ಅರಳುವ ಹೂವುಗಳೇ ಆಲಿಸಿರಿ.. ಬಾಳೊಂದು ಹೋರಾಟ ಮರೆಯದಿರಿ..
ಎಂತಹ ಕುಸಿದ ಮನಸ್ಸುಗಳಿಗೂ ಸ್ಫೂರ್ತಿ ತುಂಬುವ, ಜೀವನೋತ್ಸಾಹ ತುಂಬುವ ಗೀತೆ..
ಸವಿ ಸವಿ ನೆನಪು ಸಾವಿರ ನೆನಪು.. ಹಾಡು ಕೇಳುತ್ತಿದ್ದರೆ ಎಂತಹವರು ಬಾಲ್ಯಕ್ಕೆ ಜಾರಿ ಹೋಗುತ್ತಾರೆ. ಈ ಎರಡೂ ಇದ್ದ ಅದ್ಭುತ ಚಿತ್ರ ಮೈ ಆಟೋಗ್ರಾಫ್`ಗೆ 17 ವರ್ಷ.
ಮೈ ಆಟೋಗ್ರಾಫ್ ಸಿನಿಮಾ ತೆರೆಕಂಡಿದ್ದು 2006ರಲ್ಲಿ. ಇದು ಸುದೀಪ್ ಮೊದಲ ಬಾರಿಗೆ ನಿರ್ದೇಶನ ಮಾಡಿದ ಸಿನಿಮಾ. ಜೊತೆಗೆ ಕಿಚ್ಚ ಕ್ರಿಯೇಷನ್ಸ್ ಬ್ಯಾನರ್ ಆರಂಭಿಸಿ, ಅದರ ಮೂಲಕ ಈ ಸಿನಿಮಾವನ್ನು ಸುದೀಪ್ ನಿರ್ಮಿಸಿದ್ದರು. ಕಿಚ್ಚ ಸುದೀಪ್ ಅವರ ಪ್ರಾಮಾಣಿಕ ಪ್ರಯತ್ನಕ್ಕೆ ಉತ್ತಮವಾದ ಪ್ರತಿಫಲವೇ ಸಿಕ್ಕಿತ್ತು. ಮೈ ಆಟೋಗ್ರಾಫ್ ಸಿನಿಮಾವು ಬಾಕ್ಸ್ ಆಫೀಸ್ನಲ್ಲಿ ಉತ್ತಮ ಗಳಿಕೆ ಕಂಡಿತ್ತು ಹಾಗೂ ಯಶಸ್ವೀ 25 ವಾರಗಳ ಪ್ರದರ್ಶನ ಕಂಡಿತ್ತು.
ತಮಿಳಿನ ಆಟೋಗ್ರಾಫ್ ಸಿನಿಮಾದ ರಿಮೇಕ್ ಆಗಿದ್ದ, ಚೇರನ್ ನಿರ್ದೇಶನದ ಸಿನಿಮಾ ಆಟೋಗ್ರಾಫ್. ಅರಳಿದ ಹೂವುಗಳೇ ಆಲಿಸಿರಿ.. ಇವಿತ್ತಿಗೂ ಅದೆಷ್ಟೋ ನೊಂದ ಹೃದಯಗಳಿಗೆ ಚೈತನ್ಯ, ಸ್ಫೂರ್ತಿ ತುಂಬುವ ಗೀತೆ. ಈ ಹಾಡನ್ನು ಹಾಡಿದ್ದಕ್ಕಾಗಿ ಗಾಯಕಿ ಕೆ.ಎಸ್. ಚಿತ್ರಾ ಅವರಿಗೆ ಅತ್ಯುತ್ತಮ ಗಾಯಕಿ ಫಿಲ್ಮ್ಫೇರ್ ಪ್ರಶಸ್ತಿ ಸಿಕ್ಕಿತ್ತು.
https://twitter.com/KicchaSudeep/status/1626490844592377857/photo/1
ನಾನು ನಿರ್ದೇಶಕನಾಗಿ 17 ವರ್ಷಗಳಾಗಿವೆ. ನಿರ್ದೇಶಕನ ಕುರ್ಚಿಯಲ್ಲಿ ಕೂರುವುದು ಯಾವಾಗಲೂ ಉತ್ತಮ ಭಾವನೆಯಾಗಿದೆ. ನನ್ನ ಬೆಂಬಲಕ್ಕೆ ನಿಂತ ಪ್ರತಿಯೊಬ್ಬ ನಟ, ತಂತ್ರಜ್ಞ, ನಿರ್ಮಾಣ ತಂಡ, ಸಿಬ್ಬಂದಿ ಮತ್ತು ಸೆಟ್ನಲ್ಲಿದ್ದ ಎಲ್ಲರಿಗೂ ನಾನು ಧನ್ಯವಾದ ಹೇಳುತ್ತೇನೆ ಎಂದು ಸುದೀಪ್ ಬರೆದುಕೊಂಡಿದ್ದಾರೆ.
ಪ್ರೇಮ ವೈಫಲ್ಯದಿಂದ ಬದುಕಿನ ಬಗ್ಗೆ ಭರವಸೆಯನ್ನೇ ಕಳೆದುಕೊಂಡಿದ್ದ ಯುವಕನೊಬ್ಬನ ಲೈಫ್ ಸ್ಟೋರಿ ಮೈ ಆಟೋಗ್ರಾಫ್. ಒಬ್ಬನ ಬದುಕಲ್ಲಿ ಬರುವ ಲವ್ ಸ್ಟೋರಿಗಳು, ಪ್ರೇಮಿಗಳು, ಬದುಕು, ಸೋಲು, ಭರವಸೆ, ಗೆಲುವು.. ಎಲ್ಲವನ್ನೂ ಹೇಳಿದ್ದ ಅದ್ಭುತ ಚಿತ್ರ ಮೈ ಆಟೋಗ್ರಾಫ್. ಚಿತ್ರದಲ್ಲಿ ಸುದೀಪ್ ಜೊತೆ ಮೀನಾ ಪ್ರಧಾನ ಪಾತ್ರದಲ್ಲಿ ನಟಿಸಿದ್ದರು. ದೀಪಾ, ಶ್ರೀದೇವಿಕಾ, ರಶ್ಮಿ ಕುಲಕರ್ಣಿ, ಶ್ರೀನಿವಾಸಮೂರ್ತಿ, ಮಾಲತಿಶ್ರೀ, ಯತಿರಾಜ್, ಹರೀಶ್ ಮುಂತಾದವರು ನಟಿಸಿದ್ದರು.



