ಪಠಾಣ್. ಶಾರೂಕ್ ಖಾನ್ ಮತ್ತು ದೀಪಿಕಾ ಪಡುಕೋಣೆ ಅಭಿನಯದ ಚಿತ್ರ ಬಿಡುಗಡೆಗೂ ಮೊದಲು ಎದುರಿಸಿದ ಸವಾಲುಗಳು ಒಂದೆರಡಲ್ಲ. ಚಿತ್ರವನ್ನೇ ಬ್ಯಾನ್ ಮಾಡಬೇಕು ಎಂಬುದರಿಂದ ಹಿಡಿದು ಪ್ರತಿಭಟನೆಗಳ ತನಕ. ಶಾರೂಕ್ ಕೂಡಾ ಸತತ ಸೋಲುಗಳಿಂದ ಕಂಗೆಟ್ಟಿದ್ದರು. ಸುದೀರ್ಘ ಗ್ಯಾಪ್ ತೆಗೆದುಕೊಂಡು ಹೀರೋ ಆಗಿ ತೆರೆ ಮೇಲೆ ಕಾಣಿಸಿದ್ದರು. ಹಳೆಯ ಕಥೆ ಕೇಳಿದ್ದವರು ಈ ಸಿನಿಮಾನೂ ತೋಪು ಗ್ಯಾರಂಟಿ ಎನ್ನುತ್ತಿದ್ದವರಿಗೆ ಬೇರೆಯದೇ ರಿಸಲ್ಟ್ ಕೊಟ್ಟಿದ್ದಾರೆ. ಹೀಗಾಗಿ ನಿರೀಕ್ಷೆಗಳೂ ಬಹಳವೇ ಇದ್ದವು. ಅವೆಲ್ಲವನ್ನೂ ಮೀರಿ ಈಗ ಪಠಾಣ್ ಸಾವಿರ ಕೋಟಿ ಕ್ಲಬ್ ಸೇರಿದೆ. ಇದು 28 ದಿನಗಳಲ್ಲಿ ಪಠಾಣ್ ಮಾಡಿದ ಬಾಕ್ಸಾಫೀಸ್ ರೆಕಾರ್ಡ್.
ಬಿಡುಗಡೆಯಾದ 28 ದಿನಗಳಲ್ಲಿ ಬರೋಬ್ಬರಿ 1000 ಕೋಟಿ ರೂಪಾಯಿ ಬಾಚುವಲ್ಲಿ ‘ಪಠಾಣ್’ ಸಿನಿಮಾ ಯಶಸ್ವಿಯಾಗಿದೆ. ‘ಪಠಾಣ್’ ಸಿನಿಮಾ ವಿಶ್ವದಾದ್ಯಂತ 1000 ಕೋಟಿ ರೂಪಾಯಿ ಬಾಕ್ಸ್ ಆಫೀಸ್ ಕಲೆಕ್ಷನ್ ಮಾಡಿರುವ ಬಗ್ಗೆ ನಿರ್ಮಾಣ ಸಂಸ್ಥೆ ಯಶ್ ರಾಜ್ ಫಿಲ್ಮ್ಸ್ ಅಧಿಕೃತ ಮಾಹಿತಿ ಹಂಚಿಕೊಂಡಿದೆ. ಭಾರತ ಮಾತ್ರದಲ್ಲೇ ‘ಪಠಾಣ್’ ಸಿನಿಮಾ ಈವರೆಗೆ 623 ಕೋಟಿ ರೂಪಾಯಿ ಗಳಿಸಿದ್ದು, ಓವರ್ಸೀಸ್ನಲ್ಲಿ 377 ಕೋಟಿ ರೂಪಾಯಿ ಬಾಚಿಕೊಂಡಿದೆ. ಅಂದ್ಹಾಗೆ, ಇದು ಗ್ರಾಸ್ ಬಾಕ್ಸ್ ಆಫೀಸ್ ಕಲೆಕ್ಷನ್ ಲೆಕ್ಕಾಚಾರ.
