ತಮಿಳುನಾಡಿನಲ್ಲಿ ಸಿನಿಮಾಗಳು ವಿವಾದವಾಗುವುದು ಹೊಸದೇನಲ್ಲ. ಇತ್ತೀಚೆಗೆ ಬಿಡುಗಡೆಯಾದ ಕೇರಳ ಸ್ಟೋರಿ ಚಿತ್ರ ವಿವಾದಗಳ ನಡುವೆಯೂ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಆದರೆ ಈ ಚಿತ್ರವನ್ನು ತಮಿಳುನಾಡು ಸರ್ಕಾರ ನಿಷೇಧಿಸಿತ್ತು. ನಿಷೇಧ ಹೇರಿದ್ದರೂ ಸುಪ್ರೀಂಕೋರ್ಟಿನಲ್ಲಿ ಹೇಳಿರುವುದೇ ಬೇರೆ. ಚಿತ್ರಕ್ಕೆ ಜನರೇ ಇಲ್ಲ. ಹೀಗಾಗಿ ಥಿಯೇಟರಿನವರೇ ತೆಗೆದು ಹಾಕಿದ್ದಾರೆ ಎನ್ನುವುದು ಸುಪ್ರೀಂಕೋರ್ಟಿನಲ್ಲಿ ತಮಿಳುನಾಡು ಸರ್ಕಾರದ ಅಧಿಕೃತ ಹೇಳಿಕೆ.
ಸದ್ಯಕ್ಕಂತೂ ಬಾಕ್ಸಾಫೀಸಿನಲ್ಲಿ 150 ಕೋಟಿಗೂ ಹೆಚ್ಚು ಗಳಿಕೆ ಮಾಡಿರುವ ಕೇರಳ ಸ್ಟೋರಿ, ಈ ವರ್ಷದ ಸೂಪರ್ ಹಿಟ್ ಚಿತ್ರಗಳಲ್ಲಿ ಒಂದು. ಮುಸ್ಲಿಂ ಯುವತಿಯರು ಮತಾಂತರ ಹಾಗೂ ಐಸಿಸ್ ಉಗ್ರಜಾಲಕ್ಕೆ ಹೇಗೆ ಸಿಲುಕುತ್ತಾರೆ, ಹೇಗೆಲ್ಲ ಸಂಚು ನಡೆಯುತ್ತದೆ ಎಂಬುದನ್ನು ಫಿಲ್ಟರ್ ಇಲ್ಲದೆ ನೇರಾರನೇರ ಹೇಳಿರುವುದು ವಿವಾದವನ್ನೂ ಹುಟ್ಟುಹಾಕಿದೆ. ಕೆಲವು ರಾಜ್ಯಗಳಲ್ಲಿ ಅಘೋಷಿತ ನಿಷೇಧ ಹೇರಿದ್ದರೂ, ಚಿತ್ರ ಸಕ್ಸಸ್. ಇದರ ನಡುವೆಯೇ ಮತ್ತೊಂದು ಸಿನಿಮಾ ವಿವಾದ ಹುಟ್ಟುಹಾಕಿದೆ. ಚಿತ್ರದ ಹೆಸರು ಫರ್ಹಾನಾ.
ಹಾಗಂತ ಇದು ಮುಸ್ಲಿಮ್ ಜಗತ್ತಿನ, ಉಗ್ರವಾದ, ಧರ್ಮದ ವಿಷಯ ಹೇಳಿಲ್ಲ. ಆದರೆ ಚಿತ್ರದ ಕಥೆಯಲ್ಲಿ ಬರುವ ದೃಶ್ಯಗಳಿಗೆ ಮುಸ್ಲಿಂ ಮುಖಂಡರು ವಿರೋಧ ವ್ಯಕ್ತಪಡಿಸಿದ್ದಾರೆ. ಬೆದರಿಕೆ ಪತ್ರಗಳೂ ಬಂದಿವೆ. ಹೀಗಾಗಿಯೇ ಕೇರಳ ಸ್ಟೋರಿಯ ಆದಾ ಶರ್ಮ ಅವರಂತೆಯೇ ಫರ್ಹಾನ ಚಿತ್ರದ ಐಶ್ವರ್ಯಾ ರಾಜೇಶ್ ಅವರಿಗೂ ಭದ್ರತೆ ನೀಡಲಾಗಿದೆ.
ಫರ್ಹಾನಾ ಚಿತ್ರದಲ್ಲಿರುವುದು ಮುಸ್ಲಿಂ ಗೃಹಿಣಿಯೊಬ್ಬಳ ಕಥೆ. ಬಡತನದಲ್ಲಿಯೇ ನರಳುವ ಗೃಹಿಣಿ, ಮನೆ ನಿಭಾಯಿಸಲು ಕಾಲ್ ಸೆಂಟರ್ ಕೆಲಸಕ್ಕೆ ಸೇರುತ್ತಾಳೆ. ಅದು ಲೈಂಗಿಕತೆ ಕುರಿತ ಸಮಸ್ಯೆಗಳಿಗೆ ಪರಿಹಾರ ನೀಡುವ ಕಾಲ್ ಸೆಂಟರ್. ಆ ಕೆಲಸದಿಂದಾಗಿ ಆಕೆ ಎದುರಿಸುವ ಸಮಸ್ಯೆಗಳು, ಸವಾಲುಗಳು, ಸಂಕಷ್ಟಗಳನ್ನು ಚಿತ್ರದಲ್ಲಿ ತೋರಿಸಲಾಗಿದೆ. ಅದಕ್ಕೆ ವಿರೋಧ ವ್ಯಕ್ತವಾಗಿದೆ. ಧಾರ್ಮಿಕ ಭಾವನೆಗೆ ಧಕ್ಕೆ ತರಲಾಗಿದೆ ಎಂದು ಮುಸ್ಲಿಂ ಸಂಘಟನೆಗಳು ಸಿಡಿದೆದ್ದಿವೆ.
