ಕಬ್ಜ. ಆರಂಭದಿಂದಲೂ ಚಿತ್ರದಲ್ಲಿ ಸುದ್ದಿಯಾಗಿದ್ದು ರಿಯಲ್ ಸ್ಟಾರ್ ಉಪೇಂದ್ರ ಮತ್ತು ಕಿಚ್ಚ ಸುದೀಪ್ ಇದ್ದಾರೆ ಎನ್ನುವುದೇ. ಆದರೆ.. ರಿಲೀಸ್ ಹತ್ತಿರವಾಗುತ್ತಿದ್ದಂತೆಯೇ ಹೊರಬಿದ್ದ ವಿಷಯ ಈ ಚಿತ್ರದಲ್ಲಿ ಶಿವಣ್ಣ ಕೂಡಾ ಇದ್ದಾರೆ ಎನ್ನುವುದೇ. ಅದನ್ನು ಅಭಿಮಾನಿಗಳು ನಿರೀಕ್ಷಿಸಿರಲಿಲ್ಲ. ಕಬ್ಜದಲ್ಲಿ ಶಿವಣ್ಣ ಕೂಡಾ ಇದ್ದಾರೆ ಎನ್ನುವುದು ಶಿವರಾಜ್ ಕುಮಾರ್ ಫ್ಯಾನ್ಸ್‍ಗೆ ಖುಷಿ ಕೊಟ್ಟಿರುವುದೇನೋ ನಿಜ. ಆದರೆ ಶಿವಣ್ಣ ಪಾತ್ರವನ್ನು ರಿವೀಲ್ ಮಾಡಿದ ಆರ್.ಚಂದ್ರು ಅವರ ಸೋಷಿಯಲ್ ಮೀಡಿಯಾ ಪೇಜಿಗೆ ಹೋಗಿ ಕಮೆಂಟ್ಸ್ ನೋಡಬೇಕು. ಬಹುತೇಕ ಜನ ಶಿವಣ್ಣ ಪಾತ್ರ ರಿವೀಲ್ ಮಾಡಿದ್ದನ್ನು ಒಪ್ಪಿಲ್ಲ. ಹಾಗಂತ ಅವರೇನೂ ಶಿವಣ್ಣ ವಿರೋಧಿಗಳೂ ಅಲ್ಲ. ಎಲ್ಲರೂ ಶಿವಣ್ಣ ಫ್ಯಾನ್ಸ್. ಹೀಗಿದ್ದರೂ ಅವರು ಶಿವಣ್ಣ ಪಾತ್ರ ರಿವೀಲ್ ಆಗಿದ್ದನ್ನು ಬೇಡ ಎಂದಿದ್ದೇಕೆ ಎಂದರೆ ಕಾರಣವೂ ಇತ್ತು.
ಇತ್ತೀಚೆಗೆ ತಮಿಳಿನಲ್ಲಿ ಬಂದ ವಿಕ್ರಂ ಚಿತ್ರದಲ್ಲಿ ಸೂರ್ಯ ಪಾತ್ರ ಆ ರೀತಿ ಸರ್‍ಪ್ರೈಸ್ ಕೊಡುತ್ತೆ. ಸೂರ್ಯ ಪಾತ್ರ ತೆರೆಯ ಮೇಲೆ ಬಂದಾಗ ಕೊಡುವ ಥ್ರಿಲ್ಲೇ ಬೇರೆ. ಆ ರೀತಿಯಲ್ಲಿಯೇ ಚಿತ್ರ ರಿಲೀಸ್ ಆಗುವವರೆಗೆ ಶಿವಣ್ಣ ಪಾತ್ರ ಸಸ್ಪೆನ್ಸ್ ಆಗಿಯೇ ಇರಬೇಕಿತ್ತು. ನೀವು ನಮಗೆ ಥಿಯೇಟರ್ ಥ್ರಿಲ್ ಮಿಸ್ ಮಾಡಿದ್ರಿ ಎಂದಿದ್ದರು ಬಹುತೇಕ ಅಭಿಮಾನಿಗಳು.


