ರಿಷಬ್ ಶೆಟ್ಟಿ ನಿರ್ದೇಶಿಸಿ, ನಟಿಸಿದ್ದ ಕಾಂತಾರ ಸೃಷ್ಟಿಸಿದ ದಾಖಲೆಗಳ ಪಟ್ಟಿಯೂ ಒಂದು ದಾಖಲೆಯೇ. ಒಂದಾ..ಎರಡಾ.. ಲೆಕ್ಕಕ್ಕೆ ಸಿಗದಷ್ಟು ದಾಖಲೆಗಳಿವೆ. ಚಿತ್ರ ಆಸ್ಕರ್ ಅಂಗಳಕ್ಕೂ ಕಾಲಿಟ್ಟು ಬಂದಿದೆ. ಆಸ್ಕರ್ ಕಿರೀಟ ಸಿಕ್ಕದೇ ಹೋದರೂ .. ಜನಮನ್ನಣೆಗಂತೂ ಕಡಿಮೆ ಇಲ್ಲ. ಅತೀ ಹೆಚ್ಚು ಪ್ರೇಕ್ಷಕರು ಚಿತ್ರಂದಿರದಲ್ಲಿ ನೋಡಿದ ಸಿನಿಮಾ ಕಾಂತಾರ ಎಂಬ ದಾಖಲೆಯೂ ಅವರದ್ದೇ. ಒಟಿಟಿಯಲ್ಲಿ, ಟಿವಿಯಲ್ಲಿ ರೇಟಿಂಗ್ ದಾಖಲೆ ಬರೆದ ಕಾಂತಾರ ಚಿತ್ರದ ಇನ್ನೊಂದು ಭಾಗ ಮಾಡಬೇಕು ಎಂಬ ಡಿಮ್ಯಾಂಡ್ ಶುರುವಾಗಿದೆ. ಈಗಾಗಲೇ ಕಾಂತಾರ ಚಿತ್ರವನ್ನ ನೆಟ್`ಫ್ಲಿಕ್ಸ್‍ನವರು ಖರೀದಿ ಮಾಡಿದ್ದು, ಅವರು ಇಂಗ್ಲಿಷಿನಲ್ಲಿ ಕಾಂತಾರವನ್ನು ತರಲಿದ್ದಾರೆ. ಅಲ್ಲಿಗೆ ಕನ್ನಡ, ತೆಲುಗು, ತಮಿಳು, ಮಲಯಾಳಂ, ಹಿಂದಿ ಹಾಗೂ ತುಳುವಿನಲ್ಲಿ ಬಂದಿದ್ದ ಕಾಂತಾರ, ಇಂಗ್ಲಿಷಿನಲ್ಲೂ ರಿಲೀಸ್ ಆದರೆ 7 ಭಾಷೆಗಳಲ್ಲಿ ರಿಲೀಸ್ ಆದ ದಾಖಲೆ ಬರೆಯಲಿದೆ. ಹೀಗೆ ಅತೀ ಹೆಚ್ಚು ದಾಖಲೆ ಬರೆದ ಚಿತ್ರ ಎಂಬ ದಾಖಲೆಯನ್ನೂ ಈ ಲಿಸ್ಟಿಗೆ ಸೇರಿಸಬಹುದು.


ಕಾಂತಾರ 300 ಕೇಂದ್ರಗಳಲ್ಲಿ 50 ದಿನ ಪೂರೈಸಿದ್ದರೆ, 250 ಚಿತ್ರಮಂದಿರಗಳಲ್ಲಿ 75 ದಿನ ಪೂರೈಸಿದೆ. 100 ದಿನ ಪೂರೈಸಿದ ಚಿತ್ರಮಂದಿರಗಳ ಸಂಖ್ಯೆ 100ಕ್ಕೂ ಹೆಚ್ಚು. ಅಷ್ಟೇ ಅಲ್ಲ, ಕಾಂತಾರ ಕನ್ನಡ ಹಾಗೂ ಹಿಂದಿಯಲ್ಲಿ ನೂರು ದಿನ ಪೂರೈಸಿದ್ದರೆ, ಉಳಿದ ತೆಲುಗು, ತಮಿಳು ಹಾಗೂ ಮಲಯಾಳಂನಲ್ಲಿ 50 ದಿನ ಪೂರೈಸಿದೆ.