ಫರ್ಹಾನಾ ಸಿನಿಮಾ ನಿರ್ಮಾಪಕರು ಸಹ ವಿವಾದದ ಬಗ್ಗೆ ಪ್ರತಿಕ್ರಿಯಿಸಿದ್ದು, ಸಿಬಿಎಫ್ಸಿಯಿಂದ ಸೆನ್ಸಾರ್ ಮಾಡಲಾದ ಫರ್ಹಾನಾ ಬಗ್ಗೆ ಕೆಲವು ಜನರು ಸೃಷ್ಟಿಸಿದ ವಿವಾದಗಳು ನಮಗೆ ತುಂಬಾ ನೋವನ್ನುಂಟುಮಾಡಿದೆ. ಫರ್ಹಾನಾ ಸಿನಿಮಾವು ಯಾವುದೇ ಧರ್ಮ ಅಥವಾ ಅವರ ಭಾವನೆಗಳಿಗೆ ವಿರುದ್ಧವಾಗಿಲ್ಲ. ನಮ್ಮ ಗುರಿ ಉತ್ತಮ ಚಲನಚಿತ್ರಗಳನ್ನು ನೀಡುವುದಷ್ಟೆ, ನಿರ್ದಿಷ್ಟ ಧಾರ್ಮಿಕ ಭಾವನೆಗಳಿಗೆ ಮತ್ತು ನಂಬಿಕೆಗಳಿಗೆ ವಿರುದ್ಧವಾದ ವಿಷಯಗಳಿಗೆ ನಾವು ಎಂದಿಗೂ ಘಾಸಿ ಉಂಟು ಮಾಡಿಲ್ಲ.
ಮಾನವೀಯತೆ ಮತ್ತು ಮಾನವೀಯತೆಗೆ ವಿರುದ್ಧವಾದ ಕಥೆಗಳನ್ನು ನಾವು ಹೇಳುವುದಿಲ್ಲ. ನಮ್ಮ ಸಿನಿಮಾದ ಬಗ್ಗೆ ವಿವಾದಗಳನ್ನು ಸೃಷ್ಟಿಸುತ್ತಿರುವ ನಮ್ಮ ಸಹೋದರ ಸಹೋದರಿಯರು ಇದನ್ನು ಅರ್ಥಮಾಡಿಕೊಳ್ಳಬೇಕು. ನಮ್ಮ ತಮಿಳುನಾಡು ಧಾರ್ಮಿಕ ಸೌಹಾರ್ದತೆಯ ಸ್ವರ್ಗ, ಕಲಾಕೃತಿಗಳನ್ನು ಪೋಷಿಸುತ್ತಿರುವ ನಾಡು, ಸೆನ್ಸಾರ್ ಆದ ಚಿತ್ರವನ್ನು ಅಪಾರ್ಥಗಳಿಂದ ವಿರೋಧಿಸಿ ವಿವಾದ ಸೃಷ್ಟಿಸುವುದು ಸರಿಯಲ್ಲ, ವಿರೋಧಿಸುವವರಿಗೆ ಸರಿಯಾದ ತಿಳುವಳಿಕೆ ಇಲ್ಲ ಎನಿಸುತ್ತದೆ. ನೂರಾರು ಜನರ ಶ್ರಮದಿಂದ ಚಿತ್ರ ನಿರ್ಮಿಸಲಾಗಿದೆ. ಯಾವುದೇ ದೋಷವಿಲ್ಲದ ಚಿತ್ರವನ್ನು ತಮಿಳು ಅಭಿಮಾನಿಗಳು ಬೆಂಬಲಿಸುತ್ತಾರೆ ಎಂಬ ಭರವಸೆ ಇದೆ ಎಂದಿದ್ದಾರೆ.
ಫರ್ಹಾನಾ ಸಿನಿಮಾವನ್ನು ನೆಲ್ಸನ್ ವೆಂಕಟೇಸನ್ ನಿರ್ದೇಶನ ಮಾಡಿದ್ದಾರೆ. ಪ್ರಕಾಶ್ ಬಾಬು ಹಾಗೂ ಎಸ್ಆರ್ ಬಾಬು ಈ ಸಿನಿಮಾಕ್ಕೆ ಬಂಡವಾಳ ಹೂಡಿದ್ದಾರೆ. ಸಿನಿಮಾದಲ್ಲಿ ಐಶ್ವರ್ಯಾ ರಾಜೇಶ್ ಜೊತೆಗೆ ಸೆಲ್ವ ರಾಘವನ್, ಜಿತಿನ್ ರಮೇಶ್, ಅನುಮೋಲ್, ಐಶ್ವರ್ಯಾ ದತ್ತ ನಟಿಸಿದ್ದಾರೆ.



