ಸಿಂಪಲ್ ಸುನಿ ಹೊಸ ಹೊಸ ಪ್ರತಿಭೆಗಳನ್ನು ಹುಡುಕುವುದರಲ್ಲಿ ಎತ್ತಿದ ಕೈ ಎಂದೇ ಹೇಳಬೇಕು. ಸುನಿ ನಿರ್ದೇಶನದ ಚಿತ್ರಗಳಲ್ಲಿ ಹೊಸಬರು ನಟಿಸಿದ್ದಾರೆ. ಹಾಗಂತ ಹೊಸಬರಲ್ಲ. ಸುನಿ ತಮ್ಮ ಚಿತ್ರಕ್ಕೆ ಆಯ್ಕೆ ಮಾಡುವ ಪಾತ್ರಧಾರಿಗಳ ವಿಷಯದಲ್ಲಿ ಕರಾರುವಾಕ್ಕು. ಒಮ್ಮೆ ಸುನಿ ಸೆಲೆಕ್ಷನ್ ಮಾಡಿದ ಮೇಲೆ ಆ ಪಾತ್ರದಲ್ಲಿ ಇನ್ನೊಬ್ಬರನ್ನು ಊಹಿಸಿಕೊಳ್ಳೋಕೆ ಸಾಧ್ಯವಿಲ್ಲ. ಈಗಾಗಲೇ ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ, ಇನ್ನೊಂದ್ ಲವ್ ಸ್ಟೋರಿ, ಚಮಕ್, ಆಪರೇಷನ್ ಅಲಮೇಲಮ್ಮ.. ಮೊದಲಾದ ಚಿತ್ರಗಳಲ್ಲಿ ಸಾಬೀತು ಕೂಡಾ ಮಾಡಿದ್ದಾರೆ. ನಿರ್ಮಾಣದ ವಿಷಯದಲ್ಲೂ ಅಷ್ಟೆ, ಉಳಿದವರು ಕಂಡಂತೆ ಚಿತ್ರ ಸೋತಿದ್ದರೂ, ಇವತ್ತಿಗೂ ರಕ್ಷಿತ್ ಶೆಟ್ಟಿ ಆ ಚಿತ್ರದ ಪಾತ್ರದ ಮೂಲಕ ಗುರುತಿಸಲ್ಪಡುತ್ತಾರೆ. ಅಂತಹ ಸುನಿ ಈಗ ತಮ್ಮ ಹೊಸ ಚಿತ್ರಕ್ಕೆ ಟಿವಿ ಸುಂದರಿಯೊಬ್ಬರನ್ನು ಕರೆತಂದಿದ್ದಾರೆ.
ವಿನಯ್ ರಾಜಕುಮಾರ್ ಜೊತೆ ಸಿಂಪಲ್ ಸುನಿ ಸಿನಿಮಾ ಮಾಡುತ್ತಿರುವುದು ಹೊಸ ಸುದ್ದಿಯೇನಲ್ಲ. ನಿರ್ದೇಶಕ ಸಿಂಪಲ್ ಸುನಿ ಮತ್ತು ನಟ ವಿನಯ್ ರಾಜಕುಮಾರ್ ಅವರ ಕಾಂಬಿನೇಷನ್ನಲ್ಲಿ ಮೂಡಿಬರುತ್ತಿರುವ ಈ ಚಿತ್ರಕ್ಕೆ ಇನ್ನೂ ಶೀರ್ಷಿಕೆ ಅಂತಿಮವಾಗಿಲ್ಲ. ಈಗಾಗಲೇ ಮೊದಲ ಹಂತದ ಶೂಟಿಂಗ್ ಮುಗಿದಿದೆ. ಈಗ ಹೀರೋಯಿನ್ ಆಯ್ಕೆಯಾಗಿದೆ.
ವಿನಯ್ ಚಿತ್ರದಲ್ಲಿ ನಾಯಕಿಯಾಗುತ್ತಿರುವ ಹುಡುಗಿ ಅಪರಿಚತರೇನಲ್ಲ. ಕನ್ನಡಿಗರಿಗೆ ರಾಧಾಕೃಷ್ಣ ಧಾರಾವಾಹಿಯ ಮೂಲಕ ಮನೆಮನೆಗೂ ತಲುಪಿರುವ ಹುಡುಗಿ, ರಾಧೆಯ ಪಾತ್ರದಲ್ಲಿ ಮಿಂಚಿದ್ದ ಮಲ್ಲಿಕಾ ಸಿಂಗ್. ಲಾಕ್ ಡೌನ್ ಸಂದರ್ಭದಲ್ಲಿ ಮಹಾಭಾರತ, ರಾಧಾಕೃಷ್ಣ ಸೇರಿದಂತೆ ಹಲವು ಧಾರಾವಾಹಿಗಳು ಕನ್ನಡಕ್ಕೆ ಡಬ್ ಆಗಿ ಪ್ರಸಾರ ಕಂಡವು. ರಾಧಾಕೃಷ್ಣ ಧಾರಾವಾಹಿಯಲ್ಲಿ ರಾಧೆಯ ಪಾತ್ರ ಮಾಡಿದ್ದ ಮಲ್ಲಿಕಾ ಸಿಂಗ್ ಅವರನ್ನು ಸುನಿ ತಮ್ಮ ಚಿತ್ರಕ್ಕೆ ನಾಯಕಿಯನ್ನಾಗಿ ಆಯ್ಕೆ ಮಾಡಿದ್ದಾರೆ.
ಅಂದಹಾಗೆ ಈ ಚಿತ್ರದಲ್ಲಿ ಮಲ್ಲಿಕಾ ಸಿಂಗ್ ಅವರದ್ದು ಕಾಶ್ಮೀರಿ ಹುಡುಗಿಯ ಪಾತ್ರ ಎನ್ನಲಾಗಿದೆ. ಕಿರುತೆರೆಯಲ್ಲಷ್ಟೇ ಅಲ್ಲ, ಗಲ್ಲಿಭಾಯ್ ಚಿತ್ರದ ಮೂಲಕ ಬಾಲಿವುಡ್ಡಿಗೂ ಪಾದಾರ್ಪಣೆ ಮಾಡಿದ್ದಾರೆ ಮಲ್ಲಿಕಾ ಸಿಂಗ್. ಈ ಚಿತ್ರದಲ್ಲಿ ಈಗಾಗಲೇ ವಿಕ್ರಂ ಚಿತ್ರದ ಖ್ಯಾತಿಯ ಸ್ವಸ್ತಿಷ್ಠ ಕೃಷ್ಣನ್ ನಟಿಸುತ್ತಿದ್ದಾರೆ. ಈಗ ಮಲ್ಲಿಕಾ ಸಿಂಗ್ ಸೇರ್ಪಡೆಯಾಗಿದ್ದಾರೆ. ಸ್ವಸ್ತಿಷ್ಟ ಜರ್ನಲಿಸ್ಟ್ ಪಾತ್ರ ಮಾಡುತ್ತಿದ್ದು, ಮಲ್ಲಿಕಾ ಸಿಂಗ್ ಕಾಶ್ಮೀರಿ ಗರ್ಲ್ ಪಾತ್ರದಲ್ಲಿದ್ದಾರೆ.



