ಕೊರಗಜ್ಜ ಚಿತ್ರದ ಚಿತ್ರೀಕರಣ ಕ್ಲೈಮಾಕ್ಸ್ ಹಂತಕ್ಕೆ ಬಂದಿದೆ. ಚಿತ್ರದ ಕ್ಲೈಮಾಕ್ಸ್ ಶೂಟಿಂಗ್`ನ್ನು ಮೂರನೇ ಬಾರಿಗೆ ಚಿತ್ರೀಕರಿಸಲಾಗಿದೆ. ವೆಚ್ಚ ದುಪ್ಪಟ್ಟಾಗಿದೆ. ಆದರೆ ಸೀನ್ ಚೆನ್ನಾಗಿ ಬರಬೇಕು ಎಂಬ ಕಾರಣಕ್ಕೆ ನಿರ್ಮಾಪಕರೂ ರಿಸ್ಕ್ ತೆಗೆದುಕೊಂಡಿದ್ದಾರೆ. ಕೋಟಿ ಕೋಟಿ ಬಜೆಟ್ನಲ್ಲಿ ತ್ರಿವಿಕ್ರಮ ಸಾಫಲ್ಯ ಅವರ ‘ಧೃತಿ ಕ್ರಿಯೇಷನ್ಸ್’ ಮತ್ತು ‘ಸಕ್ಸಸ್ ಫಿಲಂಸ್’ ಬ್ಯಾನರ್ ಮೂಲಕ ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ. ಕನ್ನಡ, ಮಲಯಾಳಂ ಹಾಗೂ ತುಳು ಭಾಷೆಗಳಲ್ಲಿ ಈ ಸಿನಿಮಾ ಮೂಡಿಬರುತ್ತಿದೆ.
ಸುಧೀರ್ ಅತ್ತಾವರ್ ಅವರು ‘ಕೊರಗಜ್ಜ’ ಸಿನಿಮಾಗೆ ನಿರ್ದೇಶನ ಮಾಡುತ್ತಿದ್ದಾರೆ. ಈ ಸಿನಿಮಾಗೆ ಅದಾಗಲೇ ಚಿತ್ರೀಕರಣ ಮುಕ್ತಾಯ ಆಗಿತ್ತು. ಎಡಿಟಿಂಗ್ ನಡೆಸುತ್ತಿದ್ದ ಸುಧೀರ್ ಅತ್ತಾವರ್ ಅವರು ಮೂರನೇ ಬಾರಿಗೆ ಕ್ಲೈಮ್ಯಾಕ್ಸ್ ದೃಶ್ಯವನ್ನು ಮರು ಚಿತ್ರೀಕರಿಸಿದ್ದಾರೆ. ಗಗನ ಚುಕ್ಕಿ ಜಲಪಾತದ ಮೇಲಿನಿಂದ ನೀರು ಧುಮುಕುವ ಅತ್ಯಂತ ಅಪಾಯಕಾರಿ ಸ್ಥಳದಲ್ಲಿ ಚಿತ್ರದ ಕ್ಲೈಮ್ಯಾಕ್ಸ್ ದೃಶ್ಯದ ಮರು ಚಿತ್ರೀಕರಣ ಮಾಡಲಾಗಿದೆ.
ಚಿತ್ರದ ಗ್ರಾಫಿಕ್ಸ್ ಕೆಲಸಕ್ಕೆ ಆಂಟ್ ಮ್ಯಾನ್, ಟ್ರೂ ಸ್ಪಿರಿಟ್, ಅಕ್ವ ಮ್ಯಾನ್ ಮೊದಲಾದ ಹಾಲಿವುಡ್ ಚಿತ್ರಗಳಿಗೆ ಕೆಲಸ ಮಾಡಿದ್ದ ತಂತ್ರಜ್ಞರನ್ನೇ ಬಳಸಿಕೊಳ್ಳಲಾಗಿದೆಯಂತೆ. ಯಲಹಂಕದ ಬಳಿ ಇರುವ ‘ಸ್ಟುಡಿಯೋ 9’ನಲ್ಲಿ ಸತತ 5 ದಿನಗಳ ಕಾಲ ಹಿರಿಯ ನಟಿ ಶ್ರುತಿ, ನಾಯಕ ನಟ ಭರತ್ ಸೂರ್ಯ ಮತ್ತು ರಂಗಭೂಮಿ ಕಲಾವಿದ ಡುಂಡ್ಸಿ ಮುಂತಾದ ಕಲಾವಿದರು ಗ್ರೀನ್ ಮ್ಯಾಟ್ ಶೂಟಿಂಗ್ನಲ್ಲಿ ಭಾಗಿ ಆಗಿದ್ದರು.
ಖ್ಯಾತ ನಟ ಕಬೀರ್ ಬೇಡಿ, ಹಿರಿಯ ಕಲಾವಿದೆ ಭವ್ಯಾ, ಸಂದೀಪ್ ಸೊಪರ್ಕರ್, ನವೀನ್ ಪಡಿಲ್ ಸೇರಿದಂತೆ ಅನೇಕ ಕಲಾವಿದರು ಚಿತ್ರದಲ್ಲಿ ಅಭಿನಯಿಸಿದ್ದಾರೆ. ಶ್ರುತಿ ಅವರು ನಿರ್ವಹಿಸುತ್ತಿರುವ ಕೊರಗಜ್ಜನ ಸಾಕು ತಾಯಿ ಬೈರಕ್ಕೆ ಬೈಕಡ್ತಿಯ ದೇವಸ್ಥಾನವು ಉಡುಪಿ ಬಳಿ ಇದೆ. ಕೊರಗಜ್ಜ ಮತ್ತು ಸಾಕುತಾಯಿ ಬೈಕಡ್ತಿಯ ಸಂಬಂಧದ ಕುತೂಹಲಕಾರಿ ಅಂಶ ಕ್ಲೈಮ್ಯಾಕ್ಸ್ ನಲ್ಲಿ ಮೂಡಿಬರಲಿದೆ.



