ಕನ್ನಡಿಗರ ಹೆಮ್ಮೆಯ ಕಾಂತಾರ ಈಗ ಹಿಂದಿಯಲ್ಲೂ ಶತದಿನವೋತ್ಸವ ಆಚರಿಸಿದೆ. ಕಾಂತಾರ ಕನ್ನಡದಲ್ಲಿ 100 ದಿನ ಪೂರೈಸಿದ ಬೆನ್ನಲ್ಲೇ, ಚಿತ್ರ ಆಸ್ಕರ್ ಅಂಗಳಕ್ಕೆ ಜಗಿದಿತ್ತು. ಪ್ರಶಸ್ತಿ ನಾಮನಿರ್ದೇಶನದ ಪೈಪೋಟಿಗೆ ಹೋಗುವ ಅರ್ಹತೆ ಗಿಟ್ಟಿಸಿಕೊಂಡಿತ್ತು. ಆ ಫಲಿತಾಂಶ 24ರಂದು ತಿಳಿಯಲಿದೆ. ಇದರ ನಡುವೆಯೇ ಚಿತ್ರ ಹಿಂದಿಯಲ್ಲೂ ಶತದಿನೋತ್ಸವ ಆಚರಿಸಿದೆ. ಕಾಂತಾರ ಕನ್ನಡದಲ್ಲಿ ರಿಲೀಸ್ ಆಗಿ ಯಶಸ್ಸಿನ ನಾಗಾಲೋಟದಲ್ಲಿದ್ದಾಗ ಹಿಂದಿಯಲ್ಲೂ ರಿಲೀಸ್ ಮಾಡುವ ಡಿಮ್ಯಾಂಡ್ ಸೃಷ್ಟಿಯಾಯ್ತು.




ಕಾಂತಾರ ಎಂದರೆ ಅರ್ಥ ನಿಗೂಢತೆ. ಅದಕ್ಕೆ ತಕ್ಕಂತೆಯೇ ಕಾಂತಾರದ ಯಶಸ್ಸಿನ ಕಾರಣವೂ ನಿಗೂಢ. ಏಕೆಂದರೆ ಇದೇ ಕಾರಣ ಎಂದು ವಿಜಯ್ ಕಿರಗಂದೂರು ಅವರಾಗಲೀ.. ನಟ, ನಿರ್ದೇಶಕ ರಿಷಬ್ ಶೆಟ್ಟಿ ಅವರಾಗಲೀ ಹೇಳೋದಿಲ್ಲ. ಎಲ್ಲವನ್ನೂ ದೈವದತ್ತ ತೋರಿಸುತ್ತಾರೆ. ಕಾಂತಾರ ಸೃಷ್ಟಿಸಿದ ಕ್ರೇಜ್ ಅಂತದ್ದು. ಅಂದಹಾಗೆ ಈಗ ಕಾಂತಾರ 2 ಕಥೆ ಸಿದ್ಧವಾಗುತ್ತಿದೆಯಂತೆ. ಕಾಂತಾರ 2 ಬಗ್ಗೆ ಕೇಳಿದಾಗಲೆಲ್ಲ ರಿಷಬ್ ಶೆಟ್ಟಿ ನಾವು ರೆಡಿ ಎಂದೂ ಹೇಳಿರಲಿಲ್ಲ. ಇಲ್ಲವೇ ಇಲ್ಲ, ಸಾಧ್ಯವಿಲ್ಲ ಎಂದು ಕೂಡಾ ಹೇಳಿರಲಿಲ್ಲ. ಆದರೆ ಈಗ ನಿರ್ಮಾಪ ವಿಜಯ್ ಕಿರಗಂದೂರು ಕಾಂತಾರ 2 ಬರಲಿದೆ. ಪ್ಯಾನ್ ಇಂಡಿಯಾ ರೂಪದಲ್ಲಿಯೇ ಬರಲಿದೆ ಎಂದು ಹೇಳಿದ್ದಾರೆ. ಕಥೆ ಮೇಲೆ ರಿಷಬ್ ಶೆಟ್ಟಿ ವರ್ಕ್ ಮಾಡುತ್ತಿದ್ದು, ಕಥೆ ಸಿದ್ಧವಾದ ಮೇಲಷ್ಟೇ ಕಾಂತಾರ 2 ಸೆಟ್ಟೇರಲಿದೆ ಎಂದಿದ್ದಾರೆ. ಹಾಗಂತ ಇದು ಕಾಂತಾರ ಸೀಕ್ವೆಲ್ ಅಲ್ಲ, ಪ್ರೀಕ್ವೆಲ್ ಎಂಬ ಮಾಹಿತಿ ಹೊರಬಿದ್ದಿದೆ.


ಅಷ್ಟೇ ಅಲ್ಲ, ದಿಗಂತ್ ನಟಿಸಬೇಕಿದ್ದ ಬ್ಯಾಚುಲರ್ ಪಾರ್ಟಿ ಚಿತ್ರದಿಂದಲೂ ರಿಷಬ್ ಹೊರಬಿದ್ದಿದ್ದಾರೆ. ಸದ್ಯಕ್ಕೆ ರಿಷಬ್ ಶೆಟ್ಟಿ ಕಾಂತಾರದಂತೆಯೇ ಒಂದು ನಿಗೂಢ ಜಾಗದಲ್ಲಿದ್ದಾರೆ. ಅದು ವಿಜಯ್ ಕಿರಗಂದೂರು ಅಥವಾ ಅವರ ಕುಟುಂಬದವರಿಗೆ ಗೊತ್ತಿಲ್ಲದ್ದೇನಲ್ಲ. ಮೊಬೈಲ್ ನೆಟ್ವರ್ಕ್ ಸಿಗದ ಜಾಗದಲ್ಲಿರೋ ರಿಷಬ್ ಶೆಟ್ಟಿ, ಕಾಂತಾರ 2ಗೆ ಸಿದ್ಧವಾಗುತ್ತಿದ್ದಾರೆ. ಕೋಲ ಮುಗಿಯುತ್ತಿದ್ದಂತೆಯೇ ರಿಷಬ್ ಶೆಟ್ಟಿ ಕಾಂತಾರ 2 ಪಯಣಕ್ಕೆ ಹೊರಟಿದ್ದಾರೆ.
ಕಾಂತಾರ 2 ನಲ್ಲಿ ಕೋರ್ಟಿನ ಮೆಟ್ಟಿಲ ಮೇಲೆ ರಕ್ತಕಾರಿಕೊಂಡು ಸಾಯುವ ವ್ಯಕ್ತಿಯ ಪಾತ್ರ ಹಾಗೂ ಶಿವನ ತಂದೆಯ ಪಾತ್ರ ಹೈಲೈಟ್ ಆಗಲಿದೆ. ಅಷ್ಟೇ ಅಲ್ಲ, ಅರ್ಧ ಪ್ರೀಕ್ವೆಲ್ ಹಾಗೂ ಇನ್ನರ್ಧ ಸೀಕ್ವೆಲ್, ಎರಡನ್ನೂ ಬ್ಲೆಂಡ್ ಮಾಡಿ ಚೆಂದದ ಕಥೆ ಸಿದ್ಧ ಪಡಿಸುತ್ತಿದ್ದಾರಂತೆ ರಿಷಬ್ ಶೆಟ್ಟಿ.



