ಅದು ಶಾಪವಾ.. ಗೊತ್ತಿಲ್ಲ. ಡಾ.ರಾಜ್ ಕುಟುಂಬದಲ್ಲಿ ಮೊದಲ ಚಿತ್ರದಲ್ಲೇ ಯಶಸ್ಸು ಸಿಕ್ಕವರ ಸಂಖ್ಯೆ ಹೆಚ್ಚು. ಡಾ.ರಾಜ್, ಶಿವಣ್ಣ, ಪುನೀತ್ ಎಲ್ಲರಿಗೂ ಮೊದಲ ಚಿತ್ರದಲ್ಲೇ ಯಶಸ್ಸು ಸಿಕ್ಕಿತ್ತು. ಆನಂದ್, ರಥಸಪ್ತಮಿ, ಮನ ಮೆಚ್ಚಿದ ಹುಡುಗಿ ಶಿವಣ್ಣರನ್ನು ಹ್ಯಾಟ್ರಿಕ್ ಹೀರೋ ಮಾಡಿದ್ದರೆ, ಪುನೀತ್ ಅವರಿಗೆ ಅಪ್ಪು, ಅಭಿ ಎಂಬ ಎರಡು ಸಕ್ಸಸ್ ಸಿಕ್ಕಿದ್ದವು. ರಾಘವೇಂದ್ರ ರಾಜಕುಮಾರ್ ಅವರಿಗೆ 2ನೇ ಚಿತ್ರದಲ್ಲಿ ಭರ್ಜರಿ ಹಿಟ್ ಸಿಕ್ಕಿತ್ತು. ಚಿರಂಜೀವಿ ಸುಧಾಕರ್ ಸೋಲಿನ ನಂತರ ಬಂದ ನಂಜುಂಡಿ ಕಲ್ಯಾಣ, ಗಜಪತಿ ಗರ್ವಭಂಗ ಇಂಡಸ್ಟ್ರಿ ಹಿಟ್ ಆಗಿದ್ದವು. ಆದರೆ, ಅಂತಹ ಯಶಸ್ಸು ಸಿಗದೇ ಇರುವುದು ವಿನಯ್ ರಾಜಕುಮಾರ್ ವಿಷಯದಲ್ಲಿ.
ಸಿದ್ಧಾರ್ಥ ಚಿತ್ರದ ಮೂಲಕ ಕಾಲಿಟ್ಟ ವಿನಯ್ ರಾಜ್`ಕುಮಾರ್ ಅವರಿಗೆ ಚಿತ್ರರಂಗದಲ್ಲಿ ಇನ್ನೂ ಶುಕ್ರದೆಸೆ ಆರಂಭವಾಗಿಲ್ಲ ಎಂದೇ ಹೇಳಬೇಕು. ವಿನಯ್ ಅವರ ಹಲವು ಚಿತ್ರಗಳು ಸುದ್ದಿಯಲ್ಲಿರುವುದು ನಿಜ. ವಿನಯ್ ಹೊಸ ಚಿತ್ರಗಳನ್ನು, ಹೊಸ ಪಾತ್ರಗಳನ್ನು ಒಪ್ಪಿಕೊಳ್ಳುತ್ತಿದ್ದಾರೆ. ಹೊಸ ಹೊಸ ಪ್ರಯೋಗಗಳಿಗೆ ತೆರೆದುಕೊಳ್ಳುತ್ತಿದ್ದಾರೆ. ಆದರೆ ಅವರ ಚಿತ್ರಗಳು ಶುರುವಾಗಿ ಬಿಡುಗಡೆಯಾವುದಕ್ಕೆ ನಿಧಾನವಾಗುತ್ತಿದೆ. ಗ್ರಾಮಾಯಣದ ಕಥೆಯೂ ಹಾಗೆಯೇ ಆಗಿದೆ.
ಸುಮಾರು ಮೂರ್ನಾಲ್ಕು ವರ್ಷಗಳ ಹಿಂದೆಯೇ ಶುರುವಾಗಿದ್ದ, ಬಹುತೇಕ ನಿಂತೇ ಹೋಗಿದ್ದ ಗ್ರಾಮಾಯಣಕ್ಕೆ ಈಗ ಮುಕ್ತಿ ಸಿಗುವಂಂತೆ ಕಾಣುತ್ತಿದೆ. ಲಹರಿ ಸಂಸ್ಥೆಯ ಮನೋಹರ್ ನಾಯ್ಡು ಹಾಗೂ ಶಿವಣ್ಣ ಆಪ್ತಬಳಗದ ಕೆ.ಪಿ.ಶ್ರೀಕಾಂತ್ ಸಿನಿಮಾವನ್ನು ಟೇಕಾಫ್ ಮಾಡುತ್ತಿದ್ದಾರೆ. ‘ಯುಐ’ ಸಿನಿಮಾದ ನಂತರ ಶ್ರಿಕಾಂತ್ ಮತ್ತು ಮನೋಹರ್ ನಾಯ್ಡು ನಿರ್ಮಾಣ ಮಾಡುತ್ತಿರುವ ಎರಡನೇ ಸಿನಿಮಾ ಇದಾಗಿದೆ.
