ಆರ್.ಆರ್.ಆರ್. ಚಿತ್ರದ ಖಳನಾಯಕ ರೇ ಸ್ಟೀವನ್‍ಸನ್ ವಿಧಿವಶರಾಗಿದ್ದಾರೆ. ವಯಸ್ಸಿನ್ನೂ 58 ವರ್ಷ. ಕ್ಯಾಸಿನೋ ಇನ್ ಇಸ್ಚಿಯಾ ಅನ್ನೋ ಚಿತ್ರದಲ್ಲಿ ನಟಿಸುತ್ತಿದ್ದರು. ಇಟಲಿಯಲ್ಲಿ ಚಿತ್ರೀಕರಣದಲ್ಲಿದ್ದಾಗಲೇ ದಿಢೀರನೆ ಮೃತಪಟ್ಟಿದ್ದಾರೆ. ಸಾವಿಗೆ ಕಾರಣ ತಿಳಿದು ಬಂದಿಲ್ಲ. ಶೂಟಿಂಗಿನಲ್ಲಿರುವಾಗಲೇ ಸ್ಟೀವನ್ಸನ್ ಮೃತಪಟ್ಟಿದ್ದಾರೆ. ಮೇ 25ರಂದು ಸ್ಟೀವನ್ಸನ್ ಅವರ 59ನೇ ಹುಟ್ಟುಹಬ್ಬವಿತ್ತು. ಹುಟ್ಟುಹಬ್ಬಕ್ಕೆ 3 ದಿನಗಳಿರುವಾಗ ಸಾವು ಎಳೆದೊಯ್ದಿದೆ.
ಆರ್.ಆರ್.ಆರ್. ಸಿನಿಮಾದ ಕಥೆ ಶುರುವಾಗುವುದೇ ಅವರಿಂದ. ಕೊನೆಯಾಗುವುದು ಅವರಿಂದ. ಬ್ರಿಟಿಷ್ ಅಧಿಕಾರಿಯಾಗಿ, ಬಾಲಕಿ ಮಲ್ಲಿಯನ್ನು ಹೊತ್ತುಕೊಂಡು ಹೋಗುವ ಗೌರ್ನರ್ ಸ್ಕಾಟ್ ಬಕ್ಸ್‍ಟನ್ ಪಾತ್ರದಲ್ಲಿ ಮಿಂಚಿದ್ದರು ರೇ ಸ್ಟೀವನ್‍ಸನ್. ಹಾಲಿವುಡ್ ಚಿತ್ರಗಳಲ್ಲಿ ಹೆಚ್ಚಾಗಿ ಆಕ್ಷನ್ ಚಿತ್ರಗಳಲ್ಲಿ ನಟಿಸುತ್ತಿದ್ದ ಸ್ಟೀವನ್‍ಸನ್, ಇಂಡಿಯನ್ ಸಿನಿಮಾಗಳಲ್ಲಿ ನಟಿಸಿದ್ದ ಏಕೈಕ ಸಿನಿಮಾ ಆರ್.ಆರ್.ಆರ್.
ಶಾಕಿಂಗ್ ವಿಚಾರ….ನನಗೆ ನಂಬಲಾಗದ ಸುದ್ದಿ ಇದು. ಸಿನಿಮಾ ಸೆಟ್ನಲ್ಲಿ ಕೆಲಸ ಮಾಡುವಾಗ ರೇ ಅದೆಷ್ಟೀ ಎನರ್ಜಿ ಮತ್ತು ವೈಬ್ರೆನ್ಸ್ ತಂದುಕೊಟ್ಟಿದ್ದಾರೆ. ಅವರ ಜೊತೆ ಮಾಡಿದ ಖುಷಿ ನನಗೆ ತುಂಬಾ ಇದೆ. ನನ್ನ ಪ್ರಾರ್ಥನೆ ಅವರ ಕುಟುಂಬದ ಜೊತೆ ಇರಲಿದೆ. ರೇ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪೋಸ್ಟ್ ಮಾಡಿದ್ದಾರೆ ರಾಜಮೌಳಿ.



