ಎಲ್ಲವೂ ಫಸ್ಟ್ ಫಸ್ಟ್ ಫಸ್ಟ್. ಇದು ಆರ್.ಆರ್.ಆರ್. ಬರೆದ ದಾಖಲೆ. ಆಸ್ಕರ್ ಪ್ರಶಸ್ತಿ ಭಾರತೀಯರಿಗೆ ಹೊಸದೇನಲ್ಲ. ಆದರೆ ಯಾವ ಭಾರತೀಯ ಚಿತ್ರವೂ, ತಂತ್ರಜ್ಞರೂ ಕೂಡಾ ಭಾರತೀಯ ಚಿತ್ರಕ್ಕೇ ಆಸ್ಕರ್ ಪಡೆದಿರಲಿಲ್ಲ. ಇದೂವರೆಗೆ ಆಸ್ಕರ್ ಪಡೆದವರೆಲ್ಲ ಒಂದೋ ಜೀವಮಾನ ಸಾಧನೆಗಾಗಿ ಪ್ರಶಸ್ತಿ ಪಡೆದ ಸಾಧಕರು. ಇಲ್ಲವೇ ಹಾಲಿವುಡ್ ಚಿತ್ರಗಳಲ್ಲಿ ಕೆಲಸ ಮಾಡಿ ಪ್ರಶಸ್ತಿ ಪಡೆದವರು. ಆದರೆ ಈ ಎಲ್ಲವನ್ನೂ ಹಿಂದಿಕ್ಕಿ ನಾಟು ನಾಟು ಹಾಡಿಗೆ ಆಸ್ಕರ್ ಪ್ರಶಸ್ತಿ ಲಭಿಸಿದೆ. ಆಸ್ಕರ್ ಪ್ರಶಸ್ತಿ ವೇದಿಕೆಯಲ್ಲಿ ನಿರೂಪಣೆ ಮಾಡುತ್ತಿದ್ದ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಹೆಮ್ಮೆಯಿಂದ ಪ್ರಶಸ್ತಿ ಘೋಷಿಸಿದರು. ಬೆಸ್ಟ್ ಒರಿಜಿನಲ್ ಸಾಂಗ್ ಪ್ರಶಸ್ತಿ ಪಡೆಯುವ ಮೂಲಕ ಆರ್.ಆರ್.ಆರ್. ಹೊಸ ಇತಿಹಾಸ ಸೃಷ್ಟಿಸಿದೆ. ಈ ಪ್ರಶಸ್ತಿ ಪಡೆದ ಮೊದಲ ಭಾರತೀಯ ಚಿತ್ರ ಆರ್.ಆರ್.ಆರ್. ಜೀವಮಾನ ಸಾಧನೆ ಪಡೆದವರಿದ್ದರೂ, ಭಾರತೀಯ ಚಿತ್ರವೊಂದು ಈ ಮಟ್ಟದಲ್ಲಿ ಸಾಧನೆ ಮಾಡಿ, ಭಾರತೀಯರೇ ನಿರ್ಮಿಸಿದ್ದ ಚಿತ್ರವೊಂದು ಆಸ್ಕರ್ ಪಡೆದಿದ್ದು ಇದೇ ಮೊದಲು.
ರಾಜಮೌಳಿ ನಿರ್ದೇಶನದ ಆರ್.ಆರ್.ಆರ್ ಚಿತ್ರಕ್ಕೆ ಎಂ.ಎಂ.ಕೀರವಾಣಿ ಸಂಗೀತ ನಿರ್ದೇಶನ ಮಾಡಿದ್ದರು. ರಾಮ್ ಚರಣ್ ಮತ್ತು ಜ್ಯೂ.ಎನ್.ಟಿ.ಆರ್. ನೃತ್ಯದಲ್ಲಿ ನಾಟು ನಾಟು ಸಂಚಲನ ಮೂಡಿಸಿತ್ತು. ಚಂದ್ರಭೋಸ್ ಸಾಹಿತ್ಯ ಬರೆದಿದ್ದರು. ಗೋಲ್ಡನ್ ಗ್ಲೋಬ್ ಮತ್ತು ಹಾಲಿವುಡ್ ಕ್ರಿಟಿಕ್ಸ್ ಪ್ರಶಸ್ತಿ ಬಂದಾಗಲೇ ನಾಟು ನಾಟು ಹಾಡಿಗೆ ಈ ಬಾರಿ ಪ್ರಶಸ್ತಿ ಲಭಿಸಲಿದೆ ಎಂಬ ನಿರೀಕ್ಷೆಯಿತ್ತಾದರೂ, ಹಾಲಿವುಡ್ ಲಾಬಿ ಏನೋ ಎಂಥೋ ಎಂದುಕೊಂಡಿದ್ದವರೇ ಎಲ್ಲ. ಆದರೆ ಈ ಎಲ್ಲವನ್ನೂ ಮೀರಿ ಆಸ್ಕರ್ ಪ್ರಶಸ್ತಿ ಗೆದ್ದಿದೆ. ಸಂಗೀತ ನಿರ್ದೇಶಕ ಎಂ.ಎಂ.ಕೀರವಾಣಿ ಆಸ್ಕರ್ ಪ್ರಶಸ್ತಿ ಸ್ವೀಕರಿಸಿದ್ದಾರೆ.
