ಸಾಹಸಸಿಂಹ ವಿಷ್ಣುವರ್ಧನ್, ನಟರಷ್ಟೇ ಅಲ್ಲ.. ಗಾಯಕರೂ ಹೌದು. ಆದರೆ.. ಹೆಚ್ಚು ಸಿನಿಮಾಗಳಲ್ಲಿ ಹಾಡಿದವರಲ್ಲ. ವಿಷ್ಣುವರ್ಧನ್ ಅವರ ಧ್ವನಿ ಅವರು ಹಾಗೂ ಹಿನ್ನೆಲೆಯಲ್ಲಿ ಹಾಡುವ ಗೀತೆಗಳಿಗೆ ಹೊರತುಪಡಿಸಿ.. ಇತರರಿಗೆ ಹೊಂದುತ್ತಲೂ ಇರಲಿಲ್ಲ. ವಿಷ್ಣುವರ್ಧನ್ ಅವರ ಧ್ವನಿ ಸಂಭಾಷಣೆ ಹೇಳುವಾಗ ಮೃದುವಾಗಿದ್ದರೆ.. ಹಾಡುವಾಗ ಸ್ವಲ್ಪ ಗಡುಸಾಗಿಯೇ ಇರುತ್ತಿತ್ತು. ಹೀಗಿದ್ದರೂ.. ವಿಷ್ಣುವರ್ಧನ್ ಅವರು 26 ಗೀತೆಗಳಿಗೆ ಧ್ವನಿ ನೀಡಿದ್ದಾರೆ.
ನಗುವುದೇ ಸ್ವರ್ಗ (ನಾಗಕಾಳಭೈರವ), ಹೇಗಿದ್ದರೂ ನೀನೇ ಚೆನ್ನ (ಸಾಹಸಸಿಂಹ), ತುತ್ತು ಅನ್ನ ತಿನ್ನೋಕೆ (ಜಿಮ್ಮಿಗಲ್ಲು), ಒಲವಿನಾ ಜೋಡಿ (ಕಲ್ಲು ವೀಣೆ ನುಡಿಯಿತು), ಬೇಡ ಅನ್ನೋರು ಉಂಟೇ.. (ಸಿಡಿದೆದ್ದ ಸಹೋದರ), ಕಂಡದ್ದ ಕಂಡಂಗೆ ಹೇಳಿದ್ರೆ ನೀವೆಲ್ಲ (ಹುಲಿ ಹೆಜ್ಜೆ), ಕನ್ನಡವೇ ನಮ್ಮಮ್ಮ (ಮೋಜುಗಾರ ಸೊಗಸುಗಾರ), ಒಂದೇ ಒಂದು ಕ್ವಶ್ವನ್.. (ಸೂರ್ಯವಂಶ), ಅಭಿಮಾನಿಗಳೇ ನನ್ನ ಪ್ರಾಣ (ಆಪ್ತರಕ್ಷಕ).. ವಿಷ್ಣು ಹಾಡಿದ ಹಾಡುಗಳಲ್ಲಿ ಸೂಪರ್ ಹಿಟ್ ಎನಿಸಿಕೊಂಡ ಹಾಡುಗಳು. ಈಗ ಅದೇ ಹಾದಿಯಲ್ಲಿ ಅನಿರುದ್ಧ ಇದ್ಧಾರೆ.