ಇದನ್ನು ವೇದಿಕೆಯಲ್ಲಿಯೇ ಖುದ್ದು ಹೇಳಿದ್ದು ರಿಯಲ್ ಸ್ಟಾರ್ ಉಪೇಂದ್ರ. ಬೆಂಗಳೂರಿನಲ್ಲಿ ನಡೆದ ಪ್ರೀ-ರಿಲೀಸ್ ಈವೆಂಟ್‍ನಲ್ಲಿ ಮಾತನಾಡಿರೋ ಉಪೇಂದ್ರ ಎಲ್ಲ ಭಾರವನ್ನೂ ಆರ್.ಚಂದ್ರು ಹೆಗಲಿಗೇ ಹೊತ್ತು ಹಾಕಿದ್ರು. ಮಾರ್ಚ್ 17ರಂದು ಕಬ್ಜ ರಿಲೀಸ್ ಆಗುತ್ತಿದ್ದು, ಒಂದು ಕಡೆ ಅಪ್ಪು ಜಯಂತಿ ನಡೆಯುತ್ತಿದ್ದರೆ, ಇನ್ನೊಂದು ಕಡೆ ಕಬ್ಜ ಉತ್ಸವ ನೆರವೇರಲಿದೆ.


ಅಂದಹಾಗೆ ಶಿವಣ್ಣ ಮಲ್ಟಿಸ್ಟಾರ್ ಚಿತ್ರದಲ್ಲಿ ನಟಿಸುತ್ತಿರುವುದು ಇದೇ ಮೊದಲಲ್ಲ. ಅಷ್ಟೇ ಅಲ್ಲ, ಬೇರೆಯವರ ಚಿತ್ರಗಳಲ್ಲಿ ಪುಟ್ಟ ಪಾತ್ರಗಳಲ್ಲಿ ಕೂಡಾ ಕಾಣಿಸಿಕೊಂಡಿದ್ದಾರೆ. ಕುಮಾರ್ ಬಂಗಾರಪ್ಪ ಜೊತೆ ಬೆಳ್ಳಿಯಪ್ಪ ಬಂಗಾರಪ್ಪ ಚಿತ್ರದಲ್ಲಿ ನಟ ಶಿವರಾಜ್ ಕುಮಾರ್ ಆಗಿಯೇ ಕಾಣಿಸಿಕೊಂಡಿದ್ದರು ಶಿವಣ್ಣ. ಸುದೀಪ್ ನಿರ್ದೇಶನದ ಶಾಂತಿನಿವಾಸ ಚಿತ್ರದ ಟೈಟಲ್ ಕಾರ್ಡಿನಲ್ಲಿ ಹಾಡಿ ಕುಣಿದಿದ್ದರು ಶಿವಣ್ಣ. ರಮೇಶ್ ಅರವಿಂದ್ ಅವರ ಚಂದ್ರೋದಯ, ನಿನ್ನೇ ಪ್ರೀತಿಸುವೆ ಚಿತ್ರಗಳಲ್ಲಿ ಪವರ್ ಫುಲ್ ಪಾತ್ರಗಳಲ್ಲಿಯೇ ನಟಿಸಿದ್ದರೂ, ಹೀರೋ ಆಗಿ ಅಲ್ಲ. ರವಿಚಂದ್ರನ್, ಅಂಬರೀಷ್, ಉಪೇಂದ್ರ, ಜಗ್ಗೇಶ್, ಸುದೀಪ್, ರಮೇಶ್ ಜೊತೆ ನಟಿಸಿದ್ದಾರೆ. ಇದೀಗ ಕಬ್ಜದಲ್ಲಿ ಪುಟ್ಟ ರೋಲ್. ಆದರೆ ಕಟೌಟ್ ಇದೆ.