ಚಿತ್ರ ಶತದಿನೋತ್ಸವ ಆಚರಿಸಿದ್ದ ಹಿನ್ನೆಲೆಯಲ್ಲಿ ಚಿತ್ರತಂಡ ಬೆಂಗಳೂರು ಭಂಟರ ಭವನದಲ್ಲಿ ಶತದಿನೋತ್ಸವ ಸಮಾರಂಭ ಆಯೋಜಿಸಿತ್ತು. ತುಳುನಾಡಿನ ಸಂಪ್ರದಾಯದಂತೆ ಅಲಂಕರಿಸಲ್ಪಟ್ಟಿದ್ದ ವೇದಿಕೆಯಲ್ಲಿ ಚಿತ್ರತಂಡದ ತಂತ್ರಜ್ಞರು, ಕಲಾವಿದರು, ಪ್ರದರ್ಶಕರು, ವಿತರಕರು ಸೇರಿದಂತೆ 500ಕ್ಕೂ ಹೆಚ್ಚು ಮಂದಿ ಸೇರಿದ್ದರು. ಎಲ್ಲರಿಗೂ ನೆನಪಿನ ಕಾಣಿಕೆ ನೀಡಿ, ಇಡೀ ಚಿತ್ರತಂಡ ಒಟ್ಟಿಗೇ ಊಟ ಮಾಡಿ ಕಾಂತಾರ ಶತದಿನೋತ್ಸವವನ್ನು ಹಬ್ಬದಂತೆ ಸಂಭ್ರಮಿಸಿತು.


ಕಾಂತಾರ 2ನಲ್ಲಿ ಏನಿರಲಿದೆ?
ಮೂಲಗಳ ಪ್ರಕಾರ ಕಾಂತಾರ ಪ್ರೀಕ್ವೆಲ್ ಚಿತ್ರದ ಕಥೆ ಇನ್ನೂ 100 ವರ್ಷಗಳಷ್ಟು ಹಿಂದೆ ಹೋಗಲಿದೆ. ಚಿತ್ರದಲ್ಲಿ ರಾಜನಿಗೆ ನೆಮ್ಮದಿಯಿಲ್ಲದ ಕಥೆ ಬರುತ್ತದಲ್ಲ, ಆ ಕಥೆ ಹೇಳುವ ನಿರೀಕ್ಷೆ ಇದೆ. ರಾಜ ನೆಮ್ಮದಿ ಕಳೆದುಕೊಂಡಿದ್ದು ಏಕೆ? ಆ ಕಾಲದಲ್ಲಿ ನಡೆದ ಘಟನೆಗಳೇನು? ಈ ಎಲ್ಲವನ್ನೂ ಒಟ್ಟುಗೂಡಿಸಿ ಕಥೆ ಸಿದ್ಧವಾಗಿದ್ದು, ಚಿತ್ರಕತೆಯ ತಯಾರಿಯಲ್ಲಿದ್ದಾರಂತೆ. ಕಾಂತಾರ ಪ್ರೀಕ್ವೆಲ್`ಗೆ ದೊಡ್ಡ ನಟರೊಬ್ಬರ ಎಂಟ್ರಿಯಾಗಲಿದ್ದು, ಮತ್ತೊಂದು 500 ಕೋಟಿಯ ಚಿತ್ರ ಲೋಡಿಂಗ್ ಆಗುತ್ತಿದೆ ಎಂದೇ ಹೇಳಬಹುದು.



