ಬಾರಿಸು ಕನ್ನಡ ಡಿಂಡಿಮವ..
ಓ ಕರ್ನಾಟಕ ಹೃದಯ ಶಿವ..
ಕುವೆಂಪು ಬರೆದ ಈ ಗೀತೆ ಕನ್ನಡಿಗರಲ್ಲಿ ಕನ್ನಡ ಪ್ರೇಮ ಎನ್ನುವುದು ಹೊನಲಾಗಿ ಹರಿಯತ್ತಿರುತ್ತದೆ. ಈ ಹಾಡನ್ನು ಕನ್ನಡಿಗರು ಹಾಡುವುದು ಬೇರೆ.. ಬರೆಯುವುದು ಬೇರೆ.. ಆದರೆ ಪಂಜಾಬಿಯರು ಈ ಹಾಡನ್ನು ಬರೆಯುತ್ತಾರೆಂದರೆ.. ಹೌದು, ಪಂಜಾಬಿಯಾದ, ಕನ್ನಡದಲ್ಲಿಯೇ ಗುರುತಿಸಿಕೊಂಡ ನಟಿ ಈಗ ಸ್ವತಃ ಕನ್ನಡ ಬರೆದು ಕನ್ನಡ ಡಿಂಡಿಮ ಬಾರಿಸಿದ್ದಾರೆ.
ಪೂಜಾ ಗಾಂಧಿ. ಕನ್ನಡಿಗರು ಮಳೆ ಹುಡುಗಿ ಎಂದೇ ಗುರುತಿಸುವ ಪೂಜಾ, ಮೂಲತಃ ಪಂಜಾಬಿ ಹುಡುಗಿ. ಮುಂಗಾರು ಮಳೆ ಮೊದಲ ಸಿನಿಮಾ. ಈ ಸಿನಿಮಾ ಬಂದು 17 ವರ್ಷವಾಗಿದೆ. ಯೋಗರಾಜ್ ಭಟ್, ಗಣೇಶ್ ಎಂಬ ಇಬ್ಬರು ಸ್ಟಾರ್‍ಗಳನ್ನು ಹುಟ್ಟು ಹಾಕಿದ ಚಿತ್ರದ ಮೂಲಕವೇ ಪೂಜಾ ಗಾಂಧಿ ಹೀರೋಯಿನ್ ಆದರು. ಆ ಸಿನಿಮಾದಲ್ಲಿ ಅವರು ಸಂಜನಾ ಗಾಂಧಿ. ನಂತರ ಪೂಜಾ ಗಾಂಧಿ ಎಂದು ಹೆಸರು ಬದಲಿಸಿಕೊಂಡರು. ಅದಾದ ನಂತರ ಹೆಚ್ಚೂ ಕಡಿಮೆ ಕನ್ನಡತಿಯೇ ಆಗಿ ಹೋದ ಪೂಜಾ, ಕನ್ನಡದಲ್ಲಿ ಚೆಂದವಾಗಿ ಮಾತನಾಡುತ್ತಾರೆ. ಅಂತಹ ಪೂಜಾ ಈಗ ಅಪ್ಪಟ ಕನ್ನಡತಿಯಾಗಿ ಹೋಗಿದ್ದಾರೆ. ಕನ್ನಡವನ್ನು ಬರೆಯುವುದನ್ನೂ ಕಲಿತಿದ್ದಾರೆ.


ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ….” ಎಂದು ಬರೆದುಕೊಂಡು, “ಬಾರಿಸು ಕನ್ನಡ ಡಿಂಡಿಮವ” ಹಾಡನ್ನು ಬರೆದಿರುವ ಹಾಳೆಯನ್ನು ಪೋಸ್ಟ್ ಮಾಡಿದ್ದಾರೆ.
ಕೆಲವೇ ದಿನಗಳ ಹಿಂದೆ ಡಾ.ರಾಜ್ ಅವರ ಹಾಲಿನ ಹೊಳೆಯೋ..ಜೇನಿನ ಮಳೆಯೋ.. ಹಾಡನ್ನು ಹಾಡಿ ವಿಡಿಯೋ ಬಿಟ್ಟಿದ್ದ ಪೂಜಾ, ಬಸವಣ್ಣನವರ ಉಳ್ಳವರು ಶಿವಾಲಯವ ಮಾಡುವರು.. ನಾನೇನ ಮಾಡಲಿ ಬಡವನಯ್ಯಾ.. ವಚನವನ್ನೂ ಬರೆದಿದ್ದರು. ಇದೀಗ ಕನ್ನಡ ಡಿಂಡಿಮವನ್ನೇ ಬಾರಿಸಿದ್ದಾರೆ.
ಎಷ್ಟೋ ಜನ ಕರ್ನಾಟಕದಲ್ಲಿಯೇ ಹುಟ್ಟಿ ಬೆಳೆದಿದ್ದರೂ, ಕನ್ನಡ್ ಬರಲ್ಲ ಎಂದು ಬಿಲ್ಡಪ್ ಕೊಡುತ್ತಿರುವವರ ನಡುವೆ ಪಂಜಾಬಿಯಾಗಿದ್ದರೂ ಅನ್ನ ಕೊಟ್ಟ ನೆಲದ ಭಾಷೆಯನ್ನು ಕಲಿತಿರುವ ಪೂಜಾ ಗಾಂಧಿಯನ್ನು ಅಭಿನಂದಿಸಲೇಬೇಕು. ಏಕೆಂದರೆ ಪೂಜಾ ಗಾಂಧಿಗೆ ಪಂಜಾಬಿ ಮಾತೃಭಾಷೆಯಾದರೆ, ಕನ್ನಡ ಅನ್ನದ ಭಾಷೆ. ಅನ್ನದ ಭಾಷೆಯ ಋಣ ದೊಡ್ಡದಲ್ಲವೇ..



