ನಟ ಚೇತನ್. ಆ ದಿನಗಳು ಚೇತನ್ ಎಂದೇ ಫೇಮಸ್. ಅದಾದ ಮೇಲೆ ಹಲವು ಚಿತ್ರಗಳಲ್ಲಿ ನಟಿಸಿದ್ದಾರಾದರೂ, ಆ ದಿನಗಳು ಒಂದೇ ನೆನಪಿನಲ್ಲಿ ಉಳಿಯುವ ಸಿನಿಮಾ. ಮೊದ ಮೊದಲು ಹೋರಾಟಗಳಲ್ಲಿ ಗುರುತಿಸಿಕೊಂಡಿದ್ದ ಚೇತನ್ ಅವರಿಗೆ ಎಂಡೋಸಲ್ಫಾನ್ ವಿರೋಧಿ ಹೋರಾಟ ಆರಂಭದಲ್ಲಿ ಹೆಸರು ತಂದುಕೊಟ್ಟಿತ್ತು. ಆದರೆ, ಚೇತನ್ ಒಂದೆಡೆ ನಿಲ್ಲುವವರಲ್ಲ. ಎಂಡೋಸಲ್ಫಾನ್ ಪ್ರಚಾರ ಮುಗಿಯುತ್ತಿದ್ದಂತೆಯೇ ಸೋಲಿಗರ ಹೋರಾಟ.. ಅದು ಮುಗಿಯುತ್ತಿದ್ದಂತೆಯೇ ಮತ್ತೊಂದು.. ಮಗದೊಂದು.. ಹೀಗೆ ಹೋರಾಟಗಳು ಶಿಫ್ಟ್ ಆಗುತ್ತಲೇ ಹೋದವು. ಹೋರಾಟಗಳು ತಾರ್ಕಿಕ ಅಂತ್ಯಕ್ಕೆ ಬಂದವ ಎಂದರೆ ಇಲ್ಲ. ಆದರೆ, ಚೇತನ್ ಪ್ರಚಾರದ ಹುಚ್ಚಿಗೆ ಬಿದ್ದರೇನೋ ಎನಿಸುವುದು ಸುಳ್ಳಲ್ಲ. ಯಾವುದರ ಬಗ್ಗೆ ಮಾತನಾಡಿದರೆ ಪ್ರಚಾರ ಸಿಗುತ್ತೆ ಎಂಬುದು ಲೆಕ್ಕ ಹಾಕಿಕೊಂಡೇ ಚೇತನ್ ಮಾತನಾಡುತ್ತಾರೆ. ಹೀಗಾಗಿಯೇ ಅಹಿಂಸಾ ಚೇತನ್ ಸದಾ ಸುದ್ದಿಯಲ್ಲಿರುತ್ತಾರೆ.
ಯಾರಾದರೊಬ್ಬರನ್ನು ಟೀಕಿಸುತ್ತಲೇ ಸುದ್ದಿಯಲ್ಲಿರುವ ನಟ ಚೇತನ್ ಇತ್ತೀಚೆಗೆ ಹಿಂದೂ ಧರ್ಮವನ್ನು ಸುಳ್ಳುಗಳ ಮೇಲೆ ಕಟ್ಟಿದ ಧರ್ಮ ಎಂದು ಜೈಲಿಗೂ ಹೋಗಿ ಬಂದಿದ್ದರು. ಆನಿವಾಸಿ ಭಾರತೀಯರಾಗಿರುವ, ಭಾರತೀಯ ಪೌರರಲ್ಲದ ಚೇತನ್, ಈ ಕಾರಣಕ್ಕಾಗಿಯೇ ಕಾನೂನು ಸಮರ ಎದುರಿಸುತ್ತಿದ್ದಾರೆ. ಭಾರತೀಯ ಪೌರತ್ವ ಹೊಂದಿಲ್ಲದವರು ಎಲ್ಲ ವಿಷಯಗಳ ಬಗ್ಗೆಯೂ ಮಾತನಾಡುವ ಹಾಗಿಲ್ಲ. ಕೆಲವು ನಿರ್ಬಂಧಗಳಿರುತ್ತವೆ. ಹೀಗಾಗಿಯೇ ಹಿಂದೊಮ್ಮೆ ಜೈಲು ಪಾಲಾಗಿದ್ದ ಚೇತನ್, ಇತ್ತೀಚೆಗೆ ಮತ್ತೊಮ್ಮೆ ಜೈಲಿಗೆ ಹೋಗಿ ಬಂದಿದ್ದರು. ಆದರೆ ಚೇತನ್ ಅವುಗಳ ಜೊತೆ ಹೋರಾಡುತ್ತಲೇ ತಮಗೆ ಅನ್ನಿಸಿದ್ದನ್ನು ಹೇಳುತ್ತಲೇ ಇದ್ದಾರೆ. ಈ ಬಾರಿ ಅವರು ಸುಮಲತಾ ಅಂಬರೀಷ್ ಅವರನ್ನು ಟಾರ್ಗೆಟ್ ಮಾಡಿದ್ದಾರೆ.


