ಪಾತ್ರ ಮತ್ತು ಕಥೆ ಮುಖ್ಯ ಎನ್ನುವ ಮೇಘನಾ ಗಾಂವ್ಕರ್, ಮತ್ತೊಂದು ಚಿತ್ರ ಒಪ್ಪಿಕೊಂಡಿದ್ದಾರೆ. ಚಿತ್ರರಂಗಕ್ಕೆ ಬಂದು ದಶಕ ಕಳೆದಿದ್ದರೂ ನಟಿಸಿರುವ ಚಿತ್ರಗಳ ಸಂಖ್ಯೆ ಹೆಚ್ಚೇನಿಲ್ಲ. ಸಿನಿಮಾ ರಂಗಕ್ಕೆ ಬಂದ ಮೇಲೂ ಓದು, ಪ್ರವಾಸ ಎಂದು ಬ್ರೇಕ್ ತೆಗೆದುಕೊಳ್ಳೋ ಮೇಘನಾ ಇತ್ತೀಚೆಗೆ ಕಾಣಿಸಿಕೊಂಡಿದ್ದುದು ಶಿವಾಜಿ ಸುರತ್ಕಲ್ 2ನಲ್ಲಿ. ಈಗ ಮತ್ತೊಂದು ಚಿತ್ರಕ್ಕೆ ಓಕೆ ಎಂದಿದ್ದಾರೆ.
ಇತ್ತೀಚೆಗೆ ತಾನೇ ಜಡ್ಜ್`ಮೆಂಟ್ ಅನ್ನೋ ಸಿನಿಮಾ ಸೆಟ್ಟೇರಿದ್ದು ನೆನಪಿದೆ ತಾನೇ.. ರವಿಚಂದ್ರನ್ ಹೀರೋ ಆಗಿದ್ದರೆ, ಎದುರಾಗಿ ನಟಿಸುತ್ತಿದ್ದವರು ಧನ್ಯಾ ರಾಮ್ ಕುಮಾರ್. ದಿಗಂತ್ ಅವರಿಗೆ ಧನ್ಯಾ ನಾಯಕಿಯಾಗಿದ್ದರೆ, ರವಿಚಂದ್ರನ್ ಅವರಿಗೆ ನಾಯಕಿಯಾಗಿ ಮೇಘನಾ ಗಾಂವ್ಕರ್ ನಟಿಸುತ್ತಿದ್ದಾರೆ. ಲಕ್ಷ್ಮೀ ಗೋಪಾಲಸ್ವಾಮಿ, ಟಿ.ಎಸ್.ನಾಗಾಭರಣ, ಪ್ರಕಾಶ್ ಬೆಳವಾಡಿ, ರಂಗಾಯಣ ರಘು, ರೂಪ ರಾಯಪ್ಪ, ರಾಜೇಂದ್ರ ಕಾರಂತ್ ಹೀಗೆ ಬಹುದೊಡ್ಡ ತಾರಾಬಳಗವಿದೆ. ಇದೊಂದು ಲಿಗಲ್ ಸಿಸ್ಟಮ್ ಕುರಿತಾದ ಚಿತ್ರ. ಬೆಂಗಳೂರಿನಲ್ಲೇ ಚಿತ್ರೀಕರಣ ನಡೆಯಲಿದೆ.
ಈ ಹಿಂದೆ ಆಕ್ಸಿಡೆಂಟ್, ಲಾಸ್ಟ್ ಬಸ್, ಅಮೃತ ಅಪಾರ್ಟ್ಮೆಂಟ್ಸ್ ಚಿತ್ರಗಳನ್ನು ನಿರ್ಮಾಣ ಮಾಡಿದ್ದ ಸಂಸ್ಥೆ ಜಿ 9 ಕಮ್ಯುನಿಕೇಷನ್ಸ್ ಮೀಡಿಯಾ & ಎಂಟರ್‍ಟೈನ್‍ಮೆಂಟ್. ಆ ಬ್ಯಾನರ್ ಮೂಲಕವೇ ನಿರ್ದೇಶಕ ಗುರುರಾಜ್ ಬಿ. ಕುಲಕರ್ಣಿ ಈ ಚಿತ್ರಕ್ಕೆ ನಿರ್ದೇಶಕಾಗಿದ್ದಾರೆ.
ರವಿಚಂದ್ರನ್ ಎದುರು ನಟಿಸುವಾಗ ನನಗೆ ಪದೇ ಪದೇ ನೆನಪಾಗುತ್ತಿದ್ದುದು ರಾಮಾಚಾರಿ ಚಿತ್ರದ ಯಾರಿವಳು.. ಯಾರಿವಳು.. ಹಾಡು. ನಮ್ಮ ಚಿತ್ರರಂಗದ ಲೆಜೆಂಡ್ ಎದುರು ನಟಿಸುತ್ತಿದ್ದೇನೆ ಎನ್ನುವುದೆ ಒಂದು ಥ್ರಿಲ್. ಅವರ ಚಿತ್ರಗಳನ್ನು ನೋಡುತ್ತಾ ಬೆಳೆದವಳು ನಾನು, ಅವರ ಜೊತೆ ತೆರೆ ಹಂಚಿಕೊಳ್ಳೋದು ಖುಷಿಯಲ್ಲವೇ ಎನ್ನುತ್ತಾರೆ ಮೇಘನಾ ಗಾಂವ್ಕರ್. ಶಿವಾಜಿ ಸುರತ್ಕಲ್ ಚಿತ್ರದಲ್ಲಿ ಡಿಸಿಪಿಯಾಗಿ ನಟಿಸಿದ್ದ ಮೇಘನಾ, ಈ ಚಿತ್ರದಲ್ಲಿ ಲೆಕ್ಚರರ್ ರೋಹಿಣಿಯಾಗಿ ನಟಿಸುತ್ತಿದ್ದಾರೆ.



