ಚಿತ್ರದ ಹೆಸರಿಂದ ಚಿತ್ರದ ಲಕ್ ಬದಲಾಗುತ್ತಾ.. ಟೈಟಲ್ ಚೆನ್ನಾಗಿದ್ದರೆ ಸಾಕಾ.. ಚಿತ್ರ ಚೆನ್ನಾಗಿರೋದು ಬೇಡ್ವಾ..? ಇತ್ತೀಚೆಗೆ ಕನ್ನಡದಲ್ಲೊಂದು ಟ್ರೆಂಡ್ ಶುರುವಾಗಿದೆ. ಸಕ್ಸಸ್ ಆದ ಚಿತ್ರಗಳ ಪ್ರಾರಂಭದ ಅಕ್ಷರಗಳನ್ನೇ ಚಿತ್ರದ ಟೈಟಲ್`ನಲ್ಲಿ ಇರುವಂತೆ ನೋಡಿಕೊಳ್ಳೋದು. ಇದೀಗ ಅಂತಾದ್ದೊಂದು ಟ್ರೆಂಡ್ ಸೃಷ್ಟಿಸಿರುವುದು ಕೆ ಅಥವಾ ಕ.
ಕಳೆದ ವರ್ಷಗಳಲ್ಲಿ ಹಿಟ್ ಆದ.. ಸೂಪರ್ ಹಿಟ್ ಆದ ಚಿತ್ರಗಳಲ್ಲಿ ಬಹುತೇಕ ಚಿತ್ರಗಳು ಕ ಅಕ್ಷರದಿಂದ ಶುರುವಾದವು. ಎಲ್ಲರಿಗೂ ಗೊತ್ತಿರೋ ಹಾಗೆ ಕೆಜಿಎಫ್ ಚಾಪ್ಟರ್ ಮತ್ತು ಚಾಪ್ಟರ್ 2 ಎರಡೂ ಚಿತ್ರಗಳ ಮೊದಲ ಅಕ್ಷರ ಕ. ಕಾಂತಾರ ಚಿತ್ರವೂ ಅಷ್ಟೆ, ಕ ಅಕ್ಷರದಿಂದಲೇ ಶುರುವಾಗಿತ್ತು. ಈಗ ಆ ಅದೃಷ್ಟದ ಕಥೆ ಹೊರಬರುತ್ತಿರುವುದು ಕಬ್ಜ ಚಿತ್ರಕ್ಕೆ.
ಕಬ್ಜ ಚಿತ್ರ ಮಾರ್ಚ್ 17ರಂದು ರಿಲೀಸ್ ಆಗುತ್ತಿದೆ. ಒಂದು ಕಡೆ ಅಪ್ಪು ಹುಟ್ಟುಹಬ್ಬವಿದ್ದರೆ, ಇನ್ನೊಂದೆಡೆ ಕಬ್ಜ ಚಿತ್ರದ ಹಬ್ಬ. ಆರ್.ಚಂದ್ರು ನಿರ್ಮಾಣ ಮಾಡಿ ನಿರ್ದೇಶಿಸಿರುವ ಕಬ್ಜ ಚಿತ್ರದಲ್ಲಿ ಉಪೇಂದ್ರ, ಸುದೀಪ್, ಶಿವಣ್ಣ, ಶ್ರೇಯಾ ಸರಣ್, ತಾನ್ಯಾ ಹೋಪ್ ಇದ್ದಾರೆ. ಅದೃಷ್ಟ ಕ ಅಕ್ಷರದಿಂದ ಬರುತ್ತೋ.. ಒಳ್ಳೆಯ ಕಂಟೆಂಟ್ ಇರುವ ಪ್ರೆಸೆಂಟೇಷನ್‍ನಿಂದ ಬರುತ್ತೋ.. ಕಬ್ಜ ಗೆದ್ದ ನಂತರ ಮಾತನಾಡಬಹುದು. ಸದ್ಯಕ್ಕಂತೂ ಇಡೀ ದೇಶದಲ್ಲಿ ಕಬ್ಜದ ಕ್ರೇಜ್ ಜೋರಾಗಿ ಕೇಳಿ ಬರುತ್ತಿದೆ.
