ಹೇಮಾಚೌಧರಿ ಅವರನ್ನು ಕನ್ನಡಿಗರು ಮರೆಯುವುದಕ್ಕೆ ಸಾಧ್ಯವೇ ಇಲ್ಲ. ವೀರಪ್ಪನಾಯ್ಕ ಚಿತ್ರದಲ್ಲಿ ವಿಷ್ಣುವರ್ಧನ್ ಅವರ ತಾಯಿಯ ಪಾತ್ರದಲ್ಲಿ, ದೇಶಪ್ರೇಮವನ್ನೇ ರಕ್ತವನ್ನಾಗಿಸಿಕೊಂಡಿದ್ದ ಅಮ್ಮನಾಗಿ ಹೇಮಾಚೌಧರಿ ಮಿಂಚಿದ್ದರು. ವಿಷ್ಣುವರ್ಧನ್-ಶೃತಿ ಅವರದ್ದು ಪ್ರಧಾನ ಪಾತ್ರವಾದರೂ, ಪೋಷಕ ನಟಿಯಾಗಿ ಮಿಂಚಿದ್ದವರು ಹೇಮಾಚೌಧರಿ.
ಅಷ್ಟೇ ಅಲ್ಲ, ಶಿವಣ್ಣ ಅವರ ತವರಿಗೆ ಬಾ ತಂಗಿ, ಅಣ್ಣ ತಂಗಿ, ಶ್ರೀರಾಮ್ ಸೇರಿದಂತೆ ಹಲವು ಚಿತ್ರಗಳಲ್ಲಿ ನೆಗೆಟಿವ್ ಶೇಡ್ ಅತ್ತೆಯಾಗಿ, ಅಮ್ಮನಾಗಿ ನಟಿಸಿದ್ದ ಹೇಮಾಚೌಧರಿ ದುಷ್ಟತನಕ್ಕೆ ಇನ್ನೊಂದು ಹೆಸರಾಗಿದ್ದರು. ದೇಶಪ್ರೇಮದ ತಾಯಿಯಾಗಿ, ದುಷ್ಟ ಅತ್ತೆಯಾಗಿ, ಪೋಷಕ ನಟಿಯಾಗಿ, ಕಾಮಿಡಿ ನಟಿಯಾಗಿ, ನಾಯಕಿಯಾಗಿ.. ಹೇಮಾ ಚೌಧರಿ ನಟಿಸದ ಪಾತ್ರಗಳಿಲ್ಲ. ಅಂತಹ ಹೇಮಾಚೌಧರಿ ಆರೋಗ್ಯ ಹದಗೆಟ್ಟಿದೆ.
ಕನ್ನಡದ ಹಿರಿಯ ನಟಿ ಹೇಮಾ ಚೌದರಿ ಆಸ್ಪತ್ರೆ ಸೇರಿದ್ಧಾರೆ. ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ಧಾರೆ. ಮೆದುಳಿನ ರಕ್ತಸ್ರಾವದಿಂದ ಬಳಲುತ್ತಿರುವ ಹೇಮಾ ಚೌದರಿ, ಆಸ್ಪತ್ರೆಯಲ್ಲಿದ್ದರೂ ಚಿಕಿತ್ಸೆಗೆ ಸೂಕ್ತವಾಗಿ ಸ್ಪಂದಿಸುತ್ತಿಲ್ಲ. ಮಗ ವಿದೇಶದಲ್ಲಿದ್ದು, ಅವರ ಆಗಮನಕ್ಕೆ ಕುಟುಂಬದವರೆಲ್ಲ ಕಾಯ್ತಿದ್ದಾರೆ. ಸದ್ಯ ಹೇಮಾ ಚೌದರಿ ಬೆಂಗಳೂರಿನ ಬ್ಯಾಪ್ಟಿಸ್ಟ್ ಆಸ್ಪತ್ರೆಯಲ್ಲಿದ್ದಾರೆ.
ಹೈದರಾಬಾದ್ನಲ್ಲಿಯೇ ಹುಟ್ಟಿ ಬೆಳೆದಿರುವ ಹೇಮಾ ಚೌಧರಿ ಸರಿ ಸುಮಾರು ೨೦೦+ ಚಿತ್ರಗಳಲ್ಲಿ ನಟಿಸಿದ್ದಾರೆ. ಕನ್ನಡದಲ್ಲಿಯೇ ಸುಮಾರು ೧೦೦ ಚಿತ್ರಗಳಲ್ಲಿ ನಟಿಸಿದ್ದು, ತೆಲುಗು, ಮಲಯಾಳಂ, ತಮಿಳಿನಲ್ಲೂ ನಟಿಸಿದ್ದಾರೆ. ನಾಯಕಿಯಾಗಿ, ಪೋಷಕ ನಟಿಯಾಗಿ ಮಿಂಚಿದ್ದ ಹೇಮಾಚೌದರಿ, ಕಿರುತೆರೆಯ ಧಾರಾವಾಹಿಗಳಲ್ಲೂ ತಮ್ಮ ಛಾಪು ಮೂಡಿಸಿದ್ದರು.
ನಟಿಯಷ್ಟೇ ಅಲ್ಲ, ಹೇಮಾಚೌದರಿ ಪರಿಪೂರ್ಣ ನೃತ್ಯಗಾರ್ತಿ. ತಮ್ಮ ಗುರು ವೆಂಪಟಿ ಚಿನ್ನ ಸತ್ಯಂ ಅವರೊಂದಿಗೆ ನೃತ್ಯ ಪ್ರದರ್ಶನಗಳನ್ನು ನೀಡುತ್ತಿದ್ದ ಹೇಮಾ, ದೇಶವಿದೇಶಗಳಲ್ಲಿ ನೃತ್ಯಗಾರ್ತಿಯಾಗಿಯೇ ದೊಡ್ಡ ಹೆಸರು ಮಾಡಿದ್ದರು. ನಟ ರಜನಿಕಾಂತ್ ಇವರ ಸಹಪಾಠಿ.
ನಟಿ ತಾರಾ ಸೇರಿದಂತೆ ಹಲವು ಕಲಾವಿದರು ಆಸ್ಪತ್ರೆಗೆ ಭೇಟಿ ನೀಡಿ ಹೇಮಾಚೌದರಿ ಆರೋಗ್ಯ ವಿಚಾರಿಸಿದ್ದು, ಶೀಘ್ರದಲ್ಲಿಯೇ ಗುಣಮುಖರಾಗಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಹೇಮಾ ಚೌದರಿ ನಟಿಸಿರುವ ಹಲವು ಚಿತ್ರಗಳು ಹಿಟ್ ಆಗಿವೆ. ನಾರದ ವಿಜಯ ಚಿತ್ರದ ʻನೀ ಮೋಸ ಹೋಗಬೇಡ ಅಮ್ಮಯ್ಯ.., ಗಾಳಿಮಾತು ಚಿತ್ರದ ʻನಮ್ಮೂರ ಸಂತೇಲಿ.. ಹಾಡುಗಳು ಇಂದಿಗೂ ಜನಪ್ರಿಯ.