ಹಿಂದಿಯ ಟಿವಿ ಶೋವೊಂದರಲ್ಲಿ ಕನ್ನಡ್ ಎಂದ ನಿರೂಪಕಿಗೆ ಕನ್ನಡ್ ಅಲ್ಲ, ಅದು ಕನ್ನಡ ಎಂದು ತಿದ್ದಿ ಹೇಳಿದ್ದರು. ತಮಿಳು, ತೆಲುಗು, ಮಲಯಾಳಂ ಬಗ್ಗೆ ಹೇಳುವಾಗ ಸರಿಯಾಗಿ ಹೇಳುತ್ತೀರಿ. ಕನ್ನಡವನ್ನು ಹೇಳುವಾಗ ಮಾತ್ರ ಕನ್ನಡ್ ಎಂದೇಕೆ ಹೇಳುತ್ತೀರಿ.. ಅದು ಕನ್ನಡ. ಕನ್ನಡ್ ಅಲ್ಲ. ನಿಮ್ಮ ಹಿಂದಿಯನ್ನು ನಾವು ಹಿಂಡಿ ಎಂದು ಕರೆದರೆ ಹೇಗಿರುತ್ತೆ ಎಂದು ನವಿರಾಗಿಯೇ ಪ್ರಶ್ನಿಸಿದ್ದರು ಸುದೀಪ್. ಸಂದರ್ಶನ ಮುಗಿಯುವ ಮಧ್ಯೆ ನಾಲ್ಕೈದು ಬಾರಿ ಕನ್ನಡ ಎಂಬ ಪದ ಆಕೆಯ ಬಾಯಲ್ಲಿ ಬಂದಿರಬಹುದು. ಆದರೆ ಇಂಟರ್ ವ್ಯೂ ನೋಡಿದರೆ ಹಾಗೆ ಹೇಳುವಾಗಲೆಲ್ಲ ಆಕೆ ಪ್ರಯತ್ನಪೂರ್ವಕವಾಗಿ ಕನ್ನಡ ಎಂದು ಹೇಳುತ್ತಿದ್ದರು.
ಅಷ್ಟೇ ಅಲ್ಲ, ಬಾಲಿವುಡ್ ಸ್ಟಾರ್ ಅಜಯ್ ದೇವಗನ್ ಅವರು ಹಿಂದಿ ರಾಷ್ಟ್ರೀಯ ಭಾಷೆ ಎಂದು ಹೇಳಿದಾಗ ಅಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದವರು ಸುದೀಪ್. ನಂತರ ದೇವಗನ್ ಹಿಂದಿಯಲ್ಲಿ ಉತ್ತರ ಕೊಟ್ಟಾಗ ಸುದೀಪ್ ಶಾಲಿನಲ್ಲಿ ಸುತ್ತಿಕೊಂಡೇ ಉತ್ತರ ಕೊಟ್ಟಿದ್ದರು. ನನಗೆ ಹಿಂದಿ ಬರುತ್ತೆ ಎಂದು ನೀವೇಕೆ ಭಾವಿಸಿದಿರಿ ಎಂದು ಪ್ರಶ್ನಿಸುತ್ತಲೇ ನಮ್ಮ ಭಾಷೆಯನ್ನು ನೀವು ಗೌರವಿಸಿ. ನಿಮ್ಮ ಭಾಷೆಯನ್ನು ನಾವೂ ಗೌರವಿಸುತ್ತೇವೆ ಎಂದಿದ್ದರು. ಸುದೀಪ್ ಮಾತುಗಳೇ ಹಾಗೆ.. ಕತ್ತರಿಸುವುದಿಲ್ಲ. ಚುಚ್ಚುತ್ತವೆ. ತಾವು ಹೇಳಬೇಕಾಗಿದ್ದ ವಿಷಯವನ್ನು ಮುಖ ಗಂಟಿಕ್ಕಿಕೊಳ್ಳದೆ ನವಿರಾಗಿ ಹೇಳುವುದು ಸುದೀಪ್ ಅವರಗೆ ಒಲಿದು ಬಂದ ಕಲೆ. ಎಲ್ಲಿಯೇ ಹೋದರು ಕನ್ನಡತನವನ್ನಂತೂ ಬಿಡುವುದಿಲ್ಲ.


ಉಪೇಂದ್ರ, ಸುದೀಪ್, ಶಿವಣ್ಣ ಅಭಿನಯದ ಕಬ್ಜ ಚಿತ್ರದ ಪ್ರೀ-ರಿಲೀಸ್ ಈವೆಂಟ್‍ನಲ್ಲಿ ಮಾತನಾಡಿದ ನಿರ್ದೇಶಕ ಕಂ ನಿರ್ಮಾಪಕ ಆರ್ ಚಂದ್ರು ಸುದೀಪ್, ಉಪೇಂದ್ರ, ಶಿವಣ್ಣ ಅವರ ಅಭಿಮಾನಿ ನಾನು. ಅವರೊಟ್ಟಿಗೆ ಒಂದು ಫೋಟೊ ತೆಗೆದುಕೊಂಡರೆ ಸಾಕು ಎಂದುಕೊಂಡಿದ್ದವನು ನಾನು ಆದರೆ ಅವರು ಕೊಟ್ಟಂತಹಾ ಪ್ರೀತಿ, ನನ್ನ ಮೇಲಿಟ್ಟ ವಿಶ್ವಾಸದಿಂದಲೇ ಕಬ್ಜ ಸಿನಿಮಾ ಆಗಿದೆ. ಕಬ್ಜ’ ಸಿನಿಮಾವನ್ನು ನಾನು ಮಾಡಿದ್ದಲ್ಲ. ಯಾವುದೋ ಒಂದು ಶಕ್ತಿ ನನ್ನಿಂದ ಈ ಸಿನಿಮಾವನ್ನು ಮಾಡಿಸಿದೆ. ಇಷ್ಟು ದೊಡ್ಡ ಸ್ಟಾರ್ಗಳು ಅಲ್ಲಿಂದ ಇಲ್ಲಿಯವರೆಗೆ ಬಂದು ಬೆಂಬಲಿಸುತ್ತಿರುವುದು ಪುಣ್ಯ. 17 ರಂದು ಸಿನಿಮಾ ಬಿಡುಗಡೆ ಆದ ಮೇಲೆ ನಾನು ಮಾತನಾಡುತ್ತೀನಿ. ಕಬ್ಜ ಸಿನಿಮಾ ನಾನೊಬ್ಬನೆ ಮಾಡಿದ್ದಲ್ಲ. ಇದೊಂದು ಟೀಂ ವರ್ಕ್. ನಟರು, ತಂತ್ರಜ್ಞರು ಸೇರಿ ಮಾಡಿದ ಸಿನಿಮಾ ಎಂದರು. ತಕ್ಷಣ ಮೈಕ್ ತೆಗೆದುಕೊಂಡ ಸುದೀಪ್ ಇವರ ಮಾತನ್ನು ನಾನು ತರ್ಜುಮೆ ಮಾಡುತ್ತೇನೆ ಎಂದು ಹೇಳಿ, ಇವರು ಬಹಳ ವಿಶಾಲ ಅರ್ಥದಲ್ಲಿ ಹೇಳಿದ್ದೇನೆಂದರೆ ಬೇಗ ಕನ್ನಡ ಕಲಿಯಿರಿ ಎನ್ನುವ ಮೂಲಕ ಕನ್ನಡ ಡಿಂಡಿಮ ಮೊಳಗಿಸಿದರು.





