ಡಿಂಪಲ್ ಕ್ವೀನ್ ರಚಿತಾ ರಾಮ್. ಇತ್ತೀಚೆಗೆ ಗೆದ್ದಿದ್ದಕ್ಕಿಂತ ಸೋತಿದ್ದೇ ಜಾಸ್ತಿ. ರಚಿತಾ ರಾಮ್ ಹೀರೋಯಿನ್ ಆಗಿರುವ ಚಿತ್ರಗಳು ಸಾಲು ಸಾಲು ಸೋತು ಸೊರಗಿವೆ. 2018ರಲ್ಲಿ ರಿಲೀಸ್ ಆಗಿದ್ದ ಅಯೋಗ್ಯ ಚಿತ್ರವೇ ಕೊನೆ. ಅದಾದ ಮೇಲೆ ರಚಿತಾ ರಾಮ್ ಅವರ ಚಿತ್ರಗಳು ಫ್ಲಾಪ್ ಶೋ. ಉಪೇಂದ್ರ ಜೊತೆಗಿನ ಐ ಲವ್ ಯು ವಿವಾದ ಸೃಷ್ಟಿಸಿತು. ಶಿವಣ್ಣ, ಶ್ರೀಮುರಳಿ, ಅಜೇಯ್ ರಾವ್, ರಾಣಾ (ರಕ್ಷಿತಾ ಪ್ರೇಮ್ ಸೋದರ), ಧನಂಜಯ ಜೊತೆ ನಟಿಸಿದರೂ ಸೋಲು..ಸೋಲು..ಸೋಲು.. ಇದೀಗ ಅಭಿಷೇಕ್ ಅಂಬರೀಷ್ ಜೊತೆ ಬ್ಯಾಡ್ ಮ್ಯಾನರ್ಸ್, ನೀನಾಸಂ ಸತೀಶ್ ಜೊತೆ ಮ್ಯಾಟ್ನಿ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಬಿಡುಗಡೆ ಹತ್ತಿರವಾಗಿದೆ. ಇದರ ಮಧ್ಯೆ ಕೊರಗಜ್ಜನ ಸನ್ನಿಧಿಗೆ ಭೇಟಿ ಕೊಟ್ಟಿದ್ದಾರೆ.
ರಚಿತಾ ದೈವಭಕ್ತೆ. ಇದೀಗ ಆ ಭಕ್ತಿ ದೈವಗಳ ಮೇಲೆಯೂ ಬಂದಿದೆ. ರಚಿತಾ ರಾಮ್, ಇದೇ ಮೊದಲ ಬಾರಿ ಕೊರಗಜ್ಜನ ಪೂಜೆ ಮಾಡಿದ್ಧಾರೆ. ಮಂಗಳೂರು ಹೊರವಲಯದ ಕುತ್ತಾರು ಕೊರಗಜ್ಜನ ಆದಿಕ್ಷೇತ್ರಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದಾರೆ.
ಕೊರಗಜ್ಜನಿಗೆ ನನ್ನ ಸಿನಿಮಾಗಳು ಯಶಸ್ಸು ಕಾಣಲಿ ಎಂದು ಪ್ರಾರ್ಥನೆ ಮಾಡಿದೆ ಎಂದಿದ್ದಾರೆ ರಚಿತಾ ರಾಮ್. ನನ್ನ ಸ್ನೇಹಿತರೆಲ್ಲರೂ ಕೊರಗಜ್ಜ ದೈವದ ಕಾರ್ಣಿಕದ ಬಗ್ಗೆ ಹೇಳಿದ್ದರು. ಹಾಗಾಗಿ ನನಗೂ ಇಲ್ಲಿಗೆ ಬರಬೇಕು ಅನ್ನಿಸಿತು, ಬಂದ್ಬಿಟ್ಟೆ. ಕೊರಗಜ್ಜನ ಕ್ಷೇತ್ರವು ಪ್ರಾಕೃತಿಕ ಸೌಂದರ್ಯವನ್ನೊಳಗೊಂಡಿದ್ದು, ತುಂಬಾ ಚೆನ್ನಾಗಿದೆ. ಮುಂದಿನ ಜೂನ್ ತಿಂಗಳಲ್ಲಿ ಮ್ಯಾಟ್ನಿ ಮತ್ತು ಬ್ಯಾಡ್ ಮ್ಯಾನರ್ಸ್ ಚಿತ್ರಗಳು ತೆರೆ ಕಾಣಲಿದೆ. ಆ ಚಿತ್ರಗಳು ಯಶಸ್ಸು ಕಾಣಲಿ ಎಂದು ಕೊರಗಜ್ಜನಲ್ಲಿ ಪ್ರಾರ್ಥಿಸಿದೆ’ ಎಂದು ಹೇಳಿದ್ದಾರೆ.
ಎಲ್ಲವೂ ಕಾಂತಾರ ಮಹಿಮೆ. ಇದೇ ದೇವಸ್ಥಾನಕ್ಕೆ ಇತ್ತೀಚೆಗೆ ಶಿವಣ್ಣ-ಗೀತಾ ದಂಪತಿ ಭೇಟಿ ನೀಡಿದ್ದರು. ಚಿತ್ರರಂಗದ ಹಲವರು ಕೊರಗಜ್ಜನ ಪ್ರಾರ್ಥನೆ ಸಲ್ಲಿಸಿದ್ದಾರೆ. ಕಾಂತಾರದ ನಂತರ ಕರಾವಳಿ ದೈವಗಳ ಬಗ್ಗೆ ಜನರಲ್ಲಿ ಕುತೂಹಲ ಮತ್ತು ಭಕ್ತಿ ಎರಡೂ ಹೆಚ್ಚುತ್ತಿದೆ.