ಹಾಗಾದರೆ ಕೆ ಅಕ್ಷರದಿಂದ ಶುರುವಾದ ಚಿತ್ರಗಳೆಲ್ಲವೂ ಸೂಪರ್ ಹಿಟ್ ಚಿತ್ರಗಳಾ..? ಸುಮ್ಮನೆ ಈ ಪಟ್ಟಿ ನೋಡಿ. ಇಲ್ಲಿರೋದು ಕೇವಲ 2022ರಲ್ಲಿ ರಿಲೀಸ್ ಆದ ಚಿತ್ರಗಳ ಹೆಸರಷ್ಟೇ. ಕೆಜಿಎಫ್, ಕಾಂತಾರಗಳನ್ನಷ್ಟೇ ನೋಡಿದವರಿಗೆ ಈ ಚಿತ್ರಗಳ ಹೆಸರೂ ನೆನಪಿದೆಯೋ ಇಲ್ಲವೋ..
ಕ್ಷಮಿಸಿ ನಿಮ್ಮ ಖಾತೆಯಲ್ಲಿ ಹಣವಿಲ್ಲ..
ಕಾಣೆಯಾದವರ ಬಗ್ಗೆ ಪ್ರಕಟಣೆ
ಕೋಳಿ ತಾಳ್
ಕಿರಿಕ್ ಶಂಕರ್
ಕಪಾಲ
ಈ ಯಾವ ಚಿತ್ರಗಳೂ ಹಿಟ್ ಆಗಿಲ್ಲ. ಸಿನಿಮಾಗಳು ಬಂದಿದ್ದವು ಹಾಗೂ ಹೋದವು ಎಂಬುದು ಗೊತ್ತಿದ್ದರೆ ಆ ಚಿತ್ರತಂಡದವರಿಗೆ ಮಾತ್ರ. ಅಷ್ಟೇ ಏಕೆ, ಇತ್ತೀಚೆಗೆ ಸ್ಟಾರ್ ನಟ ಎಂದು ಹೇಳಿಕೊಳ್ಳೋ ನಟನೊಬ್ಬನ ಚಿತ್ರವೂ ರಿಲೀಸ್ ಆಗಿ ಮಕಾಡೆ ಮಲಗಿದ್ದು ಗೊತ್ತೇ ಇದೆ. ಅದೃಷ್ಟದ ಮೇಲಿನ ನಂಬಿಕೆ ಹೊಸದಲ್ಲ. ಕೊನೆಯೂ ಆಗಲ್ಲ.
ಒಬ್ಬೊಬ್ಬರಿಗೆ ಒಂದೊಂದು ಪದಗಳ ಮೇಲೆ ಅದೃಷ್ಟ, ನಂಬಿಕೆ ಇರುತ್ತದೆ. ಒಂದು ಕಾಲವಿತ್ತು. ಉಪೇಂದ್ರ ಅವರು ಒಂದಕ್ಷರದ ಹೆಸರಿಟ್ಟರೆ ಆ ಚಿತ್ರಗಳು ಸೂಪರ್ ಹಿಟ್ ಎನ್ನುವ ನಂಬಿಕೆ. ಅದಕ್ಕೆ ಶ್, ಓಂ, ಎ.. ಮೊದಲಾದ ಚಿತ್ರಗಳು ಹಿಟ್ಟೋ ಹಿಟ್ಟು. ಸೀರಿಯಲ್ಲುಗಳ ವಿಷಯಕ್ಕೆ ಬಂದರೆ ಸೀತಾರಾಂ ತಮ್ಮ ಧಾರಾವಾಹಿಗಳ ಟೈಟಲ್`ನ್ನು ಮ ಅಕ್ಷರದಲ್ಲೇ ಇರುವಂತೆ ನೋಡಿಕೊಳ್ಳುತ್ತಾರೆ. ಮನ್ವಂತರ, ಮುಕ್ತ, ಮಗಳು ಜಾನಕಿ, ಸಿನಿಮಾ ಆದ ಮತದಾನ.. ಹೀಗೆ.. ಇತ್ತೀಚೆಗೆ ಆ ನಂಬಿಕೆಯ ಟ್ರೆಂಡ್‍ಗೆ ಸಿಕ್ಕಿರುವ ಅಕ್ಷರ ಕ.
ಕ ಅಥವಾ ಕೆ ಇಂದ ಶುರವಾಗುವ ಹೆಸರನ್ನಿಟ್ಟರೆ ಆ ಚಿತ್ರಗಳು ಹಿಟ್ ಆಗಲ್ಲ. ಸ್ಟಾರ್‍ಗಳ ದಂಡನ್ನೇ ಇಟ್ಟರೂ ಅಷ್ಟೆ, ಚಿತ್ರದ ಕ್ವಾಲಿಟಿ ಚೆನ್ನಾಗಿದ್ದರೆ ಅದೃಷ್ಟವೂ ಕುದುರೀತು. ಕಬ್ಜ ಹಿಟ್ ಆಗಲಿ.



