ದುನಿಯಾ. ಈ ಸಿನಿಮಾ ಕನ್ನಡ ಚಿತ್ರರಂಗಕ್ಕೆ ಸೂರಿ ಅನ್ನೋ ನಿರ್ದೇಶಕನನ್ನೂ ವಿಜಯ್ ಅನ್ನೋ ಹೀರೋನನ್ನೂ ಸ್ಟಾರ್ ಮಾಡಿ ಕೊಟ್ಟಿತು. ಅದೇ ಚಿತ್ರದ ಪುಟ್ಟ ಪಾತ್ರ ಲೂಸ್ ಮಾದ. ಪುಟ್ಟ ಕ್ಯಾರೆಕ್ಟರಿನಿಂದಲೇ ಇಡೀ ಚಿತ್ರರಂಗ ಗುರುತಿಸಿಕೊಳ್ಳೋ ಹಾಗೆ ಮಾಡಿದ ಯೋಗಿ, ಇವತ್ತಿಗೂ ಲೂಸ್ ಮಾದ ಯೋಗಿ ಎಂದೇ ಫೇಮಸ್.
ಅದಾದ ಮೇಲೆ ನಂದಾ ಲವ್ಸ್ ನಂದಿತಾ ಚಿತ್ರದ ಮೂಲಕ ಹೀರೋ ಆದರು. ಗೆದ್ದೂ ಬಿಟ್ಟರು. ಅದಾದ ನಂತರ ಮತ್ತೊಂದು ದೊಡ್ಡ ಗೆಲುವು ಕಂಡಿದ್ದು ಅಂಬಾರಿ ಚಿತ್ರದಲ್ಲಿ. ಪುನೀತ್ ರಾಜಕುಮಾರ್ ಜೊತೆ ಹುಡುಗರು, ಯಾರೇ ಕೂಗಾಡಲಿ ಚಿತ್ರದಲ್ಲಿ ಸೆಕೆಂಡ್ ಹೀರೋ ಆಗಿ ನಟಿಸಿದ್ದ ಯೋಗಿ, ನಾನು ಅಪ್ಪು ಫ್ಯಾನ್ ಎಂದು ಅವತ್ತೇ ಹೇಳಿಕೊಂಡಿದ್ದರು. ಸಿದ್ಲಿಂಗು ಯೋಗಿ ಅವರಿಗೆ ಬೇರೆಯದೇ ಹೆಸರು ಕೊಟ್ಟ ಸಿನಿಮಾ.
ಇದರ ಮಧ್ಯೆ ಎಡವಟ್ಟುಗಳ ಮೇಲೆ ಎಡವಟ್ಟು ಮಾಡಿಕೊಂಡ ಯೋಗಿ ಸತತ ಫ್ಲಾಪ್ ಚಿತ್ರಗಳನ್ನು ಕೊಟ್ಟರು. ಇದೀಗ ಮತ್ತೊಮ್ಮೆ ಹೆಡ್ ಬುಷ್ ಚಿತ್ರದ ಗಂಗಾ ಪಾತ್ರದಿಂದ ಹೈಲೈಟ್ ಆಗಿದ್ದಾರೆ. ಹೆಡ್ ಬುಷ್ ಶೂನ್ಯ ಜೊತೆ ಯೋಗಿ ಮತ್ತೊಂದು ಸಿನಿಮಾ ಮಾಡುತ್ತಿದ್ದು, ಚಿತ್ರಕ್ಕೀಗ ರೋಸಿ ಅನ್ನೋ ಟೈಟಲ್ ಇಡಲಾಗಿದೆ.