'Naatu Naatu' from 'RRR' wins the Oscar for Best Original Song! #Oscars #Oscars95 pic.twitter.com/tLDCh6zwmn
— The Academy (@TheAcademy) March 13, 2023
ಆಸ್ಕರ್ ಪ್ರಶಸ್ತಿ ಪುರಸ್ಕøತ ಚಿತ್ರಕ್ಕೆ ಇಡೀ ಭಾರತೀಯ ಚಿತ್ರರಂಗವೇ ಆರ್.ಆರ್.ಆರ್. ತಂಡವನ್ನು ಹಾಡಿ ಹೊಗಳುತ್ತಿದೆ. ದೇಶದ ಪ್ರಧಾನಿ ಸೇರಿದಂತೆ ಕೋಟ್ಯಂತರ ಅಭಿಮಾನಿಗಳು ಹಾಗೂ ಚಿತ್ರರಂಗದ ಗಣ್ಯರು ರಾಜಮೌಳಿ ಹಾಗೂ ಕೀರವಾಣಿ ಅವರಿಗೆ ಅಭಿನಂದನೆ ಸಲ್ಲಿಸುತ್ತಿದ್ದಾರೆ.
ಈ ಹಿಂದೆ ಆಸ್ಕರ್ ಪಡೆದ ಭಾರತೀಯರಲ್ಲಿ ಸತ್ಯಜಿತೆ ರೇ ಪ್ರಮುಖರು. ಸತ್ಯಜಿತ್ ರೇ ಅವರನ್ನು ಭಾರತೀಯ ಚಿತ್ರರಂಗ ಹೆಮ್ಮೆಯಿಂದ ಗೌರವಿಸುತ್ತದೆ. ರೇ ಅವರಿಗೆ 1992ರಲ್ಲಿ ಗೌರವಪೂರ್ವಕವಾಗಿ ಜೀವಮಾನ ಸಾಧನೆಗಾಗಿ ಆಸ್ಕರ್ ನೀಡಿತ್ತು. ಉಳಿದಂತೆ 1983ರಲ್ಲಿ ಭಾನು ಅತೈಯಾ (ಹಾಲಿವುಡ್ ನಿರ್ಮಾಣದ ಗಾಂಧಿ ಸಿನಿಮಾ) ಕಾಸ್ಟ್ಯೂಮ್ ಡಿಸೈನ್`ಗಾಗಿ, ರಸೂಲ್ ಪೂಕುಟ್ಟಿ, ಎ.ಆರ್.ರೆಹಮಾನ್, ಗುಲ್ಜಾರ್ ಸ್ಲಂ ಡಾಗ್ ಮಿಲಿಯನೇರ್ ಚಿತ್ರದ ಜೈ ಹಾಡಿಗಾಗಿ (ಇದೂ ಕೂಡಾ ಹಾಲಿವುಡ್ ನಿರ್ಮಾಣದ ಸಿನಿಮಾ) ಪಡೆದಿದ್ದರು. ಆದರೆ ಭಾರತೀಯ ಚಿತ್ರವೊಂದು, ಭಾರತೀಯರೇ ನಿರ್ಮಾಣ ಮಾಡಿದ್ದ ಚಿತ್ರವೊಂದು ಪ್ರತ್ಯೇಕವಾಗಿ ಆಸ್ಕರ್ ಪ್ರಶಸ್ತಿ ಪಡೆದಿದ್ದು ಇದೇ ಮೊದಲು. ಇದೇ ಪ್ರಥಮ.



