ಇತ್ತೀಚೆಗೆ ರಾಜ್ಯಾದ್ಯಂತ ಸುದ್ದಿಯಾಗಿ ಸಂಚಲನ ಮೂಡಿಸಿದ್ದ ಐಎಎಸ್ ರೋಹಿಣಿ ಸಿಂಧೂರಿ ಹಾಗೂ ಐಪಿಎಸ್ ರೂಪಾ ಮೌದ್ಗಿಲ್ ಅವರ ಜಗಳ, ಕಿತ್ತಾಟದ ಕಥೆಯನ್ನು ಸಿನಿಮಾ ಮಾಡೋಕೆ ಮುಂದಾಗಿದ್ದಾರೆ ಸ್ಯಾಂಡಲ್‍ವುಡ್ ನಿರ್ಮಾಪಕ ಹಾಗೂ ನಿರ್ದೇಶಕರು. ಸಂಚಲನಾತ್ಮಕ ಸುದ್ದಿಗಳ ಕುರಿತು ಸಿನಿಮಾ ಮಾಡುವುದು ಹೊಸದೇನಲ್ಲ. ಈಗಾಗಲೇ ಡಿಕೆ ರವಿ ಪ್ರಕರಣ, ಸಿಡಿ ಗಲಾಟೆ, ವೀರಪ್ಪನ್, ಕಿಡ್ನಾಪ್ ಕೇಸ್.. ಹೀಗೆ ಹಲವು ಪ್ರಕರಣಗಳು ಸಿನಿಮಾಗಳಾಗಿವೆ. ಈಗ ಐಎಎಸ್/ಐಪಿಎಸ್ ವಾರ್ ಸರದಿ.
ಸಿನಿಮಾ ರೂಪ ಪಡೆಯಲಿದೆ ಮಹಿಳಾ ಐಎಎಸ್ ಹಾಗೂ ಐಪಿಎಸ್ ಅಧಿಕಾರಿಗಳ ಗಲಾಟೆ
ರಾಜ್ಯದಲ್ಲಿ ಇಬ್ಬರು ಮಹಿಳಾ ಐಎಎಸ್ ಹಾಗೂ ಐಪಿಎಸ್ ಅಧಿಕಾರಿಗಳ ಕಿತ್ತಾಟ – ಸಿನಿಮಾ ಮಾಡಲು ಮುಂದಾಗಿರುವ ಇಬ್ಬರು ನಿರ್ಮಾಪಕರು – ಆರ್ ವರ್ಸಸ್ ಆರ್ – ಟೈಟಲ್ ನೀಡುವಂತೆ ಅರ್ಜಿ ಹಾಕಿದ್ದಾರೆ.
ಆರ್‍ವಿ ವರ್ಸಸ್ ಎಸ್‍ಆರ್ ಹೆಸರಿನಲ್ಲಿ ನಿತ್ಯಾನಂದ ಪ್ರಭು ಎಸ್ ಎಂಬುವವರು ಸಿನಿಮಾ ನಿದೇಶನ ಮಾಡಲಿದ್ದಾರೆ. ಇದು ನೈಜ ಘಟನೆ ಆಧರಿತ ಸಿನಿಮಾ. ಚೇಂಬರ್ ಟೈಟಲ್ ಓಕೆ ಮಾಡಿದ ಮೇಲೆ ಕಥೆಯ ಸಾರಾಂಶವನ್ನು ಫಿಲ್ಮ್ ಚೇಂಬರಿಗೆ ನೀಡುತ್ತೇವೆ ಎಂದಿದ್ದಾರೆ.
ಸೋಮವಾರ ಟೈಟಲ್ ಕಮಿಟಿಯ ಮುಂದೆ ಇಡಲಿದ್ದೇವೆ. ಸಮಿತಿ ಓಕೆ ಎಂದರೆ ಟೈಟಲ್ ಕೊಡುತ್ತೆವೆ. ಯಾವುದೇ ವ್ಯಕ್ತಿಯ ಜೀವನ ಆಧರಿಸಿ ಸಿನಿಮಾ ಮಾಡುವುದಾದರೆ ಆ ವ್ಯಕ್ತಿಯ ಕಡೆಯಿಂದ ಅನುಮತಿ ಪತ್ರ ಬೇಕು ಎಂದಿದ್ದಾರೆ ಚೇಂಬರ್ ಅಧ್ಯಕ್ಷ ಬಾಮಾ ಹರೀಶ್.
ಒಂದು ಪ್ರಮುಖ ಘಟನೆ ನಡೆದಾಗಲೆಲ್ಲ ಚೇಂಬರ್‍ಗೆ ಇಂತಹ ಟೈಟಲ್ ಕೇಳಿಕೊಂಡು ಬರುವುದು ಸರ್ವೇಸಾಮಾನ್ಯ. ಈ ಹಿಂದೆ ಮಕ್ಕಳ ಮೇಲೆ ಅತ್ಯಾಚಾರ ಹೆಚ್ಚಾದಾಗ, ನಿಶ್ಚಿತಾರ್ಥವಾಗಿದ್ದವನನ್ನೇ ಪ್ರಿಯಕರನಿಗಾಗಿ ಕೊಲ್ಲಿಸಿದ ಯುವತಿ, ಸಚಿವರ ಸಿಡಿ ಕೇಸ್, ಶಾಸಕರು ಮುತ್ತು ಕೊಟ್ಟು ಸಿಕ್ಕಿಬಿದ್ದ ಪ್ರಕರಣ, ಸಚಿವರ ಅಕ್ರಮ ಸಂಬಂಧದ ವಿಡಿಯೋ ವೈರಲ್ ಆದಾಗ, ನಿಖಿಲ್ ಎಲ್ಲಿದ್ದೀಯಪ್ಪ ಎಂಬ ಪದ ಟ್ರೆಂಡ್ ಆದಾಗ.. ಹೀಗೆ ಒಟ್ಟಿನಲ್ಲಿ ಯಾರಾದರೂ ಸುದ್ದಿಯಾದಾಗ, ವೈರಲ್ ಆದಾಗ ಈ ರೀತಿಯ ಸಿನಿಮಾ ಟೈಟಲ್‍ಗೆ ಡಿಮ್ಯಾಂಡ್ ಸೃಷ್ಟಿಯಾಗುತ್ತದೆ. ಹೀಗೆ ರಿಜಿಸ್ಟರ್ ಆದ ಟೈಟಲ್‍ಗಳಲ್ಲಿ ಶೇ.90ಕ್ಕಿಂತಲೂ ಹೆಚ್ಚು ಸಿನಿಮಾಗಳು ಜಸ್ಟ್ ಅಲ್ಲಿಗೇ ಸುದ್ದಿಯಾಗಿ ಸುಮ್ಮನಾಗುತ್ತವೆ. ಸೆಟ್ಟೇರುವುದಿಲ್ಲ. ಇನ್ನು ಅಂತಹ ಸಿನಿಮಾಗಳು ರಿಲೀಸ್ ಆಗುವ ಮಾತೆಲ್ಲಿ ಬಂತು..



