ಕಾಂತಾರದಲ್ಲಿ ಕಂಬಳ, ಕೆಸರುಗದ್ದೆಯ ಆಟವಿತ್ತು. ಕಾಂತಾರ2ನಲ್ಲಿ ಕಲರಿಪಯಟ್ಟು ಇರುತ್ತಾ..? ಕುದುರೆ ಸವಾರಿಯೂ ನಡೆಯುತ್ತಾ..? ಯುದ್ಧ ಸನ್ನಿವೇಶಗಳಿರುತ್ತವಾ..? ಕುತೂಹಲದ ಮೇಲೆ ಕುತೂಹಲ ಹುಟ್ಟಿಸಿದ್ದಾರೆ ರಿಷಬ್ ಶೆಟ್ಟಿ.
ಕಾಂತಾರ ಚಿತ್ರದ ಸೀಕ್ವೆಲ್ ಅಥವಾ ಅವರೇ ಹೇಳುತ್ತಿರುವಂತೆ ಪ್ರೀಕ್ವೆಲ್ ಮಾಡಲು ತಯಾರಿ ಜೋರಾಗಿದೆ. ನಿರೀಕ್ಷೆಯಂತೂ ಮುಗಿಲು ಮುಟ್ಟಿದೆ. ರಿಷಬ್ ಶೆಟ್ಟಿಯವರೇನೋ ಕಥೆಯನ್ನು ಸಿದ್ಧ ಮಾಡಿಕೊಂಡಿದ್ದಾರೆ. ಹೊಂಬಾಳೆಯವರು ಪ್ರೊಡಕ್ಷನ್ ಕೆಲಸಗಳ ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಕಾಂತಾರ ಚಿತ್ರದ ಮುಹೂರ್ತವಾದ ಸ್ಥಳದಲ್ಲಿಯೇ ಕಾಂತಾರ 2 ಮುಹೂರ್ತವೂ ನೆರವೇರಲಿದೆ. ಇದರ ನಡುವೆ ರಿಷಬ್ ಶೆಟ್ಟಿ ಕಲರಿಪಯಟ್ಟು ಮತ್ತು ಕುದುರೆ ಸವಾರಿಗಳನ್ನೂ ಕಲಿಯುತ್ತಿದ್ದಾರಂತೆ.
ರಿಷಬ್ ಶೆಟ್ಟಿ, ಕಾಂತಾರ ಚಿತ್ರಕ್ಕಾಗಿ ದೈವ ನೃತ್ಯವನ್ನು ಪ್ರಾಕ್ಟೀಸ್ ಮಾಡಿದ್ದರು. ಈಗ ಕಾಂತಾರ 2 ಚಿತ್ರಕ್ಕಾಗಿ ಕಲರಿಪಯಟ್ಟುನಂತಹ ಸಮರ ಕಲೆ ಮತ್ತು ಕುದುರೆ ಸವಾರಿ ಕಲಿಯುತ್ತಿರುವುದು ಏಕೆ..? ಹಾಗಾದರೆ ಸಾಹಸ ದೃಶ್ಯಗಳು ಭರ್ಜರಿಯಾಗಿರುತ್ತವಾ.. ನಿರೀಕ್ಷೆಗಳು ಜೋರಾಗಿವೆ. ಕಲರಿಪಯಟ್ಟು ಕೇರಳದ ಸಮರ ಕಲೆ. ಈಗ ನಾವು ನೋಡಿರುವ ಕಾಂತಾರ ಚಿತ್ರವೂ 70-80ರ ದಶಕದ ಕಥೆ. ಇದಕ್ಕೂ ಹಿಂದೆ ಎಂದರೆ.. ಎಷ್ಟು ಹಿಂದೆ.. ಸ್ವಾತಂತ್ರ್ಯ ಪೂರ್ವದ ಕಥೆಯೂ ಇರುತ್ತದಾ.. ನಿರೀಕ್ಷೆ ಮಾಡಿಕೊಳ್ಳೋದಷ್ಟೆ. ಒಂದಂತೂ ಸತ್ಯ, ಕಾಂತಾರ 2 ಕೂಡಾ, ಕಾಂತಾರಕ್ಕಿಂತ ವಿಭಿನ್ನವಾಗಿರಲಿದೆ. ಇವೆಲ್ಲದರ ಮಧ್ಯೆ ರಿಷಬ್ ಶೆಟ್ಟಿ-ಪ್ರಗತಿ ಶೆಟ್ಟಿ ಅಮೆರಿಕಕ್ಕೆ ಹಾರಿದ್ದಾರೆ.



