ದಾರಿ ಕಾಣದಾಗಿದೆ ರಾಘವೇಂದ್ರನೆ.. ಬೆಳಕ ತೋರಿ ನಡೆಸು ಬಾ ಯೋಗಿವರ್ಯನೆ..
ಮಧುರಂ.. ಮಧುರಂ..
ಆ ದೇವರೆ ನುಡಿದ ಮೊದಲ ನುಡಿ..ಪ್ರೇಮ..ಪ್ರೇಮ.. ಪ್ರೇಮವೆಂಬ ಹೊನ್ನುಡಿ..
ಜೀವನ ಸಂಜೀವನ.. ನನ್ನ ಜೀವಕೆ ನೀನೆ.. ನನ್ನ ಜೀವಕೆ ನೀನೆ..
ಭಾವವೆಂಬ ಹೂವು ಅರಳಿ, ಗಾನವೆಂಬ ಗಂಧ ಚೆಲ್ಲಿ, ರಾಗವೆಂಬ ಜೇನ ಹೊನಲು ತುಂಬಿ ಹರಿಯಲಿ..
ಬಂದಿದೆ ಬದುಕಿನ ಬಂಗಾರದಾ ದಿನ.. ಮದುವೆಯೇ ಮನುಜನ ಮೊದಲನೆ ಬಂಧನ..
ಹಾಡು ಹಳೆಯದಾದರೇನು ಭಾವ ನವ ನವೀನ..
ಸದಾ ಕಣ್ಣಲಿ ಒಲವಿನಾ ಕವಿತೆ ಹಾಡುವೆ.. ಸದಾ ನನ್ನಲಿ ಒಲವಿನ ಬಯಕೆ ತುಂಬುವೆ..
ಪ್ರಿಯತಮಾ… ಕರುಣೆಯಾ ತೋರೆಯಾ..ಸನಿಹಕೆ ಬಾರೆಯಾ.. ತೀರಿಸೆ ಬಯಕೆಯಾ..
ಬೆಸುಗೆ… ಬೆಸುಗೆ… ಜೀವನವೆಲ್ಲಾ ಸುಂದರ ಬೆಸುಗೆ..
ಮೂಡಣದಾ ರವಿ, ಮೂಡಲು ಮಮತೆಯಲಿ..
ನಗು ನೀ ನಗು, ಕಿರು ನಗೆ ನಗು.. ಮೋಹಕ ಚೆಲುವ ಕಣ್ಣ ಅಂಚಿನಲ್ಲಿ..
ಈ ಶತಮಾನದ ಮಾದರಿ ಹೆಣ್ಣು..
ಸವಿ ನೆನಪುಗಳು ಬೇಕು ಸವಿಯಲೀ ಬದುಕು..
ಕನಸಲೂ ನೀನೆ ಮನಸಲೂ ನೀನೆ ನನ್ನಾಣೆ.. ನಿನ್ನಾಣೆ..
ನಾ ನಿನ್ನ ಮರೆಯಲಾರೆ..
ಶುಭಮಂಗಳ ಸುಮುಹೂರ್ತವೇ ಶುಭವೇಳೆ..
ತೆರೆದಿದೆ ಮನೆ ಓ ಬಾ ಅತಿಥಿ.. ಹೊಸ ಬೆಳಕಿನ ಹೊಸ ಗಾಳಿಯಾ..
ನನ್ನೆದೆ ವೀಣೆಯು ಮಿಡಿಯುವುದು.. ಹೊಸರಾಗದಲಿ ಕುಣಿದಾಡುವುದು..
ದೇವ ಮಂದಿರದಲ್ಲಿ ದೇವರು ಕಾಣಲೇ ಇಲ್ಲ..ನ್ಯಾಯಮಂದಿರದಲ್ಲಿ ನ್ಯಾಯವು ಸಿಗಲೇ ಇಲ್ಲ..
ಹೋದೆಯ ದೂರ ಓ ಜೊತೆಗಾರ ಸೇರಲು ಬಂದಾಗ..
ಹೃದಯ ತುಂಬಿ ಹಾಡಿದೆ..
ಈ ಸೊಗಸಾದ ಸಂಜೆ.. ನಿನ್ನನ್ನು ನೋಡುತಾ ನನ್ನನ್ನೇ ಮರೆತೆ..
ಇವ ಯಾವ ಸೀಮೆ ಗಂಡು ಕಾಣಮ್ಮೋ..