ವಿಶ್ವದಾದ್ಯಂತ 1000 ಕೋಟಿ ರೂಪಾಯಿ ಗಳಿಸಿದ 5ನೇ ಭಾರತೀಯ ಸಿನಿಮಾ ಪಠಾಣ್. ಇದಕ್ಕೂ ಮೊದಲು ಅಮೀರ್ ಖಾನ್ ಅಭಿನಯದ ದಂಗಲ್ 1968.03 ಕೋಟಿ ರೂಪಾಯಿ ಗಳಿಸಿತ್ತು. ರಾಜಮೌಳಿ-ಪ್ರಭಾಸ್-ಅನುಷ್ಕಾ ಶೆಟ್ಟಿ-ರಾಣಾ ದಗ್ಗುಬಾಟಿ-ತಮನ್ನಾ ಕಾಂಬಿನೇಷನ್ನಿನ ‘ಬಾಹುಬಲಿ 2: ದಿ ಕನ್ಕ್ಲೂಶನ್’ ಚಿತ್ರ 1747 ಕೋಟಿ ರೂಪಾಯಿ ಬಾಚಿತ್ತು. ಅದು ತೆಲುಗಿನ ಚಿತ್ರವಾದರೆ ಕನ್ನಡದ ಹೊಂಬಾಳೆ-ವಿಜಯ್ ಕಿರಗಂದೂರು-ಪ್ರಶಾಂತ್ ನೀಲ್-ಯಶ್ ಕಾಂಬಿನೇಷನ್ನಿನ ಕನ್ನಡದ ಹೆಮ್ಮೆ ಕೆಜಿಎಫ್: ಚಾಪ್ಟರ್ 2 1188 ಕೋಟಿ ರೂಪಾಯಿ ಗಳಿಸಿತ್ತ. ಮತ್ತೊಮ್ಮೆ ರಾಜಮೌಳಿಯವರ ನಿರ್ದೇಶನದ ಎನ್.ಟಿ.ಆರ್.-ರಾಮ್ ಚರನ್ ತೇಜ್ ಅಭಿನಯದ ಆರ್ಆರ್ಆರ್ ಚಿತ್ರ 1174 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತ್ತು. ಇದೀಗ ಚೀನಾದಲ್ಲಿ ಬಿಡುಗಡೆಯಾಗದಿದ್ದರೂ, ‘ಪಠಾಣ್’ ಸಿನಿಮಾ 1000 ಕೋಟಿ ಕ್ಲಬ್ ಸೇರುವಲ್ಲಿ ಸಕ್ಸಸ್ ಆಗಿದೆ.
ಸಾವಿರ ಕೋಟಿ ಕ್ಲಬ್‍ನಲ್ಲಿ ದಕ್ಷಿಣದ 3 ಚಿತ್ರಗಳಿವೆ. ಎರಡು ತೆಲುಗು ಹಾಗೂ ಒಂದು ಕನ್ನಡದ ಚಿತ್ರವಿದೆ. ಹಿಂದಿಯದ್ದು ಎರಡು ಸಿನಿಮಾ. ಆದರೂ ಶಾರೂಕ್ ಫ್ಯಾನ್ಸ್ ಖುಷಿಯಾಗಿದ್ಧಾರೆ. ಸಲ್ಮಾನ್ ಖಾನ್ ಫ್ಯಾನ್ಸ್ ಕೂಡಾ ಥ್ರಿಲ್ಲಾಗಿದ್ದಾರೆ. ಏಕೆಂದರೆ ಪಠಾಣ್ ಚಿತ್ರದಲ್ಲಿ ಟೈಗರ್ ಆಗಿ ಸಲ್ಮಾನ್ ಖಾನ್ ಗೆಸ್ಟ್ ರೋಲಿನಲ್ಲಿ ಕಾಣಿಸಿಕೊಂಡಿದ್ದಾರೆ.



