ರಣಧೀರ ಚಿತ್ರದಿಂದ ಶುರುವಾದ ಜೋಡಿ ಯಾತ್ರೆ ರವಿಚಂದ್ರನ್ ಮತ್ತು ಖುಷ್ಬೂ ಅವರದ್ದು. ಕೇವಲ ನಟ ನಟಿ ಅಷ್ಟೇ ಅಲ್ಲ, ಬಾಂಧವ್ಯವೂ ಅದ್ಭುತವಾಗಿದೆ. ಸ್ನೇಹವೂ ಚೆನ್ನಾಗಿದೆ. ಖುಷ್ಬೂ ಅವರ ತಾಯಿ ಸಂಕಷ್ಟದಲ್ಲಿದ್ದಾಗ, ಆಸ್ಪತ್ರೆಯಲ್ಲಿದ್ದಾಗ ರವಿಚಂದ್ರನ್ ನೀಡಿದ ನೆರವನ್ನು ಇವತ್ತಿಗೂ ನೆನಪಿಸಿಕೊಳ್ಳುವ ಖುಷ್ಬೂ, ರವಿಚಂದ್ರನ್ ಕಷ್ಟದಲ್ಲಿದ್ದಾಗ ಚಿನ್ನತಂಬಿ ಚಿತ್ರದ ರೀಮೇಕ್ ರೈಟ್ಸ್ ಕೊಡಿಸಿದ್ದರು. ಅದೇ ರಾಮಾಚಾರಿ ಚಿತ್ರವಾಗಿದ್ದು ಇತಿಹಾಸ.
ಯಾರೆ ನೀನು ಸುಂದರ ಚೆಲುವೆ.. ಎಂದು ಹೇಳಿಕೊಂಡೇ ಕನ್ನಡಕ್ಕೆ ಬಂದ ಚೆಲುವೆ ಖುಷ್ಬೂ. ರಣಧೀರನ ಬೆಡಗಿ ಎಂದೇ ಫೇಮಸ್ ಆಗಿರುವ ಖುಷ್ಬೂ ಕನ್ನಡದಲ್ಲಿ ಬೇರೆ ಹೀರೋಗಳ ಜೊತೆ ನಟಿಸಿದ್ದರೂ, ರವಿಚಂದ್ರನ್ ಜೊತೆ ನಟಿಸಿದ್ದಷ್ಟು ಹಿಟ್ ಆಗಿಲ್ಲ. ರವಿಚಂದ್ರನ್ ಬಿಟ್ಟರೆ ಅನಂತನಾಗ್, ವಿಷ್ಣುವರ್ಧನ್, ಅಂಬರೀಷ್, ರಮೇಶ್, ರಾಮ್ ಕುಮಾರ್ ಜೊತೆ ನಟಿಸಿದ್ದಾರೆ. ವಿಶೇಷವೆಂದರೆ ಸೂಪರ್ ಹಿಟ್ ಕೊಟ್ಟಿರುವುದು ಮಾತ್ರ ರವಿಚಂದ್ರನ್ ಜೊತೆ.
ರಣಧೀರ, ಅಂಜದಗಂಡು, ಯುಗಪುರುಷ, ಶಾಂತಿ ಕ್ರಾಂತಿ.. ಹೀಗೆ ನಟಿಸಿದ್ದ ಚಿತ್ರಗಳಲ್ಲಿ ಶಾಂತಿ ಕ್ರಾಂತಿ ಬಿಟ್ಟರೆ, ಉಳಿದೆಲ್ಲ ಹಿಟ್. ಶಾಂತಿ ಕ್ರಾಂತಿಯ ನಂತರ ಇಬ್ಬರೂ ಒಟ್ಟಾಗಿ ನಟಿಸಿಲ್ಲ. ಇದೀಗ 32 ವರ್ಷಗಳ ನಂತರ ಕಾಲ ಕೂಡಿ ಬರುತ್ತಿದೆ ಅನ್ನೋ ಸುದ್ದಿ ಇದೆ.
ನಿರ್ದೇಶಕ ಗುರುರಾಜ್ ಕುಲಕರ್ಣಿ ಎಂಬುವವರು ಹೊಸದೊಂದು ಸಿನಿಮಾ ಮಾಡುತ್ತಿದ್ದಾರೆ. ಥ್ರಿಲ್ಲರ್ ಮಾದರಿಯ ಈ ಸಿನಿಮಾಗೆ ರವಿಚಂದ್ರನ್ ಅವರೇ ನಾಯಕ. ಏಪ್ರಿಲ್ 21ರಂದು ಅಧಿಕೃತವಾಗಿ ಈ ಸಿನಿಮಾ ಘೋಷಣೆ ಆಗಲಿದೆ. ಇದೀಗ ಈ ಸಿನಿಮಾದಲ್ಲಿ ನಾಯಕಿಯಾಗಿ ಖುಷ್ಬೂ ಅವರನ್ನೇ ಕರೆತರಬೇಕು ಎಂದು ನಿರ್ದೇಶಕರು ಪ್ಲ್ಯಾನ್ ಮಾಡಿದ್ದಾರೆ. ಈಗಾಗಲೇ ಖುಷ್ಬೂ ಅವರೊಂದಿಗೆ ಒಂದು ಸುತ್ತಿನ ಮಾತುಕತೆಯನ್ನು ನಿರ್ದೇಶಕರು ಮಾಡಿದ್ದು ಡೇಟ್ಸ್ ಹೊಂದಾಣಿಕೆ ಕುರಿತು ಮಾತುಕತೆ ನಡೆಯುತ್ತಿದೆ.
ಸದ್ಯಕೆಕ ಖುಷ್ಬೂ ದಿಢೀರ್ ಅನಾರೋಗ್ಯದಿಂದ ಚೇತರಿಸಿಕೊಳ್ಳುತ್ತಿದ್ದು, ಇನ್ನೂ ವಿಶ್ರಾಂತಿಯಲ್ಲಿದ್ದಾರೆ. ಸಂಪೂರ್ಣ ಗುಣಮುಖರಾಗುವ ವೇಳೆಗೆ ಸಿನಿಮಾ ಘೋಷಣೆಯೂ ಅಧಿಕೃತಾಗಿ ಹೊರಬೀಳಬಹುದು.



