ರವಿಚಂದ್ರನ್ ಮತ್ತು ಖುಷ್ಬೂ ಒಟ್ಟಿಗೇ ನಟಿಸಲಿದ್ದಾರೆ. 32 ವರ್ಷಗಳ ನಂತರ ಜೊತೆಯಾಗಿ ಆಕ್ಟ್ ಮಾಡುತ್ತಿದ್ದಾರೆ ಎಂಬ ಸುದ್ದಿಯನ್ನು ಈಗಾಗಲೇ ಹಲವೆಡೆ ಓದಿರುತ್ತೀರಿ. ಆದರೆ ಅದು ಆಗಿಲ್ಲ. ಆ ಸಿನಿಮಾದ ಅಪ್`ಡೇಟ್ ಇದು.
ಅಮೃತ ಅಪಾರ್ಟ್‍ಮೆಂಟ್ ಖ್ಯಾತಿಯ ನಿರ್ದೇಶಕ ಗುರುರಾಜ್ ಕುಲಕರ್ಣಿ. ಹೀರೋ ರವಿಚಂದ್ರನ್. ಹೀರೋಯಿನ್ ಧನ್ಯಾ ರಾಮ್ ಕುಮಾರ್. ಲೀಗಲ್ ಥ್ರಿಲ್ಲರ್ ಕಥೆ.
ರವಿಚಂದ್ರನ್ ಮತ್ತು ಧನ್ಯಾ ರಾಮ್`ಕುಮಾರ್ ಇದ್ದರೂ, ಅವರಿಬ್ಬರೂ ಜೋಡಿಯಲ್ಲ. ರವಿ ಸರ್ ಅವರದ್ದು ಕಾನೂನಿನ ವ್ಯವಸ್ಥೆಯಲ್ಲೇ ಹೋರಾಡಬೇಕು ಎನ್ನುವ ಪಾತ್ರ. ಧನ್ಯಾ ಅವರದ್ದು ಒಟ್ಟಿನಲ್ಲಿ ನ್ಯಾಯ ಸಿಗಬೇಕು, ಮಾರ್ಗ ಯಾವುದಾದರೂ ಸರಿ ಎನ್ನುವ ಪಾತ್ರ. ಅವರಿಬ್ಬರೂ ಮುಖಾಮುಖಿಯಾಗುತ್ತಾರೆ. ಇಡೀ ಚಿತ್ರ ಥ್ರಿಲ್ಲರ್ ಕಥಾಹಂದರದಲ್ಲೇ ಸಾಗುತ್ತದೆ ಎನ್ನುತ್ತಾರೆ ಗುರುರಾಜ್ ಕುಲಕರ್ಣಿ.
ಗುರುರಾಜ್ ಕುಲಕರ್ಣಿಯವರಿಗೂ ಅಷ್ಟೆ, ಎಲ್ಲ ಚಿತ್ರಪ್ರೇಮಿಗಳಂತೆ ಡಾ.ರಾಜ್ ಕುಮಾರ್ ಅವರೇ ಸ್ಫೂರ್ತಿ. ನನಗೆ ಈ ಸಿನಿಮಾ ಎರಡು ರೀತಿ ಖುಷಿ ಕೊಟ್ಟಿದೆ. ಏಪ್ರಿಲ್ 24ರಂದು ಸೆಟ್ಟೇರುತ್ತಿದೆ ಹಾಗೂ ನನ್ನ ಚಿತ್ರಕ್ಕೆ ನಾಯಕಿಯಾಗಿರುವುದು ಡಾ.ರಾಜ್ ಮೊಮ್ಮಗಳು. ನಾನಂತೂ ಎಕ್ಸೈಟ್ ಆಗಿದ್ದೇನೆ ಎಂದಿದ್ದಾರೆ ಗುರುರಾಜ್ ಕುಲಕರ್ಣಿ.
ಡಾ.ರಾಜ್ ಮತ್ತು ಕುಟುಂಬದವರೆಲ್ಲರ ಜೊತೆ ರವಿಚಂದ್ರನ್ ಬಾಂಧವ್ಯ ಚೆನ್ನಾಗಿದೆ. ಶಿವಣ್ಣ ಜೊತೆ ಕೋದಂಡರಾಮ ಚಿತ್ರದಲ್ಲಿ ಹೀರೋ ಆಗಿ, ಡೈರೆಕ್ಟರ್ ಕೂಡಾ ಆಗಿದ್ದ ರವಿಚಂದ್ರನ್, ವಜ್ರಕಾಯ ಚಿತ್ರದಲ್ಲಿ ಒಂದು ಹಾಡಿನ ಸ್ಟೆಪ್ಪಿಗೆ ಹೆಜ್ಜೆ ಹಾಕಿದ್ದರು. ಗೆಳೆಯನಿಗಾಗಿ. ಪುನೀತ್ ಚಿತ್ರಗಳಿಗೆ ಅದರಲ್ಲೂ ಡಾ.ರಾಜ್ ಬ್ಯಾನರಿಗೆ ಪುನೀತ್ ಚಿತ್ರಗಳಿಗೆ ಕ್ಲಾಪ್ ಮಾಡುತ್ತಿದ್ದವರು ಕೂಡಾ ಅವರೇ. ರವಿಚಂದ್ರನ್ ಕ್ಲಾಪ್ ಮಾಡಿದರೆ ಸಿನಿಮಾ ಹಿಟ್ ಎನ್ನುವುದು ರಾಜ್ ಕುಟುಂಬದವರ ನಂಬಿಕೆ. ಆದರೆ ರವಿಚಂದ್ರನ್ ಜೊತೆ ನಟಿಸುತ್ತಿರುವ ಮೊದಲ ರಾಜ್ ಕುಟುಂಬದ ನಟಿ ಧನ್ಯಾ ರಾಮ್ ಕುಮಾರ್. ಅಫ್‍ಕೋರ್ಸ್, ರಾಜ್ ಕುಟುಂಬದಿಂದ ಚಿತ್ರರಂಗಕ್ಕೆ ಬಂದಿರುವ ಏಕೈಕ ನಟಿಯೂ ಧನ್ಯಾ ರಾಮ್ ಕುಮಾರ್ ಒಬ್ಬರೇ.