ಅಂಬರೀಶ್ ಅವರ ಸ್ಮಾರಕವನ್ನು ಸರ್ಕಾರವು ಕಂಠೀರವ ಸ್ಟುಡಿಯೋನಲ್ಲಿ ನಿರ್ಮಾಣ ಮಾಡಿದೆ. ಒಂದು ಎಕರೆ 34 ಗುಂಟೆ ಪ್ರದೇಶದಲ್ಲಿ ಭವ್ಯವಾಗಿ ಸ್ಮಾರಕ ನಿರ್ಮಾಣವಾಗಿದ್ದು ಇದಕ್ಕೆ ಸುಮಾರು 12 ಕೋಟಿಗೂ ಹೆಚ್ಚಿನ ಮೊತ್ತ ಖರ್ಚಾಗಿದೆ. ಅಂಬರೀಷ್ ಯಾರ ಬಳಿಯೂ ಕೈಚಾಚಿಲ್ಲ ಎಂದಿದ್ದ ಸುಮಲತಾ ಅವರ ಹೇಳಿಕೆಯನ್ನೇ ಇಟ್ಟುಕೊಂಡು ಚೇತನ್ ಅಹಿಂಸಾ ಸುಮಲತಾ ಅವರನ್ನು ಟೀಕೆ ಮಾಡಿದ್ದಾರೆ.
ಅಂದಹಾಗೆ ಮೊದ ಮೊದಲು ಚೇತನ್ ಅವರನ್ನ ಎಡಂಥೀಯರು ಬೆಂಬಲಿಸಿದ್ದರು. ಬಲಪಂಥೀಯರು ವಿರೋಧಿಸಿದ್ದರು. ಆದರೆ ಯಾವಾಗ ಎಲ್ಲರನ್ನೂ ಟಾರ್ಗೆಟ್ ಮಾಡೋಕೆ ಶುರು ಮಾಡಿದರೋ.. ಅವರ ಜೊತೆಯಲ್ಲಿದ್ದವರೆಲ್ಲ ದೂರವಾದರು. ಏಕೆಂದರೆ ಈ ಹಾದಿಯಲ್ಲಿ ಅವರು ಸಿದ್ದರಾಮಯ್ಯರನ್ನು ಅವರನ್ನೂ ಕೂಡಾ ಹಿಗ್ಗಾಮುಗ್ಗಾ ಜಾಡಿಸಿದ್ದರು. ಗಾಂಧೀಜಿಯನ್ನೂ ಬಿಟ್ಟಿರಲಿಲ್ಲ. ಎಡಪಂಥವರನ್ನೂ ನೀವಾಳಿಸಿ ತೆಗೆದಿದ್ದರು. ಅತ್ತ ಆರ್.ಎಸ್.ಎಸ್. ನ್ನು ಟೀಕಿಸಲು ಹೋಗಿ ಹಿಂದೂಗಳನ್ನೂ ಟೀಕಿಸಿದ್ದರು. ಮುಸ್ಲಿಮರನ್ನೂ ಝಾಡಿಸಿದ್ದರು. ಹೀಗಾಗಿಯೇ ಚೇತನ್ ಅವರೀಗ ಒಂಟಿ. ಅವರಿಗೀಗ ಯಾರೂ ಇಲ್ಲ. ಹಣಕ್ಕೆ ಕೊರತೆಯಿಲ್ಲ. ಹೀಗಾಗಿ.. ಹೋರಾಟಗಳು.. ಟೀಕೆಗಳ ಜಾರಿಯಲ್ಲಿವೆ.. ಅಷ್ಟೆ..



