಲಿದ್ದಾರೆ.
ಚಿತ್ರದ ಹೀರೋ ಬಾಲಿವುಡ್ಡಿನಲ್ಲಿ ಖ್ಯಾತಿ ಪಡೆದಿರುವ ಶ್ರೇಯಸ್ ತಲ್ಪಾಡೆ. ‘ಗೋಲ್ಮಾಲ್’ ಮೊದಲಾದ ಹಾಸ್ಯ ಸಿನಿಮಾಗಳ ಮೂಲಕ ಫೇಮಸ್ ಆಗಿದ್ದಾರೆ. ಮೇ13ರಂದು ಹೈದರಾಬಾದ್ನ ರಾಮನಾಯ್ಡು ಸ್ಟುಡಿಯೋದಲ್ಲಿ ಚಿತ್ರಕ್ಕೆ ಮುಹೂರ್ತ ನಡೆಯಲಿದೆ. ಯುವ ನಿರ್ದೇಶಕ ಎಂ. ಶಶಿಧರ್ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ನಿರ್ದೇಶಕ ಶಶಿಧರ್ ಅವರು ಫಿಲಂ ಮೇಕಿಂಗ್ನಲ್ಲಿ ಎಂ.ಎಸ್.ಸಿ ಮಾಡಿದ್ದಾರೆ. ವಿಎಫ್ಎಕ್ಸ್ನಲ್ಲೂ ಪರಿಣತಿ ಹೊಂದಿದ್ದಾರೆ. ಈ ಮೊದಲು ಅವರು ‘ಘಾರ್ಗ’ ಎಂಬ ಚಿತ್ರವನ್ನು ನಿರ್ದೇಶಿಸಿದ್ದರು



