ಕಾಂತಾರ ನಂತರ ಮುಂದೇನು ಎಂಬ ಪ್ರಶ್ನೆಗೆ ರಿಷಬ್ ಶೆಟ್ಟಿ ಕಾಂತಾರ 2 ಉತ್ತರ ಕೊಡುತ್ತಿದ್ದಾರೆ. ಅದರ ಜೊತೆಯಲ್ಲಿಯೇ ನಿರ್ಮಾಪಕರಾಗಿಯೂ ಇನ್ನೊಂದು ಹೆಜ್ಜೆ ಮುಂದಿಟ್ಟಿರುವ ರಿಷಬ್ ಶೆಟ್ಟಿ ಲಾಫಿಂಗ್ ಬುದ್ದ ಸಿನಿಮಾಗೆ ಚಾಲನೆ ಕೊಟ್ಟಿದ್ದಾರೆ. ಈ ಚಿತ್ರಕ್ಕೆ ಹೀರೋ ರಿಷಬ್ ಶೆಟ್ಟಿ ಆತ್ಮೀಯ ಗೆಳೆಯ ಪ್ರಮೋದ್ ಶೆಟ್ಟಿ.
ಈ ಸಿನಿಮಾದಲ್ಲಿ ಮತ್ತೊಂದು ಮುಖ್ಯ ಪಾತ್ರವನ್ನು ತೇಜು ಬೆಳವಾಡಿ ಅವರು ನಿಭಾಯಿಸುತ್ತಿದ್ದಾರೆ. ಟೈಟಲ್ ಗಮನಿಸಿದರೆ, ಇದೊಂದು ಹಾಸ್ಯ ಸಿನಿಮಾ ಎಂಬುದು ಮೇಲ್ನೋಟಕ್ಕೆ ಗೊತ್ತಾಗುತ್ತದೆ. ‘ಲಾಫಿಂಗ್ ಬುದ್ದ’ ಸಿನಿಮಾಗೆ ಎಂ. ಭರತ್ ರಾಜ್ ನಿರ್ದೇಶನ ಮಾಡುತ್ತಿದ್ದಾರೆ. ಈಚೆಗೆ ಭದ್ರಾವತಿಯ ಚಂಡಿಕಾ ದುರ್ಗ ದೇವಸ್ಥಾನದಲ್ಲಿ ‘ಲಾಫಿಂಗ್ ಬುದ್ದ’ ಸಿನಿಮಾಗೆ ಚಾಲನೆ ಸಿಕ್ಕಿದೆ. ಚಿತ್ರದ ಬಹುಪಾಲು ಚಿತ್ರೀಕರಣ ಭದ್ರಾವತಿಯಲ್ಲಿ ನಡೆಯಲಿದ್ದು, ಹಾಡುಗಳಿಗೆ ವಿಷ್ಣು ವಿಜಯ್ ಸಂಗೀತ ನಿರ್ದೇಶನ ಮಾಡಲಿದ್ದಾರೆ.
ರಿಷಬ್ ಶೆಟ್ಟಿ ಮೊದಲು ನಿರ್ಮಾಪಕರಾಗಿದ್ದು ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ ಚಿತ್ರದ ಮೂಲಕ. ಅದಾದ ನಂತರ ವಿಭಿನ್ನ ಪ್ರಯೋಗವಾಗಿ ಕಥಾಸಂಗಮ ಮಾಡಿದ್ದರು. ನಂತರ ತಾವೇ ಹೀರೋ ಆಗಿದ್ದ ಹೀರೋ ಚಿತ್ರಕ್ಕೂ ನಿರ್ಮಾಕರಾಗಿದ್ದು. ಪೆದ್ರೋ ಮತ್ತು ಶಿವಮ್ಮ ಸಿನಿಮಾಗಳು ಕಮರ್ಷಿಯಲ್ ಆಚೆಗೆ ಸದ್ದು ಮಾಡಿದ್ದವು. ಇದರ ಜೊತೆಗೆ ಇನ್ನೂ ಒಂದೆರಡು ಸಿನಿಮಾಗಳನ್ನು ರಿಷಬ್ ನಿರ್ಮಾಣ ಮಾಡುತ್ತಿದ್ದು, ಈಗ ‘ಲಾಫಿಂಗ್ ಬುದ್ಧ’ ಕೂಡ ಸೇರ್ಪಡೆಗೊಂಡಿದೆ.



