ಉಪೇಂದ್ರ ಹೀರೋ. ಶಿವಣ್ಣ, ಸುದೀಪ್ ಕೂಡಾ ಇದ್ದಾರೆ. ಶ್ರೀಯಾ ಸರಣ್ ನಾಯಕಿ. ಮಲ್ಟಿ ಲಾಂಗ್ವೇಜ್`ನಲ್ಲಿ ರಿಲೀಸ್ ಆದ ಸಿನಿಮಾ.. ಕಬ್ಜ. ಕಳೆದ ತಿಂಗಳು ರಿಲೀಸ್ ಆಗಿ ಬಾಕ್ಸಾಫೀಸ್‍ನದಲ್ಲಿ ದಾಖಲೆ ಬರೆದ ಸಿನಿಮಾ. ಈಗಾಗಲೇ ಒಟಿಟಿಗೂ ರಿಲೀಸ್ ಆಗಿದೆ. ಕಬ್ಜ ಚಿತ್ರವನ್ನು ಎರಡು ಭಾಗಗಳಲ್ಲಿ ಮಾಡುವುದಾಗಿ ಹೇಳಿದ್ದ ಆರ್.ಚಂದ್ರು ಈಗಾಗಲೇ ಎರಡನೇ ಭಾಗಕ್ಕೆ ಸಿದ್ಧರಾಗಿದ್ದಾರೆ. ಕಬ್ಜ 2ನ ಪೋಸ್ಟರ್ ಹೊರಬಿಟ್ಟಿದ್ದು, ಅಲ್ಲಿ ಖಾಲಿ ಕುರ್ಚಿ ತೋರಿಸಿಯೇ ಸೆನ್ಸೇಷನ್ ಹುಟ್ಟುಹಾಕಿದ್ದಾರೆ.
ಕಬ್ಜ 2 ಸಿನಿಮಾದ ಮೊದಲ ಪೋಸ್ಟರ್ನಲ್ಲಿ ಉಪೇಂದ್ರ ಆಗಲಿ, ಶಿವಣ್ಣ ಆಗಲಿ ಅಥವಾ ಸುದೀಪ್ ಆಗಲಿ ಇಲ್ಲ. ಇರುವುದು ಒಂದು ಖಾಲಿ ಕುರ್ಚಿ ಹಾಗೂ ಒಂದು ಬಂದೂಕು ಮಾತ್ರ. ಮರದ ಖಾಲಿ ಕುರ್ಚಿಗೆ ಬಂದೂಕೊಂದನ್ನು ಒರಗಿಸಿ ಇಡಲಾಗಿದೆ. ಹಿನ್ನೆಲೆಯಲ್ಲಿ ಕೆಲವು ಜೀಪುಗಳು, ಆಕಾಶದಲ್ಲಿ ಒಂದು ಹೆಲಿಕ್ಯಾಪ್ಟರ್ ಹಾಗೂ ಅರಮನೆಯನ್ನು ಹೋಲುವ ಹಳೆಯ ಕಟ್ಟಡವೊಂದು ಕಾಣುತ್ತಿದೆ. ಪೋಸ್ಟರ್ ಅನ್ನು ಕನ್ನಡ, ಇಂಗ್ಲೀಷ್, ಹಿಂದಿ, ತೆಲುಗು, ಮಲಯಾಳಂ ಹಾಗೂ ತಮಿಳು ಭಾಷೆಗಳಲ್ಲಿ ಬಿಡುಗಡೆ ಮಾಡಲಾಗಿದೆ.
ಕಬ್ಜ ಸಿನಿಮಾವು ಇದೇ ವರ್ಷ ಮಾರ್ಚ್ 17 ರಂದು ಬಿಡುಗಡೆ ಆಗಿದ್ದು, ಬಿಡುಗಡೆ ಆದ ಮೂರೇ ದಿನದಲ್ಲಿ ನೂರು ಕೋಟಿ ಕಲೆಕ್ಷನ್ ಮಾಡಿ ಸೂಪರ್ ಹಿಟ್ ಸಿನಿಮಾ ಎನಿಸಿಕೊಂಡಿತ್ತು. ಸಿನಿಮಾದಲ್ಲಿ ಉಪೇಂದ್ರ, ಸುದೀಪ್, ಶ್ರಿಯಾ ಶರಣ್ ಜೊತೆಗೆ ವಿಶೇಷ ಅತಿಥಿ ಪಾತ್ರದಲ್ಲಿ ಶಿವರಾಜ್ ಕುಮಾರ್ ಸಹ ನಟಿಸಿದ್ದರು. ಸಿನಿಮಾದ ಪ್ರಚಾರವನ್ನು ಅದ್ಭುತವಾಗಿ ಚಿತ್ರತಂಡ ಮಾಡಿತ್ತು. ಸುದೀಪ್ ಬೆಂಬಲದೊಂದಿಗೆ ಹಿಂದಿ ಪ್ರೇಕ್ಷಕರನ್ನು ಸೆಳೆಯಲು ಯಶಸ್ವಿಯಾಗಿತ್ತು ಚಿತ್ರತಂಡ.
ಕಬ್ಜ ಸಿನಿಮಾದ ಅಂತ್ಯದಲ್ಲಿ ಉಪೇಂದ್ರ-ಸುದೀಪ್ ನಡುವೆ ಶಿವಣ್ಣ ಬಂದಿದ್ದರು. ಈಗ ಕಬ್ಜ 2 ನಲ್ಲಿ ಯಾರು ಯಾರ ವಿರುದ್ಧ ನಿಲ್ಲಲಿದ್ದಾರೆ. ಕುರ್ಚಿ ಯಾರದ್ದಾಗಲಿದೆ ಎಂಬ ಕುತೂಹಲ ಇದೆ.



