ಶಕ್ತಿಧಾಮ. ನೂರಾರು ಅಬಲೆಯರಿಗೆ ಆಶ್ರಯ ನೀಡಿ, ಆ ಮಹಿಳೆಯರಿಗೆ ಹೊಸ ಜೀವನ ಕಲ್ಪಿಸುತ್ತಿರುವ ಮಹೋನ್ನತ ಸಂಸ್ಥೆ. ಆ ಶಕ್ತಿಧಾಮ ಸಂಸ್ಥೆಯ ಅಧ್ಯಕ್ಷೆ ಗೀತಾ ಶಿವರಾಜ್ ಕುಮಾರ್. ಪಾರ್ವತಮ್ಮ ರಾಜಕುಮಾರ್ ಅವರ ಕನಸು. ಆ ಶಕ್ತಿಧಾಮದ ಮೂಲಕ ಮೂಲಕ ಹೊಸಪೇಟೆಯ ಶಾಲೆಯನ್ನು ದತ್ತು ಪಡೆಯಲಾಗಿದೆ. ವಿಧಾನಸಭೆ ಚುನಾವಣೆ ಪ್ರಚಾರ ಮುಗಿಯುತ್ತಿದ್ದಂತೆಯೇ ಸುದ್ದಿಗದ್ದಲವಿಲ್ಲದೆ ಈ ದತ್ತು ಸ್ವೀಕಾರವೂ ನಡೆದಿದೆ. ಇದೆಲ್ಲ ಆರಂಭವಾಗಿದ್ದು ಜನವರಿಯಲ್ಲಿ.
ವರ್ಷದ ಆರಂಭದಲ್ಲಿ ಗೀತಾ ಶಿವ ರಾಜ್ ಕುಮಾರ್ ಮೊದಲ ಬಾರಿ ನಿರ್ಮಾಣ ಮಾಡಿದ್ದ ವೇದ ಚಿತ್ರದ ಪ್ರಚಾರದ ಸಂದರ್ಭದಲ್ಲಿ ಹೊಸಪೇಟೆಗೆ ಬಂದಿದ್ದರು. ಆ ವೇಳೆ ಗೀತಾ ಶಿವ ರಾಜ್ ಕುಮಾರ್ ಹಾಗೂ ಶಿವಣ್ಣ ದಂಪತಿ ಅಲ್ಲಿನ ಒಂದು ಶಾಲೆಗೆ ನೆರವು ನೀಡುವ ಭರವಸೆ ನೀಡಿದ್ದರು. ಶಾಲೆಯನ್ನು ಸಂಪೂರ್ಣವಾಗಿ ಅಭಿವೃದ್ಧಿ ಮಾಡುತ್ತೇವೆ. ಸಿನಿಮಾದ ಪ್ರಚಾರ, ಇನ್ನಿತರೆ ಕೆಲಸಗಳೆಲ್ಲ ಮುಗಿಯಲಿ, ಶಾಲೆಯನ್ನು ದತ್ತು ತೆಗೆದುಕೊಳ್ಳುತ್ತೇವೆ ಎಂದಿದ್ದರು. ಉಳಿದದ್ದು ನನಗೆ ಗೊತ್ತಾಗಲ್ಲ. ಗೀತಾ ಅವರು ನೋಡಿಕೊಳ್ತಾರೆ. ಅವರಿಗೆ ಅನುಭವವಿದೆ ಎಂದು ವೇದಿಕೆಯಲ್ಲಿಯೇ ಹೇಳಿದ್ದರು ಶಿವಣ್ಣ.
ಶಿವಣ್ಣ ಮಾತು ತಪ್ಪಿಲ್ಲ. ಗೀತಾ ಶಿವ ರಾಜ್ ಕುಮಾರ್ ಹೊಸಪೇಟೆಯ ಇಂಗಳಗಿ ಗ್ರಾಮದ ಅನ್ನಪೂರ್ಣೇಶ್ವರಿ ವಿದ್ಯಾಪೀಠದ ಶ್ರೀ ಅನ್ನಪೂರ್ಣೇಶ್ವರಿ ಬಡ ಮಕ್ಕಳ ಉಚಿತ ಊಟ ಮತ್ತು ವಸತಿ ಸಹಿತ ಪ್ರೌಢ ಶಾಲೆಯನ್ನು ದತ್ತು ಪಡೆದಿದ್ದಾರೆ. ಶಿವರಾಜ್ಕುಮಾರ್ ಅವರೊಂದಿಗೆ ಮತ್ತೊಮ್ಮೆ ಇಲ್ಲಿಗೆ ಭೇಟಿ ನೀಡಲಿದ್ದು, ಮೈಸೂರಿನ ಶಕ್ತಿಧಾಮಕ್ಕೆ ದಿಗಂಬರ ರಾಜಾ ಭಾರತಿ ಸ್ವಾಮೀಜಿ ಮತ್ತಿತರ ಪ್ರಮುಖರನ್ನು ಆಹ್ವಾನಿಸಿ, ವಿದ್ಯಾಪೀಠದ ಸಮಗ್ರ ಅಭಿವೃದ್ಧಿಗೆ ಅಗತ್ಯ ರೂಪರೇಷ ಸಿದ್ಧಗೊಳಿಸಲಾಗುವುದು. ಆ ಮೂಲಕ ಇದನ್ನು ಉತ್ತರ ಕನಾಟಕದ ಭಕ್ತಿಧಾಮವನ್ನಾಗಿಸಲು ನೆರವಾಗುವುದಾಗಿ ಗೀತಾ ಭರವಸೆ ನೀಡಿದ್ದಾರೆ. ಶಕ್ತಿಧಾಮದ ನಿರ್ದೇಶಕಿ ಮಂಜುಳಾ, ನಿರ್ಮಾಪಕ ಕೆ ಪಿ ಶ್ರೀಕಾಂತ, ಪತ್ರಕರ್ತ ಸತೀಶ ಬಿಲ್ಲಾಡಿ, ಸ್ಥಳೀಯರಾದ ಜೆ ಎನ್ ಪರಶುರಾಮ, ಮಂಜನಾಥ ತಾಳೂರು, ಜ್ಞಾನೇಶ, ಜಿ ಭರಮನಗೌಡ, ಹೆಗ್ಡಾಳ ಮತ್ತಿತರರು ಇದ್ದು ಮುಂದಿನ ಹೆಜ್ಜೆ ಏನು ಎಂಬುದನ್ನು ತೀರ್ಮಾನಿಸಲಿದ್ದಾರೆ.