ಅನಿರುದ್ಧ ಜತ್ಕರ್. ರಂಗಭೂಮಿಯಿಂದ ಬಂದು.. ಬೆಳ್ಳಿತೆರೆ ಹಾಗೂ ಕಿರುತೆರೆ ಎರಡರಲ್ಲೂ ಬ್ಯುಸಿಯಾಗಿರುವ ನಟ. ಇದೀಗ ಸಿಂಗರ್ ಕೂಡಾ ಆಗಿದ್ಧಾರೆ. ಅನಿರುದ್ಧ್ ಝತ್ಕರ್ ನಟಿಸಿರುವ ‘ಶೆಫ್ ಚಿದಂಬರ’ ಸಿನಿಮಾ ಬಿಡುಗಡೆಗೆ ಸಜ್ಜಾಗುತ್ತಿದೆ. ಈಗ ಈ ಸಿನಿಮಾದ ಮೊದಲ ಹಾಡನ್ನು ರಿಲೀಸ್ ಮಾಡಲಾಗಿದೆ. ಸ್ವತಃ ಅನಿರುದ್ಧ್ ಅವರೇ ಈ ಹಾಡಿಗೆ ಧ್ವನಿ ನೀಡಿದ್ದಾರೆ. ರಿತ್ವಿಕ್ ಮುರಳಿಧರ್ ಸಂಗೀತ ನೀಡಿದ್ದು, ಗಣೇಶ್ ಪರಶುರಾಮ್ ಸಾಹಿತ್ಯ ಬರೆದಿದ್ದಾರೆ.
ಹಾಡಿನ ಕೆಲವು ಭಾಗ ರ್ಯಾಪ್ ಶೈಲಿಯಲ್ಲಿದೆ. ಇದನ್ನು ರೋಹಿತ್ ಹಾಡಿದ್ದಾರೆ. ‘ಶೆಫ್ ಚಿದಂಬರ’ ಸಿನಿಮಾದ ಟೈಟಲ್ ಟ್ರ್ಯಾಕ್ಗೆ ಮೆಚ್ಚುಗೆ ಸಿಕ್ಕಿರುವುದು ಚಿತ್ರತಂಡಕ್ಕೆ ಖುಷಿ ನೀಡಿದೆ. ‘ದಮ್ತಿ ಪಿಕ್ಚರ್ಸ್’ ಮೂಕಲ ರೂಪಾ ಡಿ.ಎನ್. ಅವರು ಈ ಸಿನಿಮಾವನ್ನು ನಿರ್ಮಿಸಿದ್ದಾರೆ. ಈ ಸಿನಿಮಾಗೆ ನಿರ್ದೇಶಕ ಎಂ. ಆನಂದರಾಜ್ ಅವರೇ ಕಥೆ, ಚಿತ್ರಕಥೆ ಬರೆದಿದ್ದಾರೆ. ಗಣೇಶ್ ಪರಶುರಾಮ್ ಅವರು ಸಂಭಾಷಣೆ ಬರೆದಿದ್ದಾರೆ. ‘ಎ2 ಮ್ಯೂಸಿಕ್’ ಮೂಲಕ ‘ಶೆಫ್ ಚಿದಂಬರ’ ಸಿನಿಮಾದ ಮೊದಲ ಹಾಡು ಬಿಡುಗಡೆ ಆಗಿದೆ.
ಅನಿರುದ್ಧ ಎದುರು ನಿಧಿ ಸುಬ್ಬಯ್ಯ ಮತ್ತು ‘ಲವ್ ಮಾಕ್ಟೇಲ್ 2’ ಸಿನಿಮಾದ ಖ್ಯಾತಿಯ ರೆಚೆಲ್ ಡೇವಿಡ್ ನಟಿಸುತ್ತಿದ್ದಾರೆ. ಕೆ.ಎಸ್. ಶ್ರೀಧರ್, ಶರತ್ ಲೋಹಿತಾಶ್ವ, ಶಿವಮಣಿ ಸೇರಿದಂತೆ ಅನೇಕರು ತಾರಾಬಳಗದಲ್ಲಿದ್ಧಾರೆ. ಸಿನಿಮಾದ ಚಿತ್ರೀಕರಣ ಮತ್ತು ಪೊಸ್ಟ್ ಪ್ರೊಡಕ್ಷನ್ ಕೆಲಸ ಪೂರ್ಣಗೊಂಡಿದ್ದು, ಶೀಘ್ರದಲ್ಲೇ ತೆರೆಗೆ ಬರಲಿದೆ.