ರೂಪಟ್ ಮರ್ಡೋಕ್, ಜಗತ್ತಿನ ಮಾಧ್ಯಮ ಲೋಕದ ದೊರೆ ಎಂದೇ ಗುರುತಿಸಲ್ಪಡುತ್ತಾರೆ. ಕೀತ್ ರೂಪಟ್ ಮರ್ಡೋಕ್ ಎಂಬುದು ಪೂರ್ತಿ ಹೆಸರು. ವಯಸ್ಸು 92. ರುಪೋರ್ಟ್ ಮುರ್ಡೋಕ್ ಫಾಕ್ಸ್ ಕಾರ್ಪೋರೇಷನ್ನ ಅಧ್ಯಕ್ಷ. ಫಾಕ್ಸ್ ಬ್ರಾಡ್ಕಾಸ್ಟಿಂಗ್, ಫಾಕ್ಸ್ ಸ್ಪೋರ್ಟ್ಸ್, ಫಾಕ್ಸ್ ಬ್ಯುಸಿನೆಸ್ ಹಾಗೂ ಫಾಕ್ಸ್ ನ್ಯೂಸ್ ಮಾಲೀಕ. ನ್ಯೂಸ್ ಕಾರ್ಪೋರೇಷನ್ನ ಮಾಲೀಕರೂ ಆಗಿರುವ ಮುರ್ಡೋಕ್, ನ್ಯೂಯಾರ್ಕ್ ಪೋಸ್ಟ್, ವಾಲ್ ಸ್ಟ್ರೀಟ್ ಜರ್ಲ್, ದಿ ಸನ್ ಹಾಗೂ ಪ್ರಕಾಶಕರಾದ ಹಾರ್ಪರ್ ಕಾಲಿನ್ಸ್ನ ಮಾಲೀಕತ್ವವನ್ನೂ ಹೊಂದಿದ್ದಾರೆ. ಹಲವು ದೇಶಗಳಲ್ಲಿ ವಿಶೇಷವಾಗಿ ಅಮೆರಿಕ, ಬ್ರಿಟನ್, ಆಸ್ಟ್ರೇಲಿಯ, ಜರ್ಮನಿ ಸೇರಿದಂತೆ ಯೂರೋಪ್ ರಾಷ್ಟ್ರಗಳಲ್ಲಿ ಮರ್ಡೋಕ್`ಗೆ ಇರುವ ಸ್ಥಾನಮಾನವೇ ಬೇರೆ. ಕೆಲವರಿಗೆ ವಿಲನ್. ಕೆಲವರಿಗೆ ಬೆಸ್ಟ್ ಫ್ರೆಂಡ್. ಮಾಧ್ಯಮವನ್ನು ಉದ್ಯಮವನ್ನಾಗಿ ಮಾಡಿ ಗೆದ್ದವರು ಮುರ್ಡೋಕ್. ಇಂತಹ ಮುರ್ಡೋಕ್ 92ನೇ ವಯಸ್ಸಲ್ಲಿ ಮತ್ತೊಂದು ಮದುವೆಗೆ ಸಿದ್ಧರಾಗಿದ್ದಾರೆ.
