ಓ ಮಲ್ಲಿಗೆ ಎಂಬ ಪ್ರೇಮಕಾವ್ಯ (ರೀಮೇಕ್ ಆದರೂ) ಇಂದ್ರಧನುಷ್ ಎಂಬ ಸೈಂಟಿಫಿಕ್ ಸಸ್ಪೆನ್ಸ್ ಥ್ರಿಲ್ಲರ್ (ಪಕ್ಕಾ ವೊರಿಜಿನಲ್) ಕೊಟ್ಟಿದ್ದ ವಿ.ಮನೋಹರ್, ಮತ್ತೆ ಡೈರೆಕ್ಟರ್ ಕ್ಯಾಪ್ ತೊಟ್ಟು ಬರುತ್ತಿದ್ದಾರೆ. ದರ್ಬಾರ್ ಮಾಡೋಕೆ. 23 ವರ್ಷಗಳ ನಂತರ ಎನ್ನುವುದೇ ವಿಶೇಷ. ದರ್ಬಾರ್ ಚಿತ್ರದ ಹೀರೋ ಸತೀಶ್. ಜಾನ್ವಿ ಚಿತ್ರದ ನಾಯಕಿ. ಸಾಧುಕೋಕಿಲ, ಅಶೋಕ್, ತ್ರಿವೇಣಿ ಸೇರಿದಂತೆ ದೊಡ್ಡ ದೊಡ್ಡ ಕಲಾವಿದರು ಚಿತ್ರದಲ್ಲಿದ್ದಾರೆ.
ಚಿತ್ರದಲ್ಲೊಂದು ಕ್ಯೂಟ್ ಲವ್ ಸ್ಟೋರಿ ಇದೆ. ಪಾಲಿಟಿಕ್ಸ್ ಇದೆ. ಆಕ್ಷನ್ ಇದೆ. ರೆಗ್ಯುಲರ್ ಜಾನರ್`ಗಿಂತ ವಿಭಿನ್ನವಾಗಿ ಕಾಣುವ ಕಥೆಯ ದರ್ಬಾರ್ ಜೂನ್ 9ಕ್ಕೆ ರಿಲೀಸ್ ಆಗುತ್ತಿದೆ. ಬಿ.ಎನ್.ಶಿಲ್ಪಾ ಚಿತ್ರದ ನಿರ್ಮಾಪಕರು. ಚಿತ್ರಕ್ಕೆ ಮನೋಹರ್ ಅವರು ನಿರ್ದೇಶಕರಷ್ಟೇ ಅಲ್ಲ, ಸಂಗೀತ ನಿರ್ದೇಶಕರೂ ಹೌದು.
ಚಿತ್ರದ ಹೀರೋ ಸತೀಶ್, ಬೆಳ್ಳಿತೆರೆಗೆ ಹೊಸಬರೇ ಆದರೂ, ಚಿತ್ರರಂಗದಲ್ಲಿ ಅನುಭವಿ. ಚಿತ್ರಕ್ಕೆ ಕಥೆ ಮತ್ತು ಸಂಭಾಷಣೆ ಅವರದ್ದೇ. ನಿರ್ಮಾಪಕರೂ ಅವರೇ. ಆದರೆ ಚಿತ್ರದಲ್ಲಿ ತಮಗಷ್ಟೇ ಸ್ಕ್ರೀನ್ ಪೇಸ್ ಇಟ್ಟುಕೊಂಡಿಲ್ಲ. ಎಲ್ಲರಿಗೂ ಅವಕಾಶ ಕೊಟ್ಟಿದ್ದಾರಂತೆ.
ನಾನು ಸಿನಿಮಾಗೆ ದುಡ್ಡು ಮಾಡೋಕೆ ಬಂದಿಲ್ಲ. ಒಳ್ಳೆಯ ಚಿತ್ರ ಕೊಡಬೇಕೆಂದು ಬಂದಿದ್ದೇನೆ ಎಂದಿದ್ದಾರೆ ಸತೀಶ್.


ಅಂದಹಾಗೆ ಚಿತ್ರದಲ್ಲೊಂದು ಹಾಡಿದೆ. ಹೀರೋ ಇಂಟ್ರೊಡಕ್ಷನ್ ಸಾಂಗ್ ಅದು. ನೈತಿಕ ದಾದಾಗಿರಿ ಮಾಡುವ ಹಾಡು. ಅಷ್ಟೇ ಅಲ್ಲ, ಚಿತ್ರದಲ್ಲೊಂದು ಸಂದೇಶವಿದೆ. ಹಾಗೆಂದು ಸಂದೇಶವೇ ಸಿನಿಮಾ. ಮನರಂಜನೆ ಪಕ್ಕಾ ಗ್ಯಾರಂಟಿ ಎನ್ನುತ್ತಾರೆ ಸತೀಶ್ ಮತ್ತು ಮನೋಹರ್.
ಸತೀಶ್ ಎದುರು ನಾಯಕಿ ಜಾಹ್ನವಿ. ಹುಲಿ ಕಾರ್ತಿಕ್ ವಿಲನ್. ಚಿತ್ರದ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆಗಳನ್ನು ಸತೀಶ್ ಅವರೇ ಬರೆದಿದ್ದು, ದರ್ಬಾರ್ ಪ್ರೊಡಕ್ಷನ್ಸ್ ಮೂಲಕ ಬಿ.ಎನ್. ಶಿಲ್ಪ ಅವರು ನಿರ್ಮಾಣ ಮಾಡಿದ್ದಾರೆ. ಮೂರು ಹಾಡುಗಳಿವೆ. ಒಂದು ಹಾಡನ್ನು ಚಂದನ್ ಶೆಟ್ಟಿ, ಇನ್ನೊಂದು ವಿಡಂಬನೆಯ ಗೀತೆಯನ್ನು ಉಪೇಂದ್ರ ಹಾಡಿದ್ದಾರೆ. ಚಿತ್ರದ ಯುಗಳ ಗೀತೆಗೆ ಸಾಹಿತ್ಯ ಬರೆದಿರುವುದು ಜಯಂತ ಕಾಯ್ಕಿಣಿ.