ಸಿನಿಮಾದಲ್ಲಿ ನಿರ್ದೇಶಕ ಸೂರಿ ನನ್ನ ಮೊದಲ ಗುರು. ಅದಾದ ವರ್ಷಗಳಲ್ಲಿ, ನಾನು ನಟನಾಗಿ ವಿಕಸನಗೊಳ್ಳಲು ಸಹಾಯ ಮಾಡಿದ ಬಹಳಷ್ಟು ಜನರನ್ನು ಭೇಟಿ ಮಾಡಿದ್ದೇನೆ. ಜೀವನವು ಸಾಕಷ್ಟು ಏರಿಳಿತಗಳೊಂದಿಗೆ ಬರುತ್ತದೆ. ನಾನು ನನ್ನ ಹಿಂದಿನದರ ಬಗ್ಗೆ ಪಶ್ಚಾತ್ತಾಪ ಪಡುವುದಿಲ್ಲ ಮತ್ತು ಭವಿಷ್ಯದಲ್ಲಿ ಉತ್ತಮ ಚಿತ್ರಗಳನ್ನು ಮಾಡುವ ಭರವಸೆ ಇದೆ ಎನ್ನುವ ಯೋಗಿ ಈ ಚಿತ್ರದಲ್ಲಿ ಸ್ಟೈಲಿಷ್ ಗ್ಯಾಂಗ್‍ಸ್ಟರ್ ಅವತಾರದಲ್ಲಿ ನಟಿಸುತ್ತಿದ್ದಾರೆ.
ನಾನು ರೋಮ್ಯಾಂಟಿಕ್ ಚಿತ್ರಗಳು ಮತ್ತು ಹಾಸ್ಯಮಯ ಸಿನಿಮಾಗಳಲ್ಲಿ ನಟಿಸಲು ಪ್ರಯತ್ನಿಸಿದೆ. ಆದರೆ, ನನ್ನ ಪರವಾಗಿ ಕೆಲಸ ಮಾಡಲಿಲ್ಲ. ಈಗ ಮತ್ತೆ ಗ್ಯಾಂಗ್ಸ್ಟರ್ ಸಿನಿಮಾ, ಪಾತ್ರಗಳ ಮೂಲಕ ಮೂಲಕ್ಕೇ ಮರಳಲು ಹೊರಟಿದ್ದೇನೆ. ರೋಸಿ ಒಂದು ಟಿಪಿಕಲ್ ಗ್ಯಾಂಗ್ಸ್ಟರ್ ಚಿತ್ರವಲ್ಲ, ಇದು ನಿಜ ಜೀವನದ ಘಟನೆಯನ್ನು ಆಧರಿಸಿಲ್ಲ. ಇದು ಆನಂದದಾಯಕ ಸವಾರಿಯಾಗಿರುತ್ತದೆ ಎನ್ನುವುದು ಯೋಗಿಯ ಭರವಸೆ. ಹೆಡ್ ಬುಷ್ ಖ್ಯಾತಿಯ ಶೂನ್ಯ ನಿರ್ದೇಶಿಸುತ್ತಿರುವ ಚಿತ್ರ ರೋಸಿ. ಚಿತ್ರದ ಟೈಟಲ್‍ನ್ನು ಬಿಡುಗಡೆ ಮಾಡಿದ್ದು ಡಾಲಿ ಧನಂಜಯ. ಅಂದಹಾಗೆ ರೋಸಿ ಯೋಗಿ ಅಭಿನಯದ 50ನೇ ಸಿನಿಮಾ. ಈ 50ನೇ ಚಿತ್ರಕ್ಕೆ ಡಿ.ವೈ.ರಾಜೇಶ್ ಮತ್ತು ಡಿ.ವೈ.ವಿನೋದ್ ನಿರ್ಮಾಪಕರು. ಒಬ್ಬ ಹೀರೋ 50 ಚಿತ್ರಗಳನ್ನು ಪೂರೈಸುವುದು ಸರಳವಾದ ಮಾತಲ್ಲ. 2007ರಲ್ಲಿ ಚಿತ್ರರಂಗಕ್ಕೆ ಬಂದ ಯೋಗಿ, ಈಗ 15 ವರ್ಷಗಳಲ್ಲಿ 50 ಸಿನಿಮಾ ಮುಗಿಸಿದ್ದಾರೆ ಎನ್ನುವುದು ಸಾಧನೆಯೇ ಸರಿ.