ಮಾಡೆಲ್ ಹಾಗೂ ನಟಿ ಜೆರ್ರಿ ಹಾಲ್ರಿಂದ ವಿಚ್ಛೇದನ ಪಡಡೆದು ಒಂದು ವರ್ಷವಾಗುವ ಮುನ್ನವೇ ಜಗತ್ತಿನ ಮಾಧ್ಯಮ ಲೋಕದ ದೊರೆ ರುಪರ್ಟ್ ಮುರ್ಡೋಕ್ ಮತ್ತೊಂದು ಮದುವೆಯಾಗಲು ಸಿದ್ಧರಾಗಿದ್ದಾರೆ. ಆಸ್ಟ್ರೇಲಿಯನ್ ಮೂಲದ ಅಮೆರಿಕದ ದಿಗ್ಗಜ ಉದ್ಯಮಿ ಪಾಲಿಗೆ 92ನೇ ವರ್ಷದಲ್ಲೂ ವೆಡ್ಡಿಂಗ್ ಬೆಲ್ ಬಾರಿಸುತ್ತಿದೆ. ತನಗಿಂತ 26 ವರ್ಷ ಕಿರಿಯಳಾಗಿರುವ 66 ವರ್ಷದ ಆನ್ ಲೆಸ್ಲಿ ಸ್ಮಿತ್ ಜೊತೆಗೆ ಕಳೆದ ಶುಕ್ರವಾರ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ಮುರ್ಡೋಕ್ ಅವರ ಮುಂದಿನ ಪತ್ನಿಯಾಗಲಿರುವ ಆನ್ ಲೆಸ್ಲಿ ಸ್ಮಿತ್, ಇದಕ್ಕೂ ಮುನ್ನ ರೇಡಿಯೋ ಹಾಗೂ ಟಿವಿಯ ಅಧಿಕಾರಿಯಾಗಿದ್ದ ಚೆಸ್ಟರ್ ಸ್ಮಿತ್ರನ್ನು ಮದುವೆಯಾಗಿದ್ದರು. ಚೆಸ್ಟರ್ ಸ್ಮಿತ್ 2008ರಲ್ಲಿ ನಿಧನರಾದ ಬಳಿಕ ಲೆಸ್ಲಿ ಸ್ಮಿತ್ ಏಕಾಂಗಿಯಾಗಿ ಬದುಕಿದ್ದರು. ಆಡಮ್ಸ್ ವರದಿಗಳ ಪ್ರಕಾರ, ಇಬ್ಬರೂ ಮಾಧ್ಯಮ ವ್ಯವಹಾರದ ಬಗ್ಗೆ ಅಪಾರವಾದ ಜ್ಞಾನವನ್ನು ಹೊಂದಿದ್ದಾರೆ. ಅದರೊಂದಿಗೆ ಲೆಸ್ಲಿ ಸ್ಮಿತ್ ಹಿಂದೊಮ್ಮೆ ಅತೀದೊಡ್ಡ ವೈನ್ಯಾರ್ಡ್ನ ಮಾಲೀಕರಾಗಿದ್ದರು. ವ್ಯವಹಾರದ ಜ್ಞಾನ ಇಬ್ಬರನ್ನು ಬೆಸೆಯಲು ಪ್ರಮುಖ ಕಾರಣವಾಗಿದೆ ಎಂದು ಬರೆದಿದ್ದಾರೆ.
ಮಾಧ್ಯಮ ದಿಗ್ಗಜ ರುಪರ್ಟ್ ಮುರ್ಡೋಕ್ ಮಾರ್ಚ್ 17 ರಂದು ನ್ಯೂಯಾರ್ಕ್ ಸಿಟಿಯಲ್ಲಿ ಲೆಸ್ಲಿ ಸ್ಮಿತ್ಗೆ ಪ್ರಪೋಸ್ ಮಾಡಿದ್ದಾರೆ. ಈ ವೇಳೆ ಸ್ವತಃ ತಾವೇ ಖುದ್ದು ಖರೀದಿ ಮಾಡಿದ್ದ ದುಬಾರಿ ವಜ್ರದ ಉಂಗುರವನ್ನು ಆಕೆಗೆ ತೊಡಿಸಿದ್ದಾರೆ. ನಾನು ಬಹಳ ನರ್ವಸ್ ಆಗಿದ್ದೆ. ಪ್ರೀತಿಯಲ್ಲಿ ಬೀಳುವುದು ನನಗೆ ಅಭ್ಯಾಸವಾಗಿದೆ. ಆದರೆ, ನನಗೆ ಗೊತ್ತು ಇದು ನನ್ನ ಕೊನೆಯ ಪ್ರೀತಿ. ಬಹುಶಃ ಹಾಗೇ ಆದರೆ ಒಳ್ಳೆಯದು. ಎಂದು ಮರ್ಡೋಕ್ ಹೇಳಿದ್ದಾರೆ.
1999 ರಿಂದ 2013ರವರೆಗೆ ವೆಂಡಿ ಡೆಂಗ್, 1967 ರಿಂದ 1999ರವರೆಗೆ ಅನ್ನಾ ಮರಿಯಾ ಟ್ರೋವ್, 1956 ರಿಂದ 1967ರವರೆಗೆ ಪ್ಯಾಟ್ರಿಕಾ ಬೂಕರ್, ಆರು ವರ್ಷಗಳ ಕಾಲ ಮಾಡಲ್ ಹಾಗೂ ನಟಿ ಜೆರ್ರಿ ಹಾಲ್ ಪತ್ನಿಯರಾಗಿದ್ದರು.



