ಗೌರಿ ಲಂಕೇಶ್ ಹತ್ಯೆ ಪ್ರಕರಣ 2017ರಲ್ಲಿ ದೇಶಾದ್ಯಂತ ಸುದ್ದಿ ಮಾಡಿತ್ತು. ಪತ್ರಕರ್ತೆ ಹಾಗೂ ಸಾಮಾಜಿಕ ಹೋರಾಟಗಾರ್ತಿಯಾಗಿದ್ದ ಗೌರಿ, 2017ರಲ್ಲಿ ದುಷ್ಕರ್ಮಿಗಳಿಂದ ಮನೆಯ ಮುಂದೆಯೇ ಕೊಲೆಯಾಗಿದ್ದರು. ಕೊಲೆಯ ಆರೋಪಿಗಳು ಪತ್ತೆಯಾಗಿದ್ದು, ಗೌರಿ ಹತ್ಯೆಯ ತನಿಖೆಯೇ ವಿಭಿನ್ನ. ಸಣ್ಣ ಕ್ಲೂ ಕೂಡಾ ಸಿಕ್ಕದೇ ಇದ್ದ ಪ್ರಕರಣದಲ್ಲಿ ಕೊಲೆಗಾರರನ್ನು ಬೆನ್ನು ಹತ್ತಿ ಬೇಟೆಯಾಡಿದ ಬೆಂಗಳೂರು ಪೊಲೀಸರ ಕಾರ್ಯಕ್ಷಮತೆಗೆ ಇಡೀ ದೇಶ ಬೆನ್ನು ತಟ್ಟಿತ್ತು. ಗೌರಿ ಲಂಕೇಶ್ ಅವರ ಹತ್ಯೆ ಪ್ರಕರಣವನ್ನೇ ಇಟ್ಟುಕೊಂಡು ಸಾಕ್ಷ್ಯ ಚಿತ್ರ ನಿರ್ಮಾಣ ಮಾಡಿದ್ದರು ಸೋದರಿ ಕವಿತಾ ಲಂಕೇಶ್.
ಗೌರಿ ಅವರ ಲೈಫ್ ಮತ್ತು ಹೋರಾಟಗಳ ಕಥೆಯೂ ಇರುವ ಗೌರಿ ಸಾಕ್ಷ್ಯಚಿತ್ರಕ್ಕೆ ದಕ್ಷಿಣ ಏಷ್ಯಾದ ಚಲನಚಿತ್ರೋತ್ಸವ ಪ್ರಶಸ್ತಿ ಲಭಿಸಿದೆ. ಮಾಂಟ್ರಿಯಲ್‍ನಲ್ಲಿ ನಡೆಯುತ್ತಿರುವ ಚಿತ್ರೋತ್ಸವದಲ್ಲಿ ಗೌರಿ ಸಾಕ್ಷ್ಯಚಿತ್ರ, ಅತ್ಯುತ್ತಮ ಸುದೀರ್ಘ ಸಾಕ್ಷ್ಯಚಿತ್ರ ಪ್ರಶಸ್ತಿ ಪಡೆದಿದೆ. ಅಮ್‍ಸ್ಟರ್‍ಡ್ಯಾಂನ ಫ್ರೀ ಪ್ರೆಸ್ ಅನ್‍ಲಿಮಿಟೆಡ್ ಸಂಸ್ಥೆ ಗೌರಿ ಸಾಕ್ಷ್ಯಚಿತ್ರ ನಿರ್ಮಾಣಕ್ಕೆ ಬಂಡವಾಳ ಹೂಡಿತ್ತು. ವೃತ್ತಿಪರ ಸೇವೆಯ ಹಿಂಸಾಚಾರಕ್ಕೆ ಒಳಗಾಗಿ ಪ್ರಾಣ ಕಳೆದುಕೊಂಡವರ ಬದುಕನ್ನು ಸಾಕ್ಷ್ಯಚಿತ್ರ ಮಾಡಲು ಮುಂದಾದಾಗ ಆ ಪಟ್ಟಿಯಲ್ಲಿ ಗೌರಿಯವರ ಹೆಸರೂ ಇತ್ತು. ಈ ಸಾಕ್ಷ್ಯಚಿತ್ರಕ್ಕೆ ಅಂತಾರಾಷ್ಟ್ರೀಯ ಮನ್ನಣೆ ಸಿಕ್ಕಿದೆ.