ಮುತ್ತೇ ಪ್ರಥಮ.. ಅದುವೇ ಜಗದ ನಿಯಮ..
ನೀನು ಹತ್ತಿರ ಇದ್ದಿದ್ದರೆ.. ಏನು ಚೆಂದವೋ..
ಈ ಸೃಷ್ಟಿ ಎಂತಾ ಚೆಲುವಿನಾಲಯ..
ಮುತ್ತು ಮಳೆಗಾಗಿ ಹೊತ್ತು ಕಾದಿದೆ..
ಮಧು ಮಾಸ ಚಂದ್ರಮ.. ನೈದಿಲೆಗೆ ಸಂಭ್ರಮ.
ಶ್ರೀಕೃಷ್ಣ ಜನಿಸಿದ ಧರೆಯಲ್ಲಿ.. ದೇವಕಿ ಇರುವಾಗ ಸೆರೆಯಲ್ಲಿ..
ನಿನ್ನ ಕಣ್ಣುಗಳು.. ಮಿನುಗೋ ಚಿಟ್ಟೆಗಳು..
ಚಿನ್ನ ಚಿನ್ನ ಬೇಡ ಚಿನ್ನ..
ಓ ನಲ್ಲೆ ಸವಿನುಡಿಯ ಹೇಳೆ..
ಕೆಂಪು ತೋಟದಲ್ಲಿ ಹಾರಬೇಡವೇನೇ ಪಾರಿವಾಳವೇ..
ಒಲುಮೆ ಸಿರಿಯಾ ಕಂಡು..
ಮಾನಸ ಸರೋವರ.. ಮಾನಸ ಸರೋವರ..
ಈ ಸ್ನೇಹ ನಿನದೇ.. ಈ ಭಾವ ನಿನದೇ..
ನಿನ್ನ ಕೊಂಕು ನೋಟವಾ.. ಸಂಚು ಎನ್ನಲೇ..
ಹಾಡುವ ಮುರಳಿಯ ಕುಣಿಯುವ ಗೆಜ್ಜೆಯ..


ಇತ್ತೀಚೆಗಷ್ಟೇ ಪದ್ಮಭೂಷಣ ಪುರಸ್ಕಾರಕ್ಕೆ ಪಾತ್ರರಾಗಿದ್ದ ಖ್ಯಾತ ಗಾಯಕಿ ವಾಣಿ ಜಯರಾಂ ಅವರ ಹಾಡುಗಳ ಸಂಖ್ಯೆ ನೂರಲ್ಲ.. ಸಾವಿರವನ್ನೂ ದಾಟುತ್ತದೆ. ಇಲ್ಲಿರುವುದು ಕೇವಲ ಕೆಲವೇ ಕೆಲವು ಹಾಡುಗಳಷ್ಟೇ.. ಅವರ ಸಾವಿಗೆ ಏನು ಕಾರಣ.. ಗೊತ್ತಿಲ್ಲ. ವಯಸ್ಸು 78 ಆಗಿತ್ತು, ನಿಜ. ಆದರೆ ಸಾಯುವ ವೇಳೆಯಲ್ಲಿ ಹಣೆಯಲ್ಲಿ ಅದೇನು ಗಾಯ.. ನಿಗೂಢ ಪ್ರಶ್ನೆಗೆ ಉತ್ತರ ಸಿಗುತ್ತಿಲ್ಲ. ಚೆನ್ನೈನ ನುಂಗಂಬಾಕ್ಕಂನ ಹಡ್ಡೋಸ್ ರಸ್ತೆಯಲ್ಲಿರುವ ಅವರ ನಿವಾಸದಲ್ಲಿ ಮೃತಪಟ್ಟ ಅವರು ಮೃತಪಟ್ಟಿದ್ದರೂ ಗಾಯಕಿಯಾಗಿ ಇವತ್ತಿಗೂ.. ಇಂದು..ಎಂದೆಂದೂ ಅಜರಾಮರ.