ದೇವನೂರು ಚಂದ್ರು ನಿರ್ದೇಶನದ ‘ಗ್ರಾಮಾಯಣ’ ಸಿನಿಮಾ ಒಂದೇ ಒಂದು ಟೀಸರ್ನಿಂದ ಹಲವರ ಗಮನ ಸೆಳೆದಿತ್ತು. ಕೋವಿಡ್ನಿಂದ ಮತ್ತು ಹಲವು ಕಾರಣಗಳಿಂದ ಸಿನಿಮಾ ಅರ್ಧಕ್ಕೆ ನಿಂತು ಹೋಗಿತ್ತು. ಇದೀಗ ಹೊಸದಾಗಿ ಚಿತ್ರವನ್ನ ಶುರು ಮಾಡ್ತಿದ್ದಾರೆ. ಜೂನ್ 8ರಂದು ಈ ಸಿನಿಮಾದ ಮುಹೂರ್ತ ನಡೆಯಲಿದೆ. ಆರಂಭದಲ್ಲಿ ಬಿಡುಗಡೆಯಾಗಿದ್ದ ಚಿತ್ರದ ಟೀಸರ್, ನಿಜಕ್ಕೂ ಅದ್ಭುತವಾಗಿತ್ತು. ಬೇರೆಯದೇ ಫ್ಲೇವರ್ ಇತ್ತು. ವಿನಯ್ ರಾಜಕುಮಾರ್ ವ್ಹಾವ್ ಎನ್ನುವಂತೆ ಕಾಣಿಸಿದ್ದರು. ಟೇಕಿಂಗ್ಸ್ ಸಖತ್ತಾಗಿಯೇ ಇತ್ತು. ಈಗ ನಿರ್ಮಾಪಕರು ಬದಲಾಗಿದ್ದಾರೆ. 8ನೇ ತಾರೀಕು ಮುಹೂರ್ತ.
ವಿನಯ್ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದು 2015ರಲ್ಲಿ. ಡಾ.ರಾಜ್ ಅವರದ್ದೇ ಬ್ಯಾನರಿನ ಸಿನಿಮಾ ಸಿದ್ಧಾರ್ಥ. ಬಹುಶಃ ವಿನಯ್ ಅವರ ಸಿನಿಮಾಗಳಲ್ಲಿ ಶುರುವಾಗಿ ನಿಗದಿತ ಕಾಲಕ್ಕೆ ರಿಲೀಸ್ ಆದ ಏಕೈಕ ಸಿನಿಮಾ ಸಿದ್ಧಾರ್ಥ. ಅದಾದ ನಂತರ ರನ್ ಆಂಟನಿ, ಅನಂತು ವರ್ಸಸ್ ನುಸ್ರತ್ ಯಾವಾಗಲೋ ಶುರುವಾಗಿ, ಇನ್ಯಾವಾಗಲೋ ರಿಲೀಸ್ ಆದವು. ಇತ್ತೀಚೆಗೆ ರಿಲೀಸ್ ಆದ ಟೆನ್ ಚಿತ್ರವಂತೂ ಬಿಡಿ, ಬಂದಿದ್ದೂ ಗೊತ್ತಾಗಲಿಲ್ಲ, ಹೋಗಿದ್ದೂ ಗೊತ್ತಾಗಲಿಲ್ಲ. ಅಂದೊಂದಿತ್ತು ಕಾಲ ಹಾಗೂ ಪೆಪೆ ಚಿತ್ರಗಳು ಶುರುವಾಗಿವೆ. ಇಷ್ಟೊತ್ತಿಗೆ ರಿಲೀಸ ಆಗಬೇಕಿದ್ದ ಎರಡೂ ಚಿತ್ರಗಳು ಬಾಕ್ಸ್ ಬಿಟ್ಟು ಮೇಲೆದ್ದಿಲ್ಲ. ಗ್ರಾಮಾಯಣವೂ ಅಷ್ಟೆ, ಇದೀಗ ಇಬ್ಬರು ಪ್ರಭಾವಿ ನಿರ್ಮಾಪಕರು ಒಟ್ಟುಗೂಡಿ ಬಂದಿದ್ದಾರೆ. ಗ್ರಾಮಾಯಣದ ಮೂಲಕ ವಿನಯ್ ರಾಜಕುಮಾರ್ ಶಾಪಮುಕ್ತರಾಗುತ್ತಾರಾ.. ಅಭಿಮಾನಿಗಳ ನಿರೀಕ್ಷೆಯೂ ಅದೆ.



