ರಜನಿಕಾಂತ್-ಶಿವಣ್ಣ-ಮೋಹನ್ ಲಾಲ್-ರಮ್ಯಕೃಷ್ಣ-ತಮನ್ನಾ ಭಾಟಿಯಾ ಇವರೆಲ್ಲರನ್ನೂ ಒಂದು ಕಡೆ ಸೇರಿಸಿ ಸಿನಿಮಾ ಮಾಡೋದು ಸುಮ್ಮನೆ ಮಾತಲ್ಲ. ಅದನ್ನು ಜೈಲರ್ ಚಿತ್ರದ ಮೂಲಕ ದಿಲೀಪ್ ನೆಲ್ಸನ್ ಮಾಡಿ ತೋರಿಸುತ್ತಿದ್ದಾರೆ. ಮಂಗಳೂರಿಗೆ ಬಂದಿರುವ ಜೈಲರ್ ಟೀಂ ಈಗಾಗಲೇ ಚಿತ್ರೀಕರಣ ಆರಂಭಿಸಿದೆ. ಮಂಗಳೂರಿನ ಪಿಲಿಕುಳ ಗತ್ತಿನ ಮನೆಯಲ್ಲಿ ಚಿತ್ರೀಕರಣ ನಡೆಯುತ್ತಿದ್ದು, ರಜನಿಕಾಂತ್ ಹಾಗೂ ಶಿವಣ್ಣ ನಡುವಿನ ಮಾತಿನ ಭಾಗಗಳ ಚಿತ್ರೀಕರಣ ನಡೆಯುತ್ತಿದೆ. ಅಂದಹಾಗೆ ಈಗ ಶೂಟಿಂಗ್ ಆಗುತ್ತಿರುವ ಮನೆ ಕಾಂತಾರ ಮನೆ ಎಂದೇ ಫೇಮಸ್ ಆಗಿರುವ ಮನೆ. ಕಾಂತಾರದಲ್ಲಿ ಆರಂಭದಲ್ಲಿ ಬರುವ ರಾಜ ನೆಲೆಸಿರುವ ಮನೆ ಬರುತ್ತದಲ್ಲ.. ಆ ಮನೆಯಲ್ಲಿಯೇ ಈಗ ಜೈಲರ್ ಚಿತ್ರೀಕರಣ ನಡೆಯುತ್ತಿರುವುದು.
ಅಣ್ಣಾತ್ತೆ ನಂತರ ರಜನಿ ನಟಿಸುತ್ತಿರುವ ಚಿತ್ರ ಜೈಲರ್. ಸನ್ ಪಿಕ್ಚರ್ಸ್ ನಿರ್ಮಾಣದ ಈ ಚಿತ್ರದಲ್ಲಿ ಶಿವಣ್ಣ ಗೆಸ್ಟ್ ರೋಲ್ ಮಾಡುತ್ತಿದ್ದಾರೆ. ಮಲಯಾಲಂ ಸ್ಟಾರ್ ಮೋಹನ್ ಲಾಲ್ ಕೂಡಾ ನಟಿಸುತ್ತಿದ್ದಾರೆ. ಜಾಕಿ ಶ್ರಾಫ್, ತೆಲುಗು ಕಮಿಡಿಯನ್ ಸುನಿಲ್, ಯೋಗಿ ಬಾಬು ಕೂಡಾ ಇರುವ ಚಿತ್ರದಲ್ಲಿ ತಮನ್ನಾ ಹಾಗೂ ರಮ್ಯಕೃಷ್ಣ ಇಬ್ಬರೂ ನಟಿಸುತ್ತಿದ್ದಾರೆ.


ಚಿತ್ರದಲ್ಲಿ ನನ್ನದು ಗೆಸ್ಟ್ ರೋಲ್ ಎಂದಿರುವ ಶಿವಣ್ಣ, ಚಿತ್ರದ ಪಾತ್ರದ ಗುಟ್ಟನ್ನು ಬಿಟ್ಟುಕೊಟ್ಟಿಲ್ಲ. ಪಾತ್ರ ಹೇಗಿದೆ ಅನ್ನೋದನ್ನು ತೆರೆಯ ಮೇಲೇ ನೋಡಿ. ಚೆನ್ನಾಗಿದೆ. ಈಗಲೇ ಹೇಳಿದರೆ ಏನು ಚೆಂದ ಎಂದಿದ್ದಾರೆ ಶಿವರಾಜ್ ಕುಮಾರ್.