ಕನ್ನಡ ಸೇರಿದಂತೆ ಅನೇಕ ಭಾಷೆಗಳ ಚಿತ್ರಗಳಿಗೆ ಹಾಡಿದ ಹೆಗ್ಗಳಿಕೆ ಇವರದ್ದು. 1974ರಲ್ಲಿ ಪೋಷ್ಸುಮಂಗಲಿ ಚಿತ್ರದ ಮೂಲಕ ಗಾಯಕಿಯಾಗಿ ಸಿನಿಮಾ ರಂಗ ಪ್ರವೇಶಿಸಿದ್ದ ವಾಣಿ ಜಯರಾಂ, 10000ಕ್ಕೂ ಹೆಚ್ಚು ಗೀತೆಗಳನ್ನು ಹಾಡಿದ್ದಾರೆ. ಮಾತೃಭಾಷೆ ತಮಿಳು, ತಮಿಳಷ್ಟೇ ಅಲ್ಲದೆ, ಕನ್ನಡ, ಹಿಂದಿ, ತೆಲುಗು, ತಮಿಳು, ಮಲಯಾಳಂ, ಮರಾಠಿ, ಓಡಿಯಾ, ಗುಜರಾತಿ, ಬಂಗಾಳಿ ಸೇರಿದಂತೆ ನಾನಾ ಭಾಷೆಗಳ ಸಿನಿಮಾಗಳಿಗೆ ಹಾಡಿದ ಹೆಗ್ಗಳಿಕೆ ಇವರದ್ದು. ಕನ್ನಡದಲ್ಲಿ ಸಾವಿರಕ್ಕೂ ಹೆಚ್ಚು ಗೀತೆಗಳಿಗೆ ಧ್ವನಿ ನೀಡಿದ್ದಾರೆ. ಪುಟ್ಟಣ್ಣ ಕಣಗಾಲ್ ಚಿತ್ರಗಳಿಗೆ ಹೆಚ್ಚು ಹಾಡಿದ್ದವರು. ಡಾ.ರಾಜ್ ಜೊತೆಯಲ್ಲೂ ಹಾಡಿದ್ದಾರೆ. ವಾಣಿ ಜಯರಾಂ ಅವರ ಹಾಡುಗಳನ್ನು ಹೇಳುತ್ತಾ ಹೋದರೆ ಮುಗಿಯುವುದೇ ಇಲ್ಲ. ವಾಣಿ ಜಯರಾಂ ಗಝಲ್, ಭಜನ್, ಭಕ್ತಿಗೀತೆಗಳ ಗಾಯನದಲ್ಲೂ ಮುಂಚೂಣಿಯಲ್ಲಿದ್ದವರು. ಮಲಯಾಳಂ, ತಮಿಳು, ಹಿಂದಿ ಭಾಷೆಗಳಲ್ಲಿ ಅವರ ಕವನ ಸಂಕಲನಗಳು ಪ್ರಕಟವಾಗಿವೆ. ಪಂಡಿತ್ ಬಿರ್ಜು ಮಹಾರಾಜ್ ಜೊತೆ ಗೀತ ಗೋವಿಂದವನ್ನು ಕಥಕ್ಗೆ ಅಳವಡಿಸಿರುವುದು ಅವರ ಗಮನಾರ್ಹ ಸಾಧನೆ.

ತಮಿಳಿನಲ್ಲಿ ‘ಅಪೂರ್ವ ರಾಗಂಗಳ್’, ‘ತೆಲುಗಿನಲ್ಲಿ ಶಂಕರಾಭರಣಂ’, ‘ಸ್ವಾತಿ ಕಿರಣಂ’ ಚಿತ್ರಗಳಲ್ಲಿನ ಹಿನ್ನಲೆಗಾಯನಕ್ಕೆ ರಾಷ್ಟ್ರಪ್ರಶಸ್ತಿ, ಹಲವಾರು ರಾಜ್ಯಗಳ ಶ್ರೇಷ್ಠ ಗಾಯಕಿ ಪ್ರಶಸ್ತಿ, ಸಂಗೀತ ಸಂಮಾನ್, ಹಿಂದಿ ಭಾಷೆಯನ್ನೊಳಗೊಂಡಂತೆ ಹಲವು ಭಾಷೆಗಳ ಚಿತ್ರಗಳ ಗಾಯನಕ್ಕಾಗಿ ಫಿಲಂ ಫೇರ್ ಪ್ರಶಸ್ತಿಗಳನ್ನೂ ಪಡೆದಿದ್ದಾರೆ. ಈ ವರ್ಷವಷ್ಟೇ ಪದ್ಮಭೂಷಣ ಪುರಸ್ಕಾರ ಸಂದಿತ್ತು. ಪುರಸ್ಕಾರ ಸ್ವೀಕರಿಸುವುದಕ್ಕೂ ಮುನ್ನವೇ ವಾಣಿ ಜಯರಾಂ ಇಹಲೋಕ ತ್ಯಜಿಸಿದ್ದಾರೆ.



